×
Ad

ಗಾಝಾವನ್ನು ಸಂಪೂರ್ಣ ವಶಕ್ಕೆ ಪಡೆಯುವ ಯೋಜನೆಗೆ ಇಸ್ರೇಲ್ ಅನುಮೋದನೆ

Update: 2025-05-05 21:58 IST

 ಬೆಂಜಮಿನ್ ನೆತನ್ಯಾಹು | PC : NDTV

ಟೆಲ್‍ಅವೀವ್: ಸಂಪೂರ್ಣ ಗಾಝಾ ಪಟ್ಟಿಯನ್ನು ನಿಯಂತ್ರಣಕ್ಕೆ ಪಡೆಯಲು ಮತ್ತು ಅಲ್ಲಿ ಅನಿರ್ದಿಷ್ಟ ಸಮಯದವರೆಗೆ ಉಳಿಯುವ ಹಾಗೂ ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಯೋಜನೆಗೆ ಇಸ್ರೇಲ್ ಕ್ಯಾಬಿನೆಟ್‍ನ ಸಚಿವರು ಅನುಮೋದನೆ ನೀಡಿರುವುದಾಗಿ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ʼಕ್ರಮೇಣ' ಯೋಜನೆಯು ಫೆಲೆಸ್ತೀನಿಯನ್ ಪ್ರದೇಶದ ಇನ್ನಷ್ಟು ಭೂಪ್ರದೇಶವನ್ನು ನಿಯಂತ್ರಣಕ್ಕೆ ಪಡೆಯುವುದನ್ನು ಒಳಗೊಂಡಿದೆ. ಇಲ್ಲಿನ ಸುಮಾರು 50%ದಷ್ಟು ಭೂಭಾಗ ಈಗಾಗಲೇ ಇಸ್ರೇಲ್‍ನ ನಿಯಂತ್ರಣದಲ್ಲಿದೆ. ಯೋಜನೆಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರದ ಪ್ರಭಾವಶಾಲೀ `ಭದ್ರತಾ ಕ್ಯಾಬಿನೆಟ್' ಸೋಮವಾರ ಬೆಳಿಗ್ಗೆ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

ಈ ಮಧ್ಯೆ, ಗಾಝಾದಲ್ಲಿನ ಯುದ್ಧವನ್ನು ವಿಸ್ತರಿಸಲು ಸಾವಿರಾರು ಮೀಸಲು ಯೋಧರನ್ನು ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ಹಮಾಸ್‍ನ ಭೂಗತ ಮತ್ತು ನೆಲದ ಮೇಲಿನ ಎಲ್ಲಾ ಮೂಲಸೌಕರ್ಯಗಳನ್ನು ನಾಶಗೊಳಿಸಲಿದ್ದೇವೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಲೆ|ಜ| ಇಯಾಲ್ ಜಾಮಿರ್ ಹೇಳಿದ್ದಾರೆ.

ಹಮಾಸ್ ಅನ್ನು ಸೋಲಿಸುವುದು, ಗಾಝಾದಲ್ಲಿನ ಒತ್ತೆಯಾಳುಗಳ ಬಿಡುಗಡೆ ಸೇರಿದಂತೆ ಇಸ್ರೇಲ್‍ನ ಯುದ್ಧದ ಗುರಿಗಳನ್ನು ಸಾಧಿಸುವ ಉದ್ದೇಶದ ಹೊಸ ಯೋಜನೆಯು ಸಾವಿರಾರು ಫೆಲೆಸ್ತೀನೀಯರನ್ನು ದಕ್ಷಿಣ ಗಾಝಾದತ್ತ ದೂಡಲಿದೆ ಮತ್ತು ಇದರಿಂದ ಈಗಾಗಲೇ ತೀವ್ರಗೊಂಡಿರುವ ಮಾನವೀಯ ಬಿಕ್ಕಟ್ಟು ಮತ್ತಷ್ಟು ಹದಗೆಡಲಿದೆ ಎಂಬ ಕಳವಳವೂ ವ್ಯಕ್ತವಾಗಿದೆ.

ಆಹಾರ, ಇಂಧನ, ನೀರು ಸೇರಿದಂತೆ ಗಾಝಾಕ್ಕೆ ಮಾನವೀಯ ನೆರವು ಪೂರೈಕೆಗೆ ಇಸ್ರೇಲ್ ತಡೆಯೊಡ್ಡಿದೆ. ಗಾಝಾದಲ್ಲಿ ನೆರವು ಪೂರೈಕೆಯ ಉಸ್ತುವಾರಿಯನ್ನು ಹಮಾಸ್ ನಿರ್ವಹಿಸಬಾರದು. ಯಾಕೆಂದರೆ ಅಂತರಾಷ್ಟ್ರೀಯ ನೆರವನ್ನು ಹಮಾಸ್ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ ಎಂಬುದು ಇಸ್ರೇಲ್ ಪ್ರತಿಪಾದನೆಯಾಗಿದೆ. ಆದ್ದರಿಂದ ಖಾಸಗಿ ಭದ್ರತಾ ಸಂಸ್ಥೆಗೆ ಗಾಝಾದಲ್ಲಿ ನೆರವು ವಿತರಣೆ ಜವಾಬ್ದಾರಿಯನ್ನು ನಿರ್ವಹಿಸಲು ಬಯಸುವುದಾಗಿ ಇಸ್ರೇಲ್ ಸರಕಾರ ಹೇಳುತ್ತಿದೆ. ಆದರೆ ಇದು ವಿಶ್ವಸಂಸ್ಥೆಯ ಪ್ರಮುಖ ತತ್ವಗಳನ್ನು ಉಲ್ಲಂಘಿಸುವುದರಿಂದ ಈ ಯೋಜನೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News