×
Ad

ಇಸ್ರೇಲ್‌ ಗಾಗಿ ಬೇಹುಗಾರಿಕೆ ಆರೋಪ; ಕುದ್ಸ್ ಪಡೆ ಮುಖ್ಯಸ್ಥ ಇಸ್ಮಾಯಿಲ್ ಖಾನಿಗೆ ಗಲ್ಲು: ವರದಿ

Update: 2026-03-08 00:36 IST

PC | theweek

ಟೆಹ್ರಾನ್, ಮಾ.7: ಇರಾನ್‌ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (IRGC) ಕುಡ್ಸ್ ಪಡೆಯ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಇಸ್ಮಾಯಿಲ್ ಖಾನಿಯನ್ನು ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸಿದ್ದ ಆರೋಪದಲ್ಲಿ ಬಂಧಿಸಿ ಗಲ್ಲಿಗೇರಿಸಲಾಗಿದೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮ ಹಾಗೂ ಕೆಲವು ಅರಬ್ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಈ ಕುರಿತು ಟೆಹ್ರಾನ್ ಧೃಡಪಡಿಸಿಲ್ಲ.

ಅರಬ್ ಮಾಧ್ಯಮ ವರದಿಗಳ ಪ್ರಕಾರ, ಖಾನಿಯನ್ನು ಬೇಹುಗಾರಿಕೆಯ ಶಂಕೆಯಲ್ಲಿ IRGC ಬಂಧಿಸಿ ಗಲ್ಲಿಗೇರಿಸಿರಬಹುದು ಎಂದು ಹೇಳಲಾಗಿದೆ. ಎಮಿರೇಟ್ಸ್ ಮೂಲದ ‘ದಿ ನ್ಯಾಷನಲ್’ ಮಾಧ್ಯಮವು ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಹೇಳಿಕೆಗಳು ಹರಿದಾಡುತ್ತಿರುವುದಾಗಿ ವರದಿ ಮಾಡಿದೆ.

ಕುದ್ಸ್ ಪಡೆ ಮುಖ್ಯಸ್ಥರಾಗಿರುವ ಖಾನಿ ಕಳೆದ ಹಲವು ವರ್ಷಗಳಿಂದ ವಿವಿಧ ವದಂತಿಗಳ ಕೇಂದ್ರಬಿಂದುವಾಗಿದ್ದಾರೆ. ತನ್ನ ಸುತ್ತಲಿನ ಉನ್ನತ ನಾಯಕರನ್ನು ಗುರಿಯಾಗಿಸಿಕೊಂಡ ಅನೇಕ ಹತ್ಯೆ ಪ್ರಯತ್ನಗಳಿಂದ ಬದುಕುಳಿದಿರುವುದರಿಂದ ಅವರಿಗೆ ‘ಒಂಭತ್ತು ಜನರ ಜೀವಗಳನ್ನು ಬಲಿ ಪಡೆದ ವ್ಯಕ್ತಿ’ ಎಂಬ ಹೆಸರೂ ಪ್ರಚಲಿತದಲ್ಲಿದೆ ಎಂದು ವರದಿಗಳು ಹೇಳುತ್ತವೆ.

ಇತ್ತೀಚೆಗೆ ಇರಾನ್‌ ನ ಸರ್ವೋಚ್ಚ ನಾಯಕ ಆಯತಲ್ಲಾ ಅಲಿ ಖಾಮಿನೈ ಹಾಗೂ ಹಲವು ಹಿರಿಯ ಸರ್ಕಾರಿ ಅಧಿಕಾರಿಗಳು ಸಾವಿಗೀಡಾದ ದಾಳಿಯಲ್ಲಿ ಖಾನಿ ಮೃತಪಟ್ಟಿಲ್ಲ ಎಂಬ ವರದಿಗಳು ಹೊರಬಂದಿದ್ದವು. ಮಾಹಿತಿಗಳ ಪ್ರಕಾರ, ದಾಳಿ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ಅವರು ಆ ಸ್ಥಳವನ್ನು ತೊರೆದಿದ್ದರು ಎಂದು ಹೇಳಲಾಗಿದೆ.

ಖಾನಿ ದಾಳಿಗಳಿಂದ ಪಾರಾಗಿರುವುದು ಇದೇ ಮೊದಲಲ್ಲ. ಕಳೆದ ಹಲವು ವರ್ಷಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಸಾವಿಗೀಡಾದ ಅನೇಕ ಉನ್ನತ ನಾಯಕರೊಂದಿಗೆ ಅವರು ನಿಕಟ ಸಂಪರ್ಕ ಹೊಂದಿದ್ದರಿಂದ ಅವರ ಬಗ್ಗೆ ಅನುಮಾನಗಳು ಹೆಚ್ಚಾಗಿದ್ದವು.

ಅಕ್ಟೋಬರ್ 2024ರಲ್ಲಿ ಖಾನಿ ಸಾವಿಗೀಡಾದರೆಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದರೂ, ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಹೊರಬಂದಿತ್ತು. ನಂತರ ಅವರು ಇರಾನ್‌ ನ ರಾಷ್ಟ್ರೀಯ ಟಿವಿಯಲ್ಲಿ ಕಾಣಿಸಿಕೊಂಡಿದ್ದರು.

