USA | ಚೂರಾದ ಅಮೆರಿಕದ ಕನಸು; ಭಾರತೀಯರನ್ನು ಅಮೆರಿಕದಿಂದ ಹೊರಗೆ ಹಾಕಬೇಕೆನ್ನುವ ಕೂಗು ಏಕೆ ಕೇಳಿಬರುತ್ತಿದೆ?
ಸಾಂದರ್ಭಿಕ ಚಿತ್ರ
ಅಮೆರಿಕದಲ್ಲಿ ಸಾರ್ವಜನಿಕ ಅಭಿಮತ ಸೃಷ್ಟಿಸುವ ಪ್ರಮುಖ ಕಂಪೆನಿಯೊಂದರ ಮಾಲೀಕ H1Bಯಲ್ಲಿ ಅಮೆರಿಕಕ್ಕೆ ಬಂದು ಉದ್ಯೋಗ ನಿರತರಾಗಿರುವವರ ಭಾರತೀಯರನ್ನು ಹೊರಗೆ ಕಳುಹಿಸಲು ಕನ್ಸಲ್ಟನ್ಸಿ ತೆರೆಯುವುದಾಗಿ ಘೋಷಿಸಿದ್ದಾರೆ! ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇಂತಹ ಸಂದಿಗ್ಧ ಘಟ್ಟದಲ್ಲಿರುವಾಗ ಅಮೆರಿಕದಲ್ಲಿರುವ ಭಾರತೀಯರು ಏನು ಹೇಳುತ್ತಾರೆ?
ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯರು ಮತ್ತು ಭಾರತದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಭಾರತೀಯರು ಪರಿಣತ ತಂತ್ರಜ್ಞರು ಮತ್ತು ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸದೆ ನೆಲೆಸಿರುವ ಸಮುದಾಯ ಎಂದು ಒಂದು ವರ್ಗ ಪ್ರಶಂಸಿಸುತ್ತಿದೆ. ಮತ್ತೊಂದು ವರ್ಗ ಅಮೆರಿಕದಲ್ಲಿ ಭಾರತೀಯರು ಮತ್ತು ಭಾರತದ ಉತ್ಪನ್ನಗಳ ಪ್ರಮಾಣ ಹೆಚ್ಚಾಗುತ್ತಿದೆ ಮತ್ತು ಅದನ್ನು ತಡೆಯಬೇಕು ಎಂದು ಕೂಗೆಬ್ಬಿಸುತ್ತಿದೆ. ಏನಿದು ಭಾರತ ಕುರಿತ ಚರ್ಚೆ?
ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಭಾರತೀಯರನ್ನು ಮತ್ತು ಏಷ್ಯಾ