×
Ad

ಗಾಝಾ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳಿ, ಅಥವಾ ನಾಶವಾಗಿ: ಹಮಾಸ್‌ ಗೆ ಇಸ್ರೇಲ್ ಎಚ್ಚರಿಕೆ

Update: 2025-05-31 21:48 IST

PC : PTI 

ಜೆರುಸಲೇಂ: ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಪ್ರಸ್ತಾಪಿಸಿರುವ ಗಾಝಾ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳಿ ಅಥವಾ ನಾಶವಾಗಿ ಎಂದು ಇಸ್ರೇಲ್ ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹಮಾಸ್‌ ಗೆ ಎಚ್ಚರಿಕೆ ನೀಡಿದ್ದಾರೆ.

ಗಾಝಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಬದಲಾಗಿ ಎರಡು ಹಂತಗಳಲ್ಲಿ 10 ಇಸ್ರೇಲಿ ಒತ್ತೆಯಾಳುಗಳು ಹಾಗೂ 18 ಒತ್ತೆಯಾಳುಗಳ ಮೃತದೇಹವನ್ನು ಹಸ್ತಾಂತರಿಸುವುದು. ಜೊತೆಗೆ 1,236 ಫೆಲೆಸ್ತೀನಿಯನ್ ಕೈದಿಗಳು ಹಾಗೂ 180 ಫೆಲೆಸ್ತೀನೀಯರ ಮೃತದೇಹಗಳ ಹಸ್ತಾಂತರ- ಇದು ವಿಟ್ಕಾಫ್ ಮುಂದಿರಿಸಿದ ಪ್ರಸ್ತಾಪ ಎಂದು ಮೂಲಗಳನ್ನು ಉಲ್ಲೇಖಿಸಿ ಕ್ಸಿನ್‍ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಗಾಝಾದಲ್ಲಿ ಇಸ್ರೇಲಿ ಮಿಲಿಟರಿ ಪೂರ್ಣ ಬಲದಿಂದ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ಆಗಸ, ನೆಲ ಮತ್ತು ಸಮುದ್ರದಲ್ಲಿ ದಾಳಿಗಳನ್ನು ನಡೆಸುವ ಮೂಲಕ ಗಾಝಾದ `ಪ್ರತಿಯೊಂದು ಪ್ರದೇಶದಲ್ಲೂ ನಮ್ಮ ಕಾರ್ಯಾಚರಣೆ ಪಡೆಗಳ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಡುತ್ತಿರುವ ನಮ್ಮ ಯೋಧರ ಗರಿಷ್ಠ ರಕ್ಷಣೆಗಾಗಿ ಅಸಾಮಾನ್ಯ ಮಟ್ಟದಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಕಾಟ್ಜ್ ಹೇಳಿದ್ದಾರೆ.

2023ರ ಅಕ್ಟೋಬರ್‌ ನಲ್ಲಿ ಹಮಾಸ್ ವಶಪಡಿಸಿಕೊಂಡಿದ್ದ 251 ಒತ್ತೆಯಾಳುಗಳಲ್ಲಿ ಇನ್ನೂ 57 ಮಂದಿ ಹಮಾಸ್ ವಶದಲ್ಲಿದ್ದಾರೆ. ಇವರಲ್ಲಿ 34 ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಗಾಝಾದಲ್ಲಿ 60 ದಿನಗಳ ಕದನ ವಿರಾಮ ಪ್ರಸ್ತಾಪಕ್ಕೆ ಇಸ್ರೇಲ್ ಸಮ್ಮತಿಸಿದೆ ಎಂದು ಶುಕ್ರವಾರ ಶ್ವೇತಭವನ ಹೇಳಿದೆ. ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಬೆಂಬಲಿಸಿದ ಕದನ ವಿರಾಮ ಪ್ರಸ್ತಾವನೆಯನ್ನು ಹಮಾಸ್‌ ಗೆ ಸಲ್ಲಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲಿವಿಟ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅಮೆರಿಕ ಮುಂದಿರಿಸಿದ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿರುವುದಾಗಿ ಹಮಾಸ್ ಪ್ರತಿಕ್ರಿಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News