2025ರಲ್ಲಿ ನಡೆದ 12 ದಿನಗಳ ಯುದ್ಧದ ವೇಳೆಯೂ ಹಲವಾರು ಮಾಧ್ಯಮಗಳು ಖಾನಿ ಸಾವಿಗೀಡಾಗಿದ್ದಾರೆ ಎಂದು ವರದಿ ಮಾಡಿದ್ದವು. ಆದರೆ ಬಳಿಕ ಅವರು ಮತ್ತೆ ರಾಷ್ಟ್ರೀಯ ಟಿವಿಯಲ್ಲಿ ಕಾಣಿಸಿಕೊಂಡು ಆ ವರದಿಗಳಿಗೆ ತೆರೆ ಎಳೆದಿದ್ದರು.

ಇಸ್ರೇಲಿ ಕ್ಷಿಪಣಿಗಳ ದಾಳಿಗೆ ಗುರಿಯಾದ ಕೆಲವು ಸ್ಥಳಗಳಲ್ಲಿ ಖಾನಿ ಅಪಾಯವಿಲ್ಲದೆ ಪಾರಾಗಿರುವ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳಿಗೆ ತನ್ನ ನಿರಪರಾಧಿತ್ವವನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದರು ಎಂದು ವರದಿಗಳು ಹೇಳುತ್ತವೆ.

ಇದರ ನಡುವೆ, ಮೊಸಾದ್ ನೇಮಕ ಮಾಡಿಕೊಂಡ ಆಂತರಿಕ ಏಜೆಂಟ್ ಒಬ್ಬರು ಖಾಮಿನೈ ಮೃತದೇಹದ ವಿಡಿಯೊವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕಳುಹಿಸಿದ್ದಾನೆ ಎಂಬ ಹೇಳಿಕೆಗಳೂ ಕೇಳಿಬಂದಿದ್ದವು. ಈ ಘಟನೆ ಬಳಿಕ ಖಾನಿ ಕುರಿತು ಮತ್ತಷ್ಟು ಊಹಾಪೋಹಗಳು ಹೆಚ್ಚಾಗಿದ್ದವು.

2025ರಲ್ಲಿ ಮೊಸಾದ್‌ಗೆ ಸಂಬಂಧಿಸಿದೆ ಎನ್ನಲಾದ ಖಾತೆಯೊಂದರಿಂದ ಪ್ರಕಟವಾದ ಚಿತ್ರದಲ್ಲಿ ಖಾನಿ ರಹಸ್ಯ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂಬ ಸುಳಿವು ನೀಡಲಾಗಿತ್ತು. ಚಿತ್ರಕ್ಕೆ ಲಗತ್ತಿಸಲಾದ ಶೀರ್ಷಿಕೆಯಲ್ಲಿ ಅವರು ಇಸ್ರೇಲಿ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಲಾಗಿತ್ತು.

ಆದರೆ ಖಾನಿ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿ, ತನ್ನ ಸ್ಥಳವನ್ನು ಪತ್ತೆಹಚ್ಚಲು ಇಸ್ರೇಲ್ ನಡೆಸಿದ ಪ್ರಯತ್ನಗಳ ಭಾಗವಾಗಿಯೇ ಈ ಆರೋಪಗಳು ಹರಡಲಾಗುತ್ತಿವೆ ಎಂದು ಹೇಳಿದ್ದಾರೆ.

ಮೊಸಾದ್‌ ಗೆ ಸಂಬಂಧಿಸಿದೆ ಎನ್ನಲಾದ ಮತ್ತೊಂದು ಸಾಮಾಜಿಕ ಮಾಧ್ಯಮ ಖಾತೆಯು ಕೂಡ ಅದೇ ವರ್ಷ ಖಾನಿ ಗೂಢಚಾರನಲ್ಲ ಎಂದು ಹೇಳಿಕೊಂಡಿತ್ತು.

ಇದೀಗ ಇಸ್ರೇಲ್ ಹೆಜ್ಬೊಲ್ಲಾ ನಾಯಕತ್ವದ ವಿರುದ್ಧ ಕ್ರಮ ಕೈಗೊಂಡ ಬಳಿಕ ಸಂಭವನೀಯ ಭದ್ರತಾ ಉಲ್ಲಂಘನೆಗಳ ಕುರಿತು ಇರಾನ್ ಅಧಿಕೃತ ತನಿಖೆ ಆರಂಭಿಸಿದೆ ಎಂಬ ವರದಿಗಳು ಹೊರಬಂದಿವೆ. ಈ ಹಿನ್ನೆಲೆಯಲ್ಲಿ ಖಾನಿಯನ್ನು ಮೊಸಾದ್ ಏಜೆಂಟ್ ಎಂಬ ಅನುಮಾನದಲ್ಲಿ ಐಆರ್‌ಜಿಸಿ ಬಂಧಿಸಿ ಗಲ್ಲಿಗೇರಿಸಿದೆ ಎಂಬ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಲು ಆರಂಭಿಸಿವೆ.

ಆದರೆ ಈ ಎಲ್ಲ ಹೇಳಿಕೆಗಳನ್ನು ಟೆಹ್ರಾನ್ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.

ಅಮೆರಿಕ 2020ರ ಜನವರಿಯಲ್ಲಿ ಕುದ್ಸ್ ಪಡೆಯ ಹಿಂದಿನ ಮುಖ್ಯಸ್ಥ ಖಾಸಿಮ್ ಸುಲೈಮಾನಿಯನ್ನು ಹತ್ಯೆ ಮಾಡಿದ ಬಳಿಕ ಇಸ್ಮಾಯಿಲ್ ಖಾನಿ ಕುಡ್ಸ್ ಪಡೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News