×
Ad

ಇಸ್ರೇಲ್-ಅಮೆರಿಕನ್ ಸೈನಿಕನನ್ನು ಬಿಡುಗಡೆ ಮಾಡಲು ಹಮಾಸ್ ನಿರ್ಧಾರ

Update: 2025-05-13 00:00 IST

PC : NDTV

ಗಾಝಾ ಪಟ್ಟಿ (ಫೆಲೆಸ್ತೀನ್): ಗಾಝಾದಲ್ಲಿರುವ ಅಮೆರಿಕ-ಇಸ್ರೇಲ್ ಒತ್ತೆಯಾಳುವೊಬ್ಬರನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಘೋಷಿಸಿದೆ. ಫೆಲೆಸ್ತೀನ್‌ ನಲ್ಲಿ ಯುದ್ಧವಿರಾಮ ಜಾರಿಗೆ ತರುವ ನಿಟ್ಟಿನಲ್ಲಿ ಅಮೆರಿಕದೊಂದಿಗೆ ತಾನು ನೇರ ಮಾತುಕತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.

‘‘ಇಸ್ರೇಲ್ ಸೈನಿಕ ಎಡನ್ ಅಲೆಕ್ಸಾಂಡರ್‌ ರನ್ನು ಯುದ್ಧವಿರಾಮ ಮತ್ತು ನೆರವಿನ ಮಾರ್ಗಗಳನ್ನು ಮರುತರೆಯುವ ಪ್ರಯತ್ನಗಳ ಭಾಗವಾಗಿ ಬಿಡುಗಡೆಗೊಳಿಸಲಾಗುವುದು’’ ಎಂದು ಹಮಾಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮುಂದಿನ ದಿನಗಳಲ್ಲಿ 21 ವರ್ಷದ ಅಲೆಕ್ಸಾಂಡರ್ ಬಿಡುಗಡೆಗೊಳ್ಳಬಹುದಾಗಿದೆ ಎಂಬ ಮಾಹಿತಿಯನ್ನು ತಮಗೆ ನೀಡಲಾಗಿದೆ ಎಂಬುದಾಗಿ ಅವರ ಕುಟುಂಬ ತಿಳಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘‘ಇದು ಬಹುದೊಡ್ಡ ಸುದ್ದಿ’’ ಎಂಬುದಾಗಿ ಸಾಮಾಜಿಕ ಮಾಧ್ಯಮ ಸಂದೇಶವೊಂದರಲ್ಲಿ ಹೇಳಿದ್ದಾರೆ. ‘‘ಇದು ಉತ್ತಮ ನಂಬಿಕೆಯ ಪ್ರದರ್ಶನವಾಗಿದೆ. ಬಹುಷಃ ಇದು ಈ ಭೀಕರ ಸಂಘರ್ಷವನ್ನು ಕೊನೆಗೊಳಿಸಲು ಅಗತ್ಯವಾದ ಅಂತಿಮ ಕ್ರಮಗಳಲ್ಲಿ ಒಂದಾಗಬಹುದಾಗಿದೆ’’ ಎಂದು ಅವರು ಬರೆದಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್ ಮತ್ತು ಖತರ್ ಕೂಡಾ ಜಂಟಿ ಹೇಳಿಕೆಯೊಂದರಲ್ಲಿ ಈ ಬೆಳವಣಿಗೆಯನ್ನು ಸ್ವಾಗತಿಸಿವೆ.

ಈ ನಡುವೆ, ಇಸ್ರೇಲ್ ಆಕ್ರಮಣ ಮುಂದುವರಿದಿದೆ. ಇಸ್ರೇಲ್ ರವಿವಾರ ನಡೆಸಿದ ಬಾಂಬ್ ದಾಳಿಗಳಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಎಂದು ಗಾಝಾದ ನಾಗರಿಕ ರಕ್ಷಣಾ ಸಂಸ್ಥೆ ವರದಿ ಮಾಡಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News