"ಸಂಪೂರ್ಣವಾಗಿ ಸುಳ್ಳು" : ಇರಾನ್ ಅಧ್ಯಕ್ಷ ಪೆಝೆಶ್ಕಿಯನ್ ರಾಜೀನಾಮೆ ಪ್ರಸ್ತಾಪದ ಕುರಿತು ಕಠಿಣ ಸಂದೇಶ ನೀಡಲಾಗಿದೆ ಎಂಬ ವರದಿ ನಿರಾಕರಿಸಿದ ಮೊಜ್ತಬಾ ಖಾಮಿನೈ ಕಚೇರಿ

Update: 2026-08-05 10:40 IST

ಮೊಜ್ತಬಾ ಖಾಮಿನೈ | Photo Credit : AP , PTI 

ಟೆಹ್ರಾನ್ : ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ಅವರ ಸಂಭಾವ್ಯ ರಾಜೀನಾಮೆ ಕುರಿತು ಕಠಿಣ ಎಚ್ಚರಿಕೆ ನೀಡಲಾಗಿದೆ ಎಂಬ ವರದಿಗಳನ್ನು ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈ ಅವರ ಕಚೇರಿ ಅಧಿಕೃತವಾಗಿ ತಳ್ಳಿಹಾಕಿದೆ ಮತ್ತು ಈ ವರದಿಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದೆ.  

ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ವಿಡಿಯೊವೊಂದರಲ್ಲಿ, ʼಹಿಜ್ಬುಲ್ಲಾ ಆಫ್ ಇರಾನ್" ನ ಪ್ರಧಾನ ಕಾರ್ಯದರ್ಶಿ ಹಾಗೂ ಮೊಜ್ತಬಾ ಖಾಮಿನೈ ಅವರ ಸಂಬಂಧಿ ಮುಹಮ್ಮದ್-ಬಾಕರ್ ಖರಾಝಿ, ಇರಾನ್‌ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ಇದುವರೆಗೆ 28 ಬಾರಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಅಥವಾ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಭವಿಷ್ಯದಲ್ಲಿ ಇಂತಹ ಯಾವುದೇ ರಾಜೀನಾಮೆಯನ್ನು ಅಂಗೀಕರಿಸಲಾಗುವುದು ಎಂದು ಮೊಜ್ತಬಾ ಖಾಮಿನೈ ಎಚ್ಚರಿಸಿದ್ದಾರೆ ಎಂದು ಹೇಳಿದ್ದರು. 

ಇದರ ಬೆನ್ನಲ್ಲೆ ಈ ಕುರಿತು ಮಾಧ್ಯಮಗಳು ವರದಿ ಮಾಡಿತ್ತು. ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈ ಅವರು ಅಧ್ಯಕ್ಷ ಮಸೂದ್‌ ಪೆಝೆಶ್ಕಿಯನ್ ಅವರಿಗೆ ಕಠಿಣ ಸಂದೇಶವೊಂದನ್ನು ನೀಡಿದ್ದು, ಭವಿಷ್ಯದಲ್ಲಿ ಅವರು(ಪೆಝೆಶ್ಕಿಯನ್) ರಾಜೀನಾಮೆ ನೀಡಿದರೆ ಅದನ್ನು ತಕ್ಷಣವೇ ಅಂಗೀಕರಿಸಲಾಗುವುದು ಮತ್ತು ರಾಜೀನಾಮೆಯ ಬೆದರಿಕೆಯನ್ನು ರಾಜಕೀಯ ಚೌಕಾಶಿ ಸಾಧನವಾಗಿ ಬಳಸುವುದಕ್ಕೆ ಇದು ಕೊನೆ ಹಾಡಲಿದೆ ಎಂದು ತಿಳಿಸಿರುವುದಾಗಿ ಇಸ್ರೇಲ್‌ನ `ಚಾನೆಲ್ 14' ಕೂಡ ವರದಿ ಮಾಡಿತ್ತು.

ಮೊಜ್ತಬಾ ಖಾಮಿನೈ ಅವರ ಕಚೇರಿ ಮುಹಮ್ಮದ್-ಬಾಕರ್ ಖರಾಝಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಪ್ರಕಟಿಸಿದ ಹೇಳಿಕೆಯಲ್ಲಿ, “ಸೈಬರ್ ಸ್ಪೇಸ್‌ನಲ್ಲಿ ಒಬ್ಬ ವ್ಯಕ್ತಿ, ಗೌರವಾನ್ವಿತ ಅಧ್ಯಕ್ಷರ ಪತ್ರಕ್ಕೆ ಸರ್ವೋಚ್ಚ ನಾಯಕರ ಪ್ರತಿಕ್ರಿಯೆ ಕುರಿತು ನೀಡಿದ ಹೇಳಿಕೆ ಸಂಪೂರ್ಣವಾಗಿ ಸುಳ್ಳಾಗಿದ್ದು, ವಾಸ್ತವಕ್ಕೆ ವಿರುದ್ಧವಾಗಿವೆ” ಎಂದು ತಿಳಿಸಿದೆ.

ಇಂತಹ ಸುಳ್ಳು ಹೇಳಿಕೆಗಳನ್ನು ಹರಡುವುದು ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಮತ್ತು ಗೊಂದಲ ಉಂಟುಮಾಡಲು, ಸಮಾಜದಲ್ಲಿ ಭಿನ್ನಾಭಿಪ್ರಾಯ ಹಾಗೂ ಕಲಹದ ವಾತಾವರಣ ಸೃಷ್ಟಿಸಲು ನಡೆಸುತ್ತಿರುವ ಪ್ರಯತ್ನ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News