ಭಾರತದ FCRA ತಿದ್ದುಪಡಿಗಳು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿವೆ: ಅಮೆರಿಕ ಸಂಸದ ರಿಲೆ ಮೂರ್ ಆರೋಪ
ರಿಲೆ ಮೂರ್ Photo: x.com/aajtak
ವಾಷಿಂಗ್ಟನ್: ಭಾರತದ ವಿದೇಶಿ ದೇಣಿಗೆ ಕಾಯ್ದೆ (FCRA) ಗೆ ಪ್ರಸ್ತಾಪಿಸಲಾದ ತಿದ್ದುಪಡಿಗಳನ್ನು ಅಮೇರಿಕಾದ ಸಂಸದ ರಿಲೆ ಮೂರ್ ಕಟುವಾಗಿ ಟೀಕಿಸಿದ್ದು, ಇದು ಚರ್ಚ್‌ಗಳು ಮತ್ತು ಧಾರ್ಮಿಕ ದತ್ತಿ ಸಂಸ್ಥೆಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಉದ್ದೇಶಿತ ಬದಲಾವಣೆಗಳು ಕ್ರಿಶ್ಚಿಯನ್ನರ ಮೇಲಿನ ಸ್ಪಷ್ಟ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ರಿಪಬ್ಲಿಕನ್ ಪಕ್ಷದ ಸದಸ್ಯರೂ ಆಗಿರುವ ಮೂರ್, ಇದು ಚರ್ಚ್‌ಗಳು ಮತ್ತು ಧಾರ್ಮಿಕ ದತ್ತಿ ಸಂಸ್ಥೆಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ವಿಚಾರವು ಭಾರತ ಮತ್ತು ಅಮೆರಿಕದ ಬಾಂಧವ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.
ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಗೆ ಉದ್ದೇಶಿತ ಬದಲಾವಣೆಗಳು ಕ್ರಿಶ್ಚಿಯನ್ನರ ಮೇಲಿನ ಸ್ಪಷ್ಟ ದಾಳಿಯಾಗಿದೆ. ಪ್ರಸ್ತುತ ರೂಪದಲ್ಲಿರುವ ಈ ಮಸೂದೆಯೊಂದಿಗೆ ಮುಂದುವರಿಯದಂತೆ ವೆಸ್ಟ್ ವರ್ಜೀನಿಯಾದ ರಿಪಬ್ಲಿಕನ್ ಕಾಂಗ್ರೆಸ್ ಸದಸ್ಯರಾಗಿರುವ ಮೂರ್ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
"ಸೇಂಟ್ ಥಾಮಸ್ ಮಲಬಾರ್ ಕರಾವಳಿಗೆ ಆಗಮಿಸಿದಾಗ ಆರಂಭವಾದ ಕ್ರಿಶ್ಚಿಯನ್ ಧರ್ಮದ ಭಾರತದೊಂದಿಗಿನ ನಂಟು ಸುದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ, ಈ ಸುದೀರ್ಘ ಕ್ರಿಶ್ಚಿಯನ್ ಇತಿಹಾಸದ ಹೊರತಾಗಿಯೂ, ಚರ್ಚ್ ಗಳು ಮತ್ತು ಧಾರ್ಮಿಕ ದತ್ತಿ ಸಂಸ್ಥೆಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಅನುಮತಿಸುವಂತೆ ಭಾರತದ ಸಂಸತ್ತು ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ (FCRA) ನಿಯಮಗಳನ್ನು ತಿದ್ದುಪಡಿ ಮಾಡಲು ಪರಿಗಣಿಸುತ್ತಿದೆ" ಎಂದು ಮೂರ್ ಬರೆದಿದ್ದಾರೆ.
2026 ರ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆಯು ನಿಯೋಜಿತ ಪ್ರಾಧಿಕಾರವನ್ನು ರಚಿಸಲು ಪ್ರಸ್ತಾಪಿಸುತ್ತದೆ. ಯಾವುದೇ ಸಂಸ್ಥೆಯ FCRA ನೋಂದಣಿಯನ್ನು ರದ್ದುಗೊಳಿಸಿದರೆ, ಅಥವಾ ನವೀಕರಿಸದೆ ರದ್ದಾದರೆ, ವಿದೇಶಿ ದೇಣಿಗೆ ಮತ್ತು ಆ ಹಣವನ್ನು ಬಳಸಿ ರಚಿಸಲಾದ ಆಸ್ತಿಗಳ ನಿರ್ವಹಣೆಯನ್ನು ಈ ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಳ್ಳಲಿದೆ.