ಯೆಮನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 4 ಮಂದಿ ಮೃತ್ಯು; 39 ಮಂದಿಗೆ ಗಾಯ
Update: 2025-05-06 22:55 IST
PC : NDTV
ಸನಾ: ಇಸ್ರೇಲ್ ನ ವಿಮಾನ ನಿಲ್ದಾಣದ ಮೇಲೆ ಹೌದಿಗಳು ಕ್ಷಿಪಣಿ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಯೆಮನ್‍ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ಹೊದೈದಾ ಹಾಗೂ ಅಕ್ಕಪಕ್ಕದ ಪ್ರದೇಶವನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 4 ಮಂದಿ ಮೃತಪಟ್ಟಿದ್ದು ಇತರ 39 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಸೋಮವಾರ ತಡರಾತ್ರಿ ಆಯಕಟ್ಟಿನ ಬಂದರು ನಗರ ಹೊದೈದಾವನ್ನು ಗುರಿಯಾಗಿಸಿ ಕನಿಷ್ಠ 6 ದಾಳಿ ನಡೆದಿದ್ದು ಓರ್ವ ಸಾವನ್ನಪ್ಪಿದ್ದು ಇತರ 35 ಮಂದಿ ಗಾಯಗೊಂಡಿದ್ದಾರೆ.
ಹೊದೈದಾ ನಗರದಿಂದ 55 ಕಿ.ಮೀ ದೂರದ ಬಾಜಿಲ್ ಜಿಲ್ಲೆಯಲ್ಲಿನ ಸಿಮೆಂಟ್ ಫ್ಯಾಕ್ಟರಿ ಮೇಲೆಯೂ ಕ್ಷಿಪಣಿ ದಾಳಿ ನಡೆದಿದ್ದು ಮೂವರು ಸಾವನ್ನಪ್ಪಿದ್ದು 4 ಮಂದಿ ಗಾಯಗೊಂಡಿದ್ದಾರೆ. ಜೊತೆಗೆ ಅಪಾರ ನಾಶ-ನಷ್ಟ ಸಂಭವಿಸಿರುವ ಮಾಹಿತಿಯಿದೆ ಎಂದು ಹೌದಿಗಳ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ. ಕಾರ್ಯಾಚರಣೆಯಲ್ಲಿ 20ಕ್ಕೂ ಅಧಿಕ ಯುದ್ಧ ವಿಮಾನಗಳು ಪಾಲ್ಗೊಂಡಿದ್ದವು ಎಂದು ಇಸ್ರೇಲ್ ಹೇಳಿದೆ.