ಇಸ್ರೇಲ್ ಕಾಟ್ಝ್‌ | Photo Credit : AP , PTI 

ಜೆರುಸಲೆಮ್: ಸಂಯಮ ಕಾಯ್ದುಕೊಳ್ಳುವಂತೆ ಕೇಳಿಬಂದಿರುವ ಒತ್ತಾಯಗಳ ನಡುವೆಯೂ, ಹೊಸ ಸೇನಾ ಕಾರ್ಯಾಚರಣೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿರ್ಗಮಿತ ಒಕ್ಕೂಟಕ್ಕೆ ವಿರೋಧ ಪಕ್ಷದ ಅನುಮತಿಯ ಅಗತ್ಯವಿಲ್ಲ ಎಂದು ಇಸ್ರೇಲ್‍ನ ಹಂಗಾಮಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್‌ ಗುರುವಾರ ಹೇಳಿದ್ದಾರೆ.

ಸೇನೆಯು ಕಾರ್ಯಾಚರಣೆ ನಡೆಸುತ್ತಿರುವ ಯಾವುದೇ ವಲಯಗಳಲ್ಲಿ ದಾಳಿ ನಡೆಸಲು ನಮಗೆ ವಿರೋಧ ಪಕ್ಷದ ಅಥವಾ ಯಾವುದೇ ಕಾನೂನು ಪ್ರಾಧಿಕಾರದ ಅನುಮತಿಯ ಅಗತ್ಯವಿಲ್ಲ ಎಂದು ಕಾಟ್ಝ್‌ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್ ವಿಚಾರವನ್ನು ನಿಭಾಯಿಸುವಲ್ಲಿ ನಿರ್ಗಮಿತ ಒಕ್ಕೂಟವು ಐಡಿಎಫ್ ಜೊತೆಗಿನ ಸಂಪೂರ್ಣ ಸಮನ್ವಯದೊಂದಿಗೆ ದೃಢನಿಶ್ಚಯ ಮತ್ತು ಉತ್ತಮ ವಿವೇಚನೆಯನ್ನು ಪ್ರದರ್ಶಿಸಿದೆ. ಪರಿಸ್ಥಿತಿಗೆ ಅನುಗುಣವಾಗಿ ಈಗಲೂ ಅದು ಹಾಗೆಯೇ ಮುಂದುವರಿಯಲಿದೆ ಎಂದು ಕಾಟ್ಝ್‌ ತಿಳಿಸಿದ್ದಾರೆ.

ವಿರೋಧ ಪಕ್ಷದ ಒಕ್ಕೂಟದ ನಾಯಕ ಗಾಡಿ ಐಸೆನ್‍ಕೋಟ್ ಅವರು ಸಂಯಮ ಕಾಯ್ದುಕೊಳ್ಳುವಂತೆ ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕರೆ ನೀಡಿದ್ದು, ನೇರ ಮತ್ತು ತಕ್ಷಣದ ಬೆದರಿಕೆ ಇಲ್ಲದೆಯೇ ಬಲಪ್ರಯೋಗ ಮಾಡುವುದರಿಂದ ಇಸ್ರೇಲ್ ಪ್ರಜಾಪ್ರಭುತ್ವ ಮತ್ತು ನಾಗರಿಕರ ನಂಬಿಕೆಯ ಮೇಲೆ ವಿನಾಶಕಾರಿ ಪರಿಣಾಮಗಳು ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

ಈ ಮಧ್ಯೆ, ಹೊಸ ಸರಕಾರ ರಚಿಸಲು ಜನಾದೇಶ ಪಡೆದಿರುವ ಐಸೆನ್‍ಕೋಟ್ ಅವರು, ತಮಗೆ ಮಾಹಿತಿ ನೀಡಲು ನೆತನ್ಯಾಹು ನಿರಾಕರಿಸುತ್ತಿದ್ದಾರೆ ಮತ್ತು ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.`ಸಂಸತ್ತಿನ ಮೇಲ್ವಿಚಾರಣೆ ಇಲ್ಲದೆ ಮತ್ತು ಎಲ್ಲಾ ಭದ್ರತಾ ಸಂಸ್ಥೆಗಳ ಸಂಪೂರ್ಣ ಒಪ್ಪಿಗೆಯಿಲ್ಲದೆ ಇಸ್ರೇಲ್ ಅನ್ನು ಯುದ್ಧಕ್ಕೆ ಎಳೆಯುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಂಗಾಮಿ ಸರಕಾರಕ್ಕೆ ಅನುಮತಿಯಿಲ್ಲ" ಎಂದು ಐಸೆನ್‍ಕೋಟ್ ಅವರ ರಾಜಕೀಯ ಬಣದ ಪ್ರಮುಖ ಸದಸ್ಯ ಹಾಗೂ ವಿದೇಶಾಂಗ ಮತ್ತು ರಕ್ಷಣಾ ವ್ಯವಹಾರಗಳ ಸಂಸದೀಯ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿರುವ ಅವಿಗ್ಡರ್ ಲಿಬರ್ಮನ್ ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor