ಕದನ ವಿರಾಮ ಉಲ್ಲಂಘನೆಗೆ ತಕ್ಕ ಪ್ರತಿಕ್ರಿಯೆ ನೀಡುವ ಹಕ್ಕು ನಮಗಿದೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ
ಅಮೆರಿಕದ MQ-9 ಡ್ರೋನ್, ಯುದ್ಧ ವಿಮಾನವೊಂದು ತನ್ನ ವಾಯುಪ್ರದೇಶ ಪ್ರವೇಶಿಸಿದೆ ಎಂದ ಇರಾನ್
Photo Credit : AP , PTI
ಟೆಹ್ರಾನ್: ಇರಾನ್ ವಿರುದ್ಧ ಮತ್ತೊಂದು ದಾಳಿ ನಡೆದರೆ ಅದಕ್ಕೆ ಮೊದಲಿಗಿಂತ ಹೆಚ್ಚು ಭಾರೀ ಹಾಗೂ ಹಿಂಸಾತ್ಮಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್ ಸೇನೆಯ ವಕ್ತಾರ ಅಬೋಲ್ಫಜ್ಲ್ ಶೇಕಾರ್ಚಿ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, ಮತ್ತೆ ಯುದ್ಧ ಪರಿಸ್ಥಿತಿ ಉಂಟಾದರೆ ಇರಾನ್ ನ ದಾಳಿಗಳು ಪ್ರದೇಶದ ಗಡಿಗಳನ್ನು ಮೀರಿ ವಿಸ್ತರಿಸಲಿವೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಅಮೆರಿಕದ MQ-9 ಡ್ರೋನ್ ಮತ್ತು ಯುದ್ಧ ವಿಮಾನವೊಂದು ಇರಾನ್‌ನ ವಾಯುಪ್ರದೇಶ ಪ್ರವೇಶಿಸಿದೆ ಎಂದು ಟೆಹ್ರಾನ್ ಆರೋಪಿಸಿದೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಪಡೆ (IRGC) ಪ್ರಕಾರ, ವಾಯು ರಕ್ಷಣಾ ವ್ಯವಸ್ಥೆಗಳು MQ-9 ಡ್ರೋನ್ ಅನ್ನು ಹೊಡೆದುರುಳಿಸಿದ್ದು, ವಾಯುಪ್ರದೇಶ ಪ್ರವೇಶಿಸಿದ ಯುದ್ಧ ವಿಮಾನದ ಮೇಲೂ ಗುಂಡಿನ ದಾಳಿ ನಡೆಸಿವೆ ಎಂದು ರಾಜ್ಯ ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಯುದ್ಧ ವಿಮಾನಕ್ಕೆ ಹಾನಿಯಾಯಿತೇ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗಿಲ್ಲ. MQ-9 ಡ್ರೋನ್ ಅಮೆರಿಕ ಸೇನೆಯ ಪ್ರಮುಖ ಮಾನವರಹಿತ ವೈಮಾನಿಕ ವಾಹನಗಳಲ್ಲಿ ಒಂದಾಗಿದ್ದು, ಸುಮಾರು 50 ಸಾವಿರ ಅಡಿ ಎತ್ತರದಲ್ಲಿ 27 ಗಂಟೆಗಳಿಗಿಂತ ಹೆಚ್ಚು ಕಾಲ ಹಾರಾಟ ನಡೆಸಿ ಗುಪ್ತಚರ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.
ಈ ನಡುವೆ, ದಕ್ಷಿಣ ಇರಾನ್‌ನ ಕೆಲವು ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿರುವುದಾಗಿ ಯುಎಸ್ ಸೆಂಟ್ಕಾಂ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಪ್ರತಿಕ್ರಿಯಿಸಿದ ಇರಾನ್, ಯಾವುದೇ ಕದನ ವಿರಾಮ ಉಲ್ಲಂಘನೆಗೆ ತಕ್ಕ ಪ್ರತಿಕ್ರಿಯೆ ನೀಡುವ ಹಕ್ಕು ನಮಗಿದೆ ಎಂದು ಹೇಳಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ಭದ್ರತಾ ಪರಿಸ್ಥಿತಿ ಕುರಿತು ಆತಂಕವೂ ತೀವ್ರಗೊಂಡಿದೆ.