12 ಬ್ರಿಟಿಷ್ ಪ್ರಜೆಗಳ ಪ್ರವೇಶ ನಿಷೇಧಿಸಿದ ಇಸ್ರೇಲ್, ಕಾನ್ಸುಲೇಟ್ ಬಂದ್
ಟೆಲ್ ಅವೀವ್: ಆಕ್ರಮಿತ ವೆಸ್ಟ್ ಬ್ಯಾಂಕ್‍ನಲ್ಲಿ ಇಸ್ರೇಲ್‍ನ ವಸಾಹತುಗಳು ಮತ್ತು ವಸಾಹತುಶಾಹಿಗಳ ಹಿಂಸಾಚಾರದ ವಿರುದ್ಧ ಬ್ರಿಟನ್ ನೇತೃತ್ವದಲ್ಲಿ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಬ್ರಿಟನ್ ವಿರುದ್ಧ ಇಸ್ರೇಲ್ ಸರಣಿ ಪ್ರತೀಕಾರದ ಕ್ರಮಗಳನ್ನು ಘೋಷಿಸಿದೆ. ಜೆರುಸಲೇಂನಲ್ಲಿರುವ ಬ್ರಿಟಿಷ್ ಕಾನ್ಸುಲೇಟ್ ಅನ್ನು ಮುಚ್ಚುವುದು ಮತ್ತು 12 ಬ್ರಿಟಿಷ್ ಪ್ರಜೆಗಳ ಪ್ರವೇಶವನ್ನು ನಿಷೇಧಿಸುವುದು ಇದರಲ್ಲಿ ಸೇರಿದೆ.
ಇಸ್ರೇಲ್‍ನ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ ಬ್ರಿಟಿಷ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದು, ದೇಶದಲ್ಲಿ ಅಕ್ಟೋಬರ್ ನಲ್ಲಿ ನಡೆಯುವ ಚುನಾವಣೆಗೆ ಮುನ್ನ ಬ್ರಿಟನ್ ಇಸ್ರೇಲ್‍ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಪೂರ್ವ ಜೆರುಸಲೇಂನಲ್ಲಿರುವ ಬ್ರಿಟನ್‍ನ ಕಾನ್ಸುಲೇಟ್ ಅನ್ನು ಮುಚ್ಚಲಾಗುವುದು. ಗಾಝಾಕ್ಕೆ ಸಂಬಂಧಿಸಿ ಅಮೆರಿಕ ನೇತೃತ್ವದ `ಸಮನ್ವಯ ಮಿಷನ್'ನಲ್ಲಿ ಬ್ರಿಟನ್ ಇನ್ನು ಮುಂದೆ ಪಾಲ್ಗೊಳ್ಳಲು ಅನುಮತಿಸುವುದಿಲ್ಲ ಎಂದೂ ಅವರು ಪ್ರಕಟಿಸಿದರು.