Srilanka | ಧಾರಾಕಾರ ಮಳೆಗೆ ಪ್ರವಾಹ, ಭೂಕುಸಿತ: 7 ಮಂದಿ ಮೃತ್ಯು, 3,500 ಜನರ ಸ್ಥಳಾಂತರ
Photo: x.com/TheDailyPioneer
ಕೊಲಂಬೊ : ಶ್ರೀಲಂಕಾದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭೀಕರ ಭೂಕುಸಿತ ಮತ್ತು ಹಠಾತ್ ಪ್ರವಾಹದಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಇದರಿಂದ ಪ್ರವಾಹ ಪೀಡಿತ ಮಧ್ಯ ಶ್ರೀಲಂಕಾದ ಗುಡ್ಡಗಾಡು ಪ್ರದೇಶಗಳಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ.
ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ 129 ಮನೆಗಳು ಹಾನಿಗೀಡಾಗಿದ್ದು, ಸುಮಾರು 3,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಅಪ್ಪಳಿಸಿದ ಡಿಟ್ವಾ ಚಂಡಮಾರುತದ ವಿನಾಶದಿಂದ ಇನ್ನೂ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ದೇಶದ ಪರ್ವತಮಯ ಚಹಾ-ಬೆಳೆಯುವ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದ್ದು, ಹೆಚ್ಚಿನ ಹಾನಿ ಸಂಭವಿಸಿದೆ. ಈ ಹಿಂದಿನ ಡಿಟ್ವಾ ಚಂಡಮಾರುತದಿಂದ 640 ಜನರು ಮೃತಪಟ್ಟಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರದ ವಿಪತ್ತು ನಿರ್ವಹಣಾ ಕೇಂದ್ರದ ವಕ್ತಾರ ಪ್ರದೀಪ್ ಕೊಡಿಪ್ಪಿಲಿ, ಮಧ್ಯ ಪ್ರಾಂತ್ಯದಲ್ಲಿ ಎರಡು ಮನೆಗಳ ಮೇಲೆ ಮಣ್ಣು ಕುಸಿದು ಐವರು ಸಾವನ್ನಪ್ಪಿದ್ದಾರೆ ಮತ್ತು ಪ್ರವಾಹದಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಪ್ರವಾಹದಿಂದಾಗಿ 129 ಮನೆಗಳಿಗೆ ಹಾನಿಯಾಗಿದೆ ಮತ್ತು ಸುಮಾರು 3,500 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ನೌಕಾಪಡೆ ಮತ್ತು ಸೇನಾ ತುಕಡಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಮುಳುಗಡೆಯಾದ ಬೀದಿಗಳಲ್ಲಿ ಸೈನಿಕರು ನಡೆದುಕೊಂಡು ಹೋಗಿ ಸಂತ್ರಸ್ತ ಕುಟುಂಬಗಳನ್ನು ರಕ್ಷಿಸುತ್ತಿರುವ ದೃಶ್ಯಗಳನ್ನು ಸ್ಥಳೀಯ ಸುದ್ದಿ ವಾಹಿನಿ ಹಿರೂ ಟಿವಿ ಪ್ರಸಾರ ಮಾಡಿದೆ.
ಬಾಧಿತ ಜಿಲ್ಲೆಗಳ ಹವಾಮಾನದ ಪರಿಸ್ಥಿತಿಯನ್ನು ಅವಲಂಬಿಸಿ ಶಾಲೆ ಆರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ನುವಾರಾ ಎಲಿಯಾ ಮತ್ತು ಬದುಲ್ಲಾ ಜಿಲ್ಲೆಗಳನ್ನು ಒಳಗೊಂಡಿರುವ ಮಧ್ಯಶ್ರೀಲಂಕಾ ಪ್ರದೇಶವು ಕಡಿದಾದ ಭೂಪ್ರದೇಶದಲ್ಲಿದ್ದು, ಮುಂಗಾರು ಹವಾಮಾನದ ಸಮಯದಲ್ಲಿ ಸುರಿಯುವ ಸತತ ಮಳೆಯಿಂದಾಗಿ ಇದು ಭೂಕುಸಿತಕ್ಕೆ ಹೆಚ್ಚು ತುತ್ತಾಗುವ ಪ್ರದೇಶವೆಂದು ಹಿಂದಿನಿಂದಲೂ ಗುರುತಿಸಲ್ಪಟ್ಟಿದೆ.