ಗಾಝಾ ಮೇಲೆ ಇಸ್ರೇಲ್‌ನಿಂದ ಮತ್ತೆ ವೈಮಾನಿಕ ದಾಳಿ : ಮಕ್ಕಳು ಸೇರಿದಂತೆ 16 ಮಂದಿ ಮೃತ್ಯು
Update: 2025-05-04 22:13 IST
ಸಾಂದರ್ಭಿಕ ಚಿತ್ರ
ಗಾಝಾ: ಗಾಝಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಮಕ್ಕಳ ಸಹಿತ 16 ಮಂದಿ ಮೃತಪಟ್ಟಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಸಂಸ್ಥೆ ರವಿವಾರ ಹೇಳಿದೆ.
ಗಾಝಾ ಪಟ್ಟಿಯ ದಕ್ಷಿಣದಲ್ಲಿರುವ ಖಾನ್ ಯೂನಿಸ್ ನಗರದಲ್ಲಿ ಶನಿವಾರ ತಡರಾತ್ರಿ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ 6 ಮಂದಿ ಮೃತಪಟ್ಟಿದ್ದಾರೆ. ಅಲ್-ಮವಾಸಿಯಲ್ಲಿ ಶಿಬಿರದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಒಂದು ಮಗು, 7 ಮಹಿಳೆಯರು ಸೇರಿದಂತೆ 10 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಳೆದ ಎರಡು ದಿನಗಳಲ್ಲಿ ಗಾಝಾ ಪಟ್ಟಿಯಾದ್ಯಂತ ಸೇನಾಪಡೆ 100ಕ್ಕೂ ಹೆಚ್ಚು ಭಯೋತ್ಪಾದಕ ಗುರಿಗಳನ್ನು ಹೊಡೆದಿದೆ. ದಕ್ಷಿಣ ಗಾಝಾದಲ್ಲಿ ಹಲವು ಉಗ್ರರನ್ನು ಹತ್ಯೆ ಮಾಡಿದ್ದು ಸಂಗ್ರಹಿಸಿಟ್ಟಿದ್ದ ಅಪಾರ ಶಸ್ತಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.