ರೆಸ್ಲಿಂಗ್ ಗೆ ವಿದಾಯ ಹೇಳಿದ 17 ಬಾರಿಯ WWE ಚಾಂಪಿಯನ್ ಜಾನ್ ಸೀನಾ
Photo: WWE
ಹೊಸದಿಲ್ಲಿ: ಸುಮಾರು 20 ವರ್ಷಗಳಿಗೂ ಸುದೀರ್ಘ WWE ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಕ್ರೀಡಾ ಪ್ರೇಮಿಗಳನ್ನು ರಂಜಿಸಿದ್ದ ಜಾನ್ ಸೀನಾ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಜಾನ್ ಸೀನಾ 17 ಬಾರಿ ರೆಸ್ಲಿಂಗ್ ಚಾಂಪಿಯನ್ ಶಿಪ್ ಗೆದ್ದುಕೊಂಡವರು. ‘ದಿ ರಾಕ್’, ಟ್ರಿಪಲ್ ಎಚ್’, ರಾಂಡಿ ಓರ್ಟನ್ನಂತಹ ಖ್ಯಾತ ರೆಸ್ಲರ್ ಗಳ ವಿರುದ್ಧ ಗೆಲುವು ಸಾಧಿಸಿದ ಖ್ಯಾತಿ ಹೊಂದಿದ್ದಾರೆ.
ಶನಿವಾರ ರಾತ್ರಿ ಗುಂಥರ್ ವಿರುದ್ಧ ನಡೆದ ವಿದಾಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ 23 ವರ್ಷಗಳ ಅದ್ಭುತ ಕುಸ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ವಿದಾಯ ಪಂದ್ಯದಲ್ಲಿ ಗೆದ್ದು ನಿವೃತ್ತಿಯಾಗುತ್ತಾರೆಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಅವರು ವಿದಾಯ ಪಂದ್ಯವನ್ನು ಗುಂಥರ್ ವಿರುದ್ಧ ಸೋತಿದ್ದಾರೆ.
WWE ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ದಂತಕತೆಯಾಗಿರುವವರು ಜಾನ್ ಸೀನಾ. ಪ್ರಸ್ತುತ ಅವರಿಗೆ 47 ವರ್ಷ ವಯಸ್ಸಾಗಿದೆ. ಹಾಲಿವುಡ್ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಇದೀಗ ಸಿನಿಮಾ ಕಡೆಗೆ ಸಂಪೂರ್ಣ ಗಮನಹರಿಸಲು ಪಂದ್ಯಾವಳಿಗಳಿಂದ ನಿವೃತ್ತರಾಗುತ್ತಿದ್ದಾರೆ.
ಟೊರಾಂಟೊದಲ್ಲಿ ನಡೆದ ‘ಮನಿ ಇನ್ ಬ್ಯಾಂಕ್’ ಪ್ರೀಮಿಯಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಾನ್ ಸೀನಾ ಈ ಘೋಷಣೆ ಮಾಡಿದ್ದು, 'ದಿ ಲಾಸ್ಟ್ ಟೈಮ್ ಈಸ್ ನೌ' ಎಂದು ಬರೆದ ಟೀ ಶರ್ಟ್ ಧರಿಸಿ ಬಂದಿದ್ದರು. ಇದರೊಂದಿಗೆ ರೆಸ್ಲಿಂಗ್ ನಲ್ಲಿ 2025 ಅವರ ಕೊನೆಯ ವರ್ಷ ಎಂದು ಬಹಿರಂಗಪಡಿಸಿದ್ದರು. ಜಾನ್ ಸೀನಾ ‘ರಾ’ ಮೊದಲ ಸಂಚಿಕೆಯಲ್ಲಿ ನಟಿಸುತ್ತಿದ್ದು, ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.
2024ರಲ್ಲಿ ನಡೆದ ಲಾಸ್ ಏಂಜಲೀಸ್ ನ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್’ ಪ್ರಶಸ್ತಿ ವೇಳೆಗೆ ಜಾನ್ ಸೀನಾ ಬೆತ್ತಲೆಯಾಗಿ ವೇದಿಕೆಗೆ ಬಂದಿದ್ದರು. ಸಾಮಾಜಿಕ ಮಾಧ್ಯಮದಲ್ಲೂ ಜಾನ್ ಸೀನಾ ತಮ್ಮ ವಿಲಕ್ಷಣ ಪೋಸ್ಟ್ ಗಳಿಗೆ ಖ್ಯಾತನಾಮರು.