×
Ad

ಹಾರ್ಮುಝ್ ಜಲಸಂಧಿ ಮುಕ್ತವಾಗಿದೆ ಎಂದು ಇರಾನ್ ಸಾರ್ವಜನಿಕವಾಗಿ ಘೋಷಿಸಬೇಕು: ಅಮೆರಿಕ ಆಗ್ರಹ

Update: 2026-07-11 21:57 IST

Photo Credit ; AP 

ವಾಶಿಂಗ್ಟನ್, ಜು.11: ಹಾರ್ಮುಝ್ ಜಲಸಂಧಿ ಮುಕ್ತವಾಗಿದೆ ಮತ್ತು ಈ ಪ್ರಮುಖ ಜಲಮಾರ್ಗವನ್ನು ದಾಟುವ ಹಡಗುಗಳ ಮೇಲೆ ಇನ್ನು ಮುಂದೆ ದಾಳಿ ನಡೆಸುವುದಿಲ್ಲ ಎಂದು ಇರಾನ್ ಸಾರ್ವಜನಿಕವಾಗಿ ಘೋಷಿಸಬೇಕು. ಅಲ್ಲದೆ, ಕದನ ವಿರಾಮ ಒಪ್ಪಂದದ ಉಲ್ಲಂಘನೆಯನ್ನು ಬಹಿರಂಗವಾಗಿ ಒಪ್ಪಿಕೊಳ್ಳಬೇಕು ಎಂದು ಅಮೆರಿಕ ಆಗ್ರಹಿಸಿದೆ.

ಕದನ ವಿರಾಮವನ್ನು ಹಳಿತಪ್ಪಿಸಲು ಇರಾನ್‌ನ ಕಠಿಣ ನಿಲುವು ಹೊಂದಿರುವ ಬಂಡಾಯ ಗುಂಪೊಂದು ಯತ್ನಿಸಿದ ಬಳಿಕ ಈ ವಾರ ಮತ್ತೆ ದಾಳಿಗಳು ಆರಂಭವಾಗಿವೆ.

ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡುವ ಮೂಲಕ ತಾವು ‘ತಪ್ಪು ಮಾಡಿದ್ದೇವೆ’ ಎಂದು ಇರಾನ್ ಅಧಿಕಾರಿಗಳು ಖಾಸಗಿಯಾಗಿ ಒಪ್ಪಿಕೊಂಡಿದ್ದು, ಮಾತುಕತೆಗಳನ್ನು ಮುಂದುವರಿಸಲು ಸಿದ್ಧತೆ ವ್ಯಕ್ತಪಡಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಈ ದಾಳಿಗಳು ಒಂದು ಪ್ರಮಾದವಾಗಿದ್ದು, ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳನ್ನು ಹಳಿತಪ್ಪಿಸಲು ಯತ್ನಿಸುತ್ತಿರುವ ಕಠಿಣ ನಿಲುವಿನ ‘ದಾರಿ ತಪ್ಪಿದ’ ಗುಂಪಿನಿಂದ ನಡೆದಿವೆ. ಬಂಡಾಯದ ಕಠಿಣ ನಿಲುವು ಹೊಂದಿರುವವರು ಶಾಂತಿ ಪ್ರಕ್ರಿಯೆಯನ್ನು ಹಾಳುಗೆಡವಿದ್ದಾರೆ ಎಂದು ಇರಾನ್ ಪ್ರತಿಪಾದಿಸುತ್ತಿದೆ ಎಂದು ಸಿಬಿಎಸ್ ವರದಿ ಮಾಡಿದೆ.

ಆದರೆ, ಒಮಾನ್ ಕರಾವಳಿಯ ದಕ್ಷಿಣದ ಹಡಗು ಮಾರ್ಗದ ಮೂಲಕ ತೈಲ ಮತ್ತು ಅನಿಲ ಸಾಗಣೆ ವೇಗವಾಗಿ ಹೆಚ್ಚುತ್ತಿರುವುದನ್ನು ಅರಿತ ಇರಾನ್, ಇದರಿಂದ ಹಾರ್ಮುಝ್ ಜಲಸಂಧಿಯ ಮೇಲಿನ ತನ್ನ ಹಿಡಿತ ಮತ್ತು ಪ್ರಭಾವ ಕಡಿಮೆಯಾಗುತ್ತಿರುವುದನ್ನು ಕಂಡು ಈ ರೀತಿಯಾಗಿ ಪ್ರತಿಕ್ರಿಯಿಸಿದೆ ಎಂದು ಟ್ರಂಪ್ ಆಡಳಿತ ನಂಬಿದೆ.

ದಕ್ಷಿಣದ ಮಾರ್ಗದ ಮೂಲಕ ವಾಣಿಜ್ಯ ಸಂಚಾರ ಹೆಚ್ಚಾಗುತ್ತಿದ್ದಂತೆ ಇರಾನ್ ಆತಂಕಕ್ಕೊಳಗಾಗಿ, ನಂತರ ತನ್ನ ಬದ್ಧತೆಗಳಿಂದ ಹಿಂದೆ ಸರಿಯಿತು ಎಂದು ಅಮೆರಿಕದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News