ಇರಾನ್ ಗೆ ಆರು ತಿಂಗಳು ‘ತೀವ್ರ ಯುದ್ಧ’ ನಡೆಸುವ ಸಾಮರ್ಥ್ಯವಿದೆ: IRGC ಹೇಳಿಕೆ
ಇರಾನಿನ ಎಫ್–14 ಯುದ್ಧವಿಮಾನಗಳನ್ನು ನಾಶಪಡಿಸಲಾಗಿದೆ ಎಂದ ಇಸ್ರೇಲ್
Photo credit: PTI
ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಈಗಿನಷ್ಟೇ ತೀವ್ರವಾಗಿ ಆರು ತಿಂಗಳ ಕಾಲವೂ ‘ತೀವ್ರ ಯುದ್ಧ’ ನಡೆಸುವ ಸಾಮರ್ಥ್ಯ ಇರಾನ್ ಗೆ ಇದೆ ಎಂದು ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ.
IRGC ವಕ್ತಾರ ಅಲಿ ಮೊಹಮ್ಮದ್ ನೈನಿ ಈ ಕುರಿತು ಮಾತನಾಡಿ, ದೇಶದ ಪಡೆಗಳು ದೀರ್ಘಕಾಲದ ಸಂಘರ್ಷವನ್ನು ಎದುರಿಸಲು ಸಿದ್ಧವಾಗಿವೆ ಎಂದು ಹೇಳಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಲ್ಲಿಯವರೆಗೆ ನಡೆಯುತ್ತಿರುವ ದಾಳಿಗಳಲ್ಲಿ ಇರಾನ್ ‘ಮೊದಲ ಮತ್ತು ಎರಡನೇ ತಲೆಮಾರಿನ’ ಕ್ಷಿಪಣಿಗಳನ್ನು ಬಳಸಿದೆ. ಆದರೆ ಮುಂದಿನ ದಿನಗಳಲ್ಲಿ ‘ಸುಧಾರಿತ ಮತ್ತು ಕಡಿಮೆ ಬಳಸಲ್ಪಟ್ಟ ದೀರ್ಘಶ್ರೇಣಿಯ ಕ್ಷಿಪಣಿಗಳನ್ನು’ ಬಳಸಲಾಗುತ್ತದೆ ಎಂದು ನೈನಿ ಹೇಳಿದ್ದಾರೆ.
ಇನ್ನೊಂದೆಡೆ, ಇರಾನ್ ನ ಇಸ್ಫಹಾನ್ ನಲ್ಲಿರುವ ವಿಮಾನ ನಿಲ್ದಾಣದ ಮೇಲೆ ತನ್ನ ಪಡೆಗಳು ವಾಯುದಾಳಿ ನಡೆಸಿವೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಈ ದಾಳಿಯಲ್ಲಿ ಅನಿರ್ದಿಷ್ಟ ಸಂಖ್ಯೆಯ ಎಫ್–14 ಯುದ್ಧವಿಮಾನಗಳನ್ನು ನಾಶಪಡಿಸಲಾಗಿದೆ ಎಂದು ಅದು ತಿಳಿಸಿದೆ.
ಇದರ ಜೊತೆಗೆ, ಇಸ್ರೇಲ್ ವಾಯುಪಡೆಯ ವಿಮಾನಗಳಿಗೆ ಬೆದರಿಕೆಯಾಗಬಹುದಾದ ಪತ್ತೆ ವ್ಯವಸ್ಥೆಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನೂ ಹೊಡೆದುರುಳಿಸಲಾಗಿದೆ ಎಂದು ಟೆಲಿಗ್ರಾಮ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಇಸ್ರೇಲ್ ಸೇನೆ ತಿಳಿಸಿದೆ.
ಇದೇ ವೇಳೆ, ಎರಡು ದಿನಗಳ ಹಿಂದೆ ಟೆಹ್ರಾನ್ ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ‘ಕುದ್ಸ್ ಫೋರ್ಸ್’ಗೆ ಸೇರಿದ 16 ವಿಮಾನಗಳನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.