ಜೈಶಂಕರ್ ಬಾಂಗ್ಲಾ ಭೇಟಿಯು ದ್ವಿಪಕ್ಷೀಯ ಬಾಂಧವ್ಯ ಸುಧಾರಣೆಗೆ ಪೂರಕ: ಬಾಂಗ್ಲಾ ಸರಕಾರ
ಎಸ್. ಜೈಶಂಕರ್ | Photo Credit : PTI
ಢಾಕಾ, ಡಿ.31: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭಗೊಳ್ಳುವ ವಿಶ್ವಾಸ ಮೂಡಿಸಿದೆ ಎಂದು ಬಾಂಗ್ಲಾದೇಶ ಬುಧವಾರ ಹೇಳಿದೆ.
ಬಾಂಗ್ಲಾದ ಮಾಜಿ ಪ್ರಧಾನಿ ಖಾಲಿದಾ ಝಿಯಾ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಜೈಶಂಕರ್ ಬುಧವಾರ ಢಾಕಾಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)ಯ ಹಂಗಾಮಿ ಅಧ್ಯಕ್ಷ ತಾರಿಕ್ ರಹ್ಮಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.
ಖಾಲಿದಾ ಝಿಯಾ ಅವರ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಗೌರವ ಸಲ್ಲಿಸಲು ಸಾವಿರಾರು ಮಂದಿ ಸೇರಿದ್ದರು. ಭಾರತ ಸರಕಾರ ಮತ್ತು ಜನತೆಯನ್ನು ಪ್ರತಿನಿಧಿಸಿದ್ದ ಜೈಶಂಕರ್, ಅಪ್ರತಿಮ ನಾಯಕಿಯ ನಿಧನದ ಬಗ್ಗೆ ಭಾರತದ ಸಂತಾಪವನ್ನು ವ್ಯಕ್ತಪಡಿಸಿದರು. ಅಲ್ಲದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪತ್ರವನ್ನು ರಹ್ಮಾನ್ ಅವರಿಗೆ ಹಸ್ತಾಂತರಿಸಿ ಭಾರತದ ಸಹಾನುಭೂತಿಯನ್ನು ಅರ್ಪಿಸಿದರು. ಜೈಶಂಕರ್ ಅವರ ಸಂಕ್ಷಿಪ್ತ ಭೇಟಿಯು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಬಾಂಗ್ಲಾ ಸರಕಾರ ಅಭಿಪ್ರಾಯಪಟ್ಟಿದೆ.