ಪುಟಿನ್ ನಿವಾಸದ ಮೇಲೆ ಉಕ್ರೇನ್ ನ ಡ್ರೋನ್ ದಾಳಿಯ ವೀಡಿಯೊ ಬಿಡುಗಡೆ
Photo Credit : X
ಮಾಸ್ಕೋ, ಡಿ.31: ರಶ್ಯವು ಬುಧವಾರ ಹೊಡೆದುರುಳಿಸಲಾದ ಡ್ರೋನ್‌ನ ವೀಡಿಯೊವನ್ನು ಬಿಡುಗಡೆಗೊಳಿಸಿದ್ದು, ಈ ಡ್ರೋನ್ ಅನ್ನು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿವಾಸದತ್ತ ಉಕ್ರೇನ್ ಪ್ರಯೋಗಿಸಿತ್ತು ಎಂದು ಪ್ರತಿಪಾದಿಸಿದೆ.
ರಾತ್ರಿ ಚಿತ್ರೀಕರಿಸಲಾದ ವೀಡಿಯೊವನ್ನು ರಶ್ಯದ ರಕ್ಷಣಾ ಸಚಿವಾಲಯ ಬಿಡುಗಡೆಗೊಳಿಸಿದೆ. ಈ ವಾರ ವಾಯವ್ಯ ರಶ್ಯದಲ್ಲಿ ಪುಟಿನ್ ನಿವಾಸವನ್ನು ಗುರಿಯಾಗಿಸಿಕೊಂಡ ಡ್ರೋನ್ ಅರಣ್ಯ ಪ್ರದೇಶದಲ್ಲಿ ಪತನಗೊಂಡಿರುವುದು ವೀಡಿಯೊದಲ್ಲಿ ಕಾಣುತ್ತದೆ. ಆಪಾದಿತ ದಾಳಿಯನ್ನು ಎಚ್ಚರಿಕೆಯಿಂದ ಯೋಜಿಸಿ ಹಂತಗಳಲ್ಲಿ ನಡೆಸಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.
ಡ್ರೋನ್ ದಾಳಿಯನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳನ್ನು ಒದಗಿಸಲು ಸಾಧ್ಯವಿಲ್ಲ. ಏಕೆಂದರೆ ಎಲ್ಲಾ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಂಗಳವಾರ ರಶ್ಯ ಅಧ್ಯಕ್ಷರ ಕಚೇರಿ ಹೇಳಿಕೆ ನೀಡಿತ್ತು.
ಡ್ರೋನ್ ದಾಳಿ ನಡೆದಿರುವುದಕ್ಕೆ ಯಾವುದೇ ವಿಶ್ವಾಸಾರ್ಹ ದಾಖಲೆಗಳನ್ನು ರಶ್ಯ ಒದಗಿಸಲು ವಿಫಲವಾಗಿರುವುದು ಆರೋಪ ಸುಳ್ಳೆಂಬುದಕ್ಕೆ ನಿದರ್ಶನವಾಗಿದೆ ಎಂದು ಉಕ್ರೇನ್ ಮಂಗಳವಾರ ಪ್ರತಿಕ್ರಿಯಿಸಿತ್ತು.