ಹೌದಿಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ ಯೆಮನ್ ಸೇನೆ
ಸಾಂದರ್ಭಿಕ ಚಿತ್ರ | Photo Credit : AFP
ಸನಾ: ಯೆಮನ್‍ನಲ್ಲಿ ಸೌದಿ ನೇತೃತ್ವದ ಒಕ್ಕೂಟವು ಬುಧವಾರ ಸೇನಾ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದು ದಕ್ಷಿಣ ಮಾರಿಬ್‍ನಲ್ಲಿ ಬೃಹತ್ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವುದಾಗಿ ವರದಿಯಾಗಿದೆ.
ಬುಧವಾರದಂದು ಹಲವು ರಂಗಗಳಲ್ಲಿ ಸಂಘರ್ಷಗಳು ವ್ಯಾಪಿಸಿವೆ. ಇರಾನ್ ಬೆಂಬಲಿತ ಹೌದಿ ಗುಂಪಿನ ವಿರುದ್ಧದ ಹೋರಾಟವು ತೈಜ್‍ನ ತೋಯಿಲ್ ಮತ್ತು ಅಲ್-ಬಾರಾ ರಂಗಗಳಲ್ಲಿ ಮುಂದುವರಿದಿದ್ದು ಈ ಗುಂಪಿಗೆ ಭಾರಿ ನಷ್ಟವನ್ನುಂಟು ಮಾಡಿರುವುದಾಗಿ ಯೆಮೆನ್ ಸಶಸ್ತ್ರ ಪಡೆಗಳು ಪ್ರತಿಪಾದಿಸಿವೆ.
ಯೆಮನ್ ಸರಕಾರಿ ಪಡೆಗಳು ದಕ್ಷಿಣ ಮಾರಿಬ್‍ನ ಪ್ರದೇಶಗಳನ್ನು ಹಾಗೂ ಉತ್ತರ ಮತ್ತು ದಕ್ಷಿಣ ವಲಯಗಳ ಹಲವಾರು ಸ್ಥಳಗಳನ್ನು, ತೈಜ್‍ನ ಪಶ್ಚಿಮದಲ್ಲಿರುವ ಅಲ್-ಕದ್ದಾ ರಂಗದಲ್ಲಿ ಹೊಸ ಸ್ಥಳಗಳನ್ನು ಮತ್ತು ಹಳ್ಳಿಗಳನ್ನು ವಶಪಡಿಸಿಕೊಂಡಿವೆ. ಜೊತೆಗೆ ತೀವ್ರ ಸಂಘರ್ಷಗಳು, ಫಿರಂಗಿ ಗುಂಡಿನ ದಾಳಿಗಳು ಮತ್ತು ಈ ಪ್ರದೇಶದಲ್ಲಿನ ಹೌದಿಗಳ ನೆಲೆಗಳು ಹಾಗೂ ಹೆಚ್ಚುವರಿ ಪಡೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳು ನಡೆದಿವೆ ಎಂದು `ಅಲ್ ಅರೇಬಿಯಾ' ಸುದ್ದಿ ವಾಹಿನಿ ವರದಿ ಮಾಡಿದೆ.
ಈ ಮಧ್ಯೆ, ಯೆಮನ್‍ನ ಜೌಫ್ ಪ್ರಾಂತದ ಹೌದಿ ಬೆಂಬಲಿತ ಕಾರಾಗೃಹದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಮೃತರ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, ಇನ್ನೂ ಏಳು ಜನರು ಪತ್ತೆಯಾಗಿಲ್ಲ ಎಂದು ಹೌದಿಗಳು ತಿಳಿಸಿದ್ದಾರೆ. ಉತ್ತರ ಜೌಫ್ ಪ್ರಾಂತ್ಯದ ಹಝಮ್ ಅನ್ನು ಗುರಿಯಾಗಿಸಿಕೊಂಡು ಸೌದಿ ಒಕ್ಕೂಟ ಸೋಮವಾರ ನಡೆಸಿದ ದಾಳಿಯಲ್ಲಿ ಈ ಜೈಲು ಕುಸಿದುಬಿದ್ದಿತ್ತು.