ಯುದ್ಧದ ಅಂತ್ಯಕ್ಕೆ ಒತ್ತಾಯ : ಹಲವು ರಾಷ್ಟ್ರಗಳ ರಾಯಭಾರಿಗಳೊಂದಿಗೆ ಒಮಾನ್ ಚರ್ಚೆ
PC | Oman flag
ಮಸ್ಕತ್, ಮಾ. 8: ಗಲ್ಫ್ ನಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ರಾಜಕೀಯ ಹಾಗೂ ರಾಜತಾಂತ್ರಿಕ ಒತ್ತಡ ತೀವ್ರಗೊಳಿಸುವ ಅಗತ್ಯವಿದೆ ಎಂದು ಒಮಾನ್ ವಿದೇಶಾಂಗ ಸಚಿವ ಸಯ್ಯಿದ್ ಬದ್ರ್ ಬಿನ್ ಹಮದ್ ಅಲ್‌ಬುಸೈದಿ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಯುರೋಪಿಯನ್ ಒಕ್ಕೂಟದ ಹೊರಗಿನ ಯುರೋಪಿಯನ್ ರಾಷ್ಟ್ರಗಳ ರಾಯಭಾರಿಗಳ ಗುಂಪು, ಅಮೆರಿಕ, ಬ್ರೆಝಿಲ್ ಹಾಗೂ ಟರ್ಕಿ ದೇಶಗಳ ರಾಯಭಾರಿಗಳನ್ನು ಅವರು ಭೇಟಿ ಮಾಡಿ ಪ್ರಸ್ತುತ ಪರಿಸ್ಥಿತಿ ಮತ್ತು ಯುದ್ಧ ಅಂತ್ಯಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಿದರು ಎಂದು ಒಮಾನ್ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದಕ್ಕೂ ಮೊದಲು ಈಜಿಪ್ಟ್, ಇರಾಕ್ ಮತ್ತು ಜೋರ್ಡಾನ್ ದೇಶಗಳ ಗಲ್ಫ್ ಸಹಕಾರ ಮಂಡಳಿ (GCC) ರಾಜ್ಯಗಳ ರಾಯಭಾರಿಗಳೊಂದಿಗೆ ಎರಡನೇ ಸುತ್ತಿನ ಸಭೆಯನ್ನೂ ನಡೆಸಲಾಯಿತು.
ಯುದ್ಧವನ್ನು ನಿಲ್ಲಿಸಲು ರಾಜಕೀಯ ಮತ್ತು ರಾಜತಾಂತ್ರಿಕ ಒತ್ತಡಗಳನ್ನು ಮುಂದುವರಿಸುವುದು ಹಾಗೂ ಅವನ್ನು ಇನ್ನಷ್ಟು ತೀವ್ರಗೊಳಿಸುವುದು ಅತ್ಯಂತ ಆದ್ಯತೆಯಾಗಿದೆ. ಜೊತೆಗೆ ಯುದ್ಧದಿಂದ ಉಂಟಾಗುತ್ತಿರುವ ಪರಿಣಾಮಗಳನ್ನು ನಿಯಂತ್ರಿಸುವ ಬಗ್ಗೆ ಸಭೆಗಳಲ್ಲಿ ಚರ್ಚಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಯುದ್ಧವನ್ನು ಕೊನೆಗೊಳಿಸುವುದು ಎಲ್ಲರಿಗೂ ಸರ್ವೋಚ್ಚ ರಾಷ್ಟ್ರೀಯ ಹಾಗೂ ಅರಬ್ ರಾಷ್ಟ್ರಗಳ ಹಿತಾಸಕ್ತಿಯ ವಿಷಯವಾಗಿದೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿ ವ್ಯಾಪಕ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅಲ್‌ಬುಸೈದಿ ಒತ್ತಿ ಹೇಳಿದರು.