ಇಸ್ರೇಲ್ ದಾಳಿಯಲ್ಲಿ IRGCಯ ಮುಖ್ಯಸ್ಥ ಹೊಸೈನ್ ಸಲಾಮಿ ಹತ್ಯೆ; ದೃಢಪಡಿಸಿದ ಇರಾನ್
ಟೆಹರಾನ್: ಇಸ್ರೇಲ್ ದಾಳಿಯಲ್ಲಿ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಕಮಾಂಡರ್ ಹೊಸೈನ್ ಸಲಾಮಿ ಹತ್ಯೆಯನ್ನು ಇರಾನ್ ಸರ್ಕಾರದ ಅಧಿಕೃತ ಮಾಧ್ಯಮ ಶುಕ್ರವಾರ ದೃಢಪಡಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ
ಈ ದಾಳಿಯು IRGC ಪ್ರಧಾನ ಕಚೇರಿಯನ್ನು ಗುರಿಯಾಗಿರಿಸಿಕೊಂಡೇ ನಡೆಸಲಾಗಿತ್ತು ಎನ್ನಲಾಗಿದೆ.
"ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್‌ನ ಮುಖ್ಯಸ್ಥ ಮೇಜರ್ ಜನರಲ್ ಹೊಸೈನ್ ಸಲಾಮಿ ಅವರು IRGC ಪ್ರಧಾನ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹುತಾತ್ಮರಾದರು", ಎಂದು ತಸ್ನಿಮ್ ಸುದ್ದಿ ಸಂಸ್ಥೆ ಘೋಷಿಸಿದೆ.
ಸಲಾಮಿ ಇರಾನ್ ನ ಮಿಲಿಟರಿ ಮತ್ತು ರಾಜಕೀಯ ಸ್ಥಾಪನೆಯಲ್ಲಿ ಕೇಂದ್ರ ವ್ಯಕ್ತಿಯಾಗಿದ್ದು, ಸಾಂಪ್ರದಾಯಿಕ ಪಡೆಗಳನ್ನು ಮಾತ್ರವಲ್ಲದೆ ಇರಾನ್ ನ ವ್ಯಾಪಕವಾದ ಬ್ಯಾಲಿಸ್ಟಿಕ್ ಕ್ಷಿಪಣಿ ಶಸ್ತ್ರಾಗಾರ ಮತ್ತು ಪ್ರಾದೇಶಿಕ ಪ್ರಾಕ್ಸಿ ಜಾಲಗಳನ್ನೂ ಮೇಲ್ವಿಚಾರಣೆ ಮಾಡುತ್ತಿದ್ದರು. ಅವರ ಮೃತ್ಯು ಇರಾನ್ ಗೆ ಬಹುದೊಡ್ಡ ಹೊಡೆತ ಎಂದು ವಿಶ್ಲೇಷಿಸಲಾಗಿದೆ.
ಈ ದಾಳಿಯು ಇರಾನ್ ಮಿಲಿಟರಿ ಶ್ರೇಣಿಯಲ್ಲಿನ ಹಲವಾರು ಹಿರಿಯ ಅಧಿಕಾರಿಗಳನ್ನು ಬಲಿ ಪಡೆದಿದೆ ಎಂದು ಇಸ್ರೇಲಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಅವರಲ್ಲಿ ಮೊಹಮ್ಮದ್ ಬಾಘೇರಿ, ಉನ್ನತ IRGC ಕಮಾಂಡರ್‌ಗಳು ಮತ್ತು ಹಿರಿಯ ಪರಮಾಣು ವಿಜ್ಞಾನಿಗಳು ಸೇರಿದ್ದಾರೆ ಎನ್ನಲಾಗಿದೆ.
ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ಈ ಹಿಂದೆ ಇರಾನ್ ನ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ದೀರ್ಘ ಶ್ರೇಣಿಯ ಕ್ಷಿಪಣಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ರಹಸ್ಯ ವಿಧ್ವಂಸಕ ಕಾರ್ಯಾಚರಣೆಗಳನ್ನು ನಡೆಸಿತ್ತು. ಈ ಕಾರ್ಯಾಚರಣೆಯು IDF ನ ಮುಂದುವರಿದ ಯೋಜನೆಯಂತೆ ಕಂಡುಬರುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಈ ವಾರದ ಆರಂಭದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಇರಾನ್ ವಿರುದ್ಧ ನೇರ ದಾಳಿಗೆ ಸಿದ್ಧರಾಗುವಂತೆ ಆದೇಶಗಳನ್ನು ಹೊರಡಿಸಿದ್ದರು. ಅಂದಿನಿಂದ ಕಾರ್ಮಿಕ ಮತ್ತು ರಕ್ಷಣಾ ಸಚಿವಾಲಯಗಳನ್ನು ತುರ್ತು ಪರಿಸ್ಥಿತಿಯಲ್ಲಿ ಇರಿಸಲಾಗಿತ್ತು.
ಈ ಘಟನೆಯು ಪರಮಾಣು ಉದ್ವಿಗ್ನತೆ ಮತ್ತು ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚುತ್ತಿರುವ ನಡುವೆ ನಡೆದಿದೆ. ಈ ದಾಳಿಯ ನಂತರ, ಅಮೆರಿಕವು ಮಧ್ಯಪ್ರಾಚ್ಯದಲ್ಲಿನ ರಾಯಭಾರ ಕಚೇರಿಗಳು ಮತ್ತು ಮಿಲಿಟರಿ ನೆಲೆಗಳಲ್ಲಿ ತನ್ನ ಸಿಬ್ಬಂದಿಗಳನ್ನು ಸ್ಥಳಾಂತರಿಸುವ ಕಾರ್ಯ ಪ್ರಾರಂಭಿಸಿದೆ ಎಂದು ವರದಿಯಾಗಿದೆ.