ಅಪ್ರಾಪ್ತ ವಯಸ್ಸಿನ 70 ಬಾಲಕಿಯರಿಗೆ ಆನ್ಲೈನ್ನಲ್ಲಿ ಲೈಂಗಿಕ ಕಿರುಕುಳ, ಬ್ಲ್ಯಾಕ್ಮೇಲ್: ಭಾರತೀಯ ಮೂಲದ ವಿದ್ಯಾರ್ಥಿಗೆ ಬ್ರಿಟನ್ನಲ್ಲಿ 30 ವರ್ಷ ಜೈಲು ಶಿಕ್ಷೆ
ಬಿಲಾಲ್ ಕಾಜಿ (Photo: TOI)
ಲಂಡನ್: ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಗುರಿಯಾಗಿಸಿಕೊಂಡು ವಂಚನೆ, ಲೈಂಗಿಕ ಶೋಷಣೆ ಹಾಗೂ ಬ್ಲ್ಯಾಕ್ಮೇಲ್ ನಡೆಸಿದ ಪ್ರಕರಣದಲ್ಲಿ ಭಾರತೀಯ ಮೂಲದ 27 ವರ್ಷದ ವಿದ್ಯಾರ್ಥಿ ಬಿಲಾಲ್ ಕಾಜಿಗೆ ಬ್ರಿಟನ್ನ ನ್ಯಾಯಾಲಯ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಬ್ರಿಟನ್ನ ಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಬಿಲಾಲ್ ಕಾಜಿ, ಕನಿಷ್ಠ 70 ಅಪ್ರಾಪ್ತ ಬಾಲಕಿಯರನ್ನು ಆನ್ಲೈನ್ ಮೂಲಕ ಬಲೆಗೆ ಬೀಳಿಸಿ, ಅವರಿಂದ ಲೈಂಗಿಕವಾಗಿ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಪಡೆದು ಬೆದರಿಕೆ ಹಾಕುತ್ತಿದ್ದ ಆರೋಪ ಎದುರಿಸುತ್ತಿದ್ದನು.
37 ಅಪರಾಧ ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ನವೆಂಬರ್ 13ರಂದು ಚೆಸ್ಟರ್ ಕ್ರೌನ್ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
14 ವರ್ಷದ ಬಾಲಕನಂತೆ ನಟಿಸಿ ವಂಚನೆ
2021ರ ಆಗಸ್ಟ್ನಿಂದ 2025ರ ಆಗಸ್ಟ್ವರೆಗೆ Snapchat, Roblox ಮತ್ತು Wink ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ಹಾಗೂ ಗೇಮಿಂಗ್ ವೇದಿಕೆಗಳ ಮೂಲಕ ಬಾಲಕಿಯರನ್ನು ಗುರಿಯಾಗಿಸಿಕೊಂಡಿದ್ದನು.
ತಾನು 14 ವರ್ಷದ ಬ್ರಿಟಿಷ್ ಬಾಲಕ ‘ರೀಸ್’ (Reece) ಎಂದು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ, ಮತ್ತೊಬ್ಬ ಅಪರಿಚಿತ ಬಾಲಕನ ಫೋಟೋಗಳನ್ನು ಬಳಸಿಕೊಂಡು ಬಾಲಕಿಯರ ವಿಶ್ವಾಸ ಗಳಿಸುತ್ತಿದ್ದನು.
ನಂತರ ಅವರೊಂದಿಗೆ ಪ್ರೇಮ ಸಂಬಂಧವಿರುವಂತೆ ನಂಬಿಸಿ, ಕ್ರಮೇಣ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಒತ್ತಾಯಿಸುತ್ತಿದ್ದನು.
ಬಾಲಕಿಯರು ನಿರಾಕರಿಸಿದಾಗ, ಈಗಾಗಲೇ ಕಳುಹಿಸಿರುವ ಫೋಟೋ ಮತ್ತು ವಿಡಿಯೋಗಳನ್ನು ಅವರ ಕುಟುಂಬದವರು ಹಾಗೂ ಸ್ನೇಹಿತರಿಗೆ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದನು.
ಕೆಲವು ಪ್ರಕರಣಗಳಲ್ಲಿ ಬಾಲಕಿಯರ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿ, ಅವರ ಖಾಸಗಿ ಚಿತ್ರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಲ್ಲದೆ, ಆನ್ಲೈನ್ನಲ್ಲಿಯೂ ಪ್ರಕಟಿಸಿದ್ದನು.
2021ರಲ್ಲಿ 13 ವರ್ಷದ ಬಾಲಕಿಯೊಬ್ಬಳು ಈತನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣದ ತನಿಖೆ ಆರಂಭವಾಯಿತು. ತಾನು ತನ್ನ ವಯಸ್ಸಿನ ಬಾಲಕನೊಂದಿಗೆ ಮಾತನಾಡುತ್ತಿದ್ದೇನೆ ಎಂದು ನಂಬಿದ್ದ ಆಕೆ, Snapchat ಮೂಲಕ ಬಿಲಾಲ್ನ ಸಂಪರ್ಕಕ್ಕೆ ಬಂದಿದ್ದಳು.
ಆದರೆ ಮಾತುಕತೆ ಕ್ರಮೇಣ ಲೈಂಗಿಕ ಸ್ವರೂಪ ಪಡೆದುಕೊಂಡಿತ್ತು. ಆಕೆ ಫೋಟೋಗಳನ್ನು ಕಳುಹಿಸುವುದನ್ನು ನಿಲ್ಲಿಸಲು ಬಯಸಿದಾಗ, ಬಿಲಾಲ್ ಆಕೆಯನ್ನು ನಿಂದಿಸಿ, ಆಕೆ ತನ್ನ ಸ್ವತ್ತು ಎಂಬ ರೀತಿಯಲ್ಲಿ ವರ್ತಿಸಿದ್ದನು.
ಈ ಹಿಂದೆ ಕಳುಹಿಸಿದ್ದ ಚಿತ್ರಗಳನ್ನು ಸ್ನೇಹಿತರಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ, ಆಕೆ ಭಯದಿಂದ ಮತ್ತೆ ಚಿತ್ರಗಳನ್ನು ಕಳುಹಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.
ಬಳಿಕ ಆಕೆಯ Snapchat ಖಾತೆಯನ್ನು ಹ್ಯಾಕ್ ಮಾಡಿ, ಖಾಸಗಿ ಚಿತ್ರಗಳನ್ನು ಸ್ನೇಹಿತರಿಗೆ ಹಂಚಿಕೊಳ್ಳಲಾಗಿತ್ತು. ಇದರಿಂದಾಗಿ ಆಕೆ ಪೊಲೀಸರನ್ನು ಸಂಪರ್ಕಿಸಿದ್ದಳು.
ನ್ಯಾಯಾಧೀಶ ಸ್ಟೀಫನ್ ಎವರೆಟ್ ಶಿಕ್ಷೆ ಪ್ರಕಟಿಸುವ ವೇಳೆ ಬಿಲಾಲ್ ಕಾಜಿಯನ್ನು ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿನ ಭದ್ರತಾ ಲೋಪಗಳನ್ನು ದುರುಪಯೋಗಪಡಿಸಿಕೊಂಡು, ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿ ಅವರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದಾನೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಈತನ ಕೃತ್ಯಗಳಿಂದ ಬಾಲಕಿಯರ ಬದುಕಿನ ಮೇಲೆ ಗಂಭೀರ ಮತ್ತು ದೀರ್ಘಕಾಲೀನ ಮಾನಸಿಕ ಪರಿಣಾಮ ಉಂಟಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬಿಲಾಲ್ ಕಾಜಿ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕವಷ್ಟೇ ಪೆರೋಲ್ಗೆ ಅರ್ಹನಾಗಲಿದ್ದಾನೆ. ಅಲ್ಲದೆ, ಆತನ ಹೆಸರನ್ನು ಜೀವಿತಾವಧಿಯವರೆಗೆ ಲೈಂಗಿಕ ಅಪರಾಧಿಗಳ ನೋಂದಣಿಯಲ್ಲಿ ಇರಿಸಲಾಗುತ್ತದೆ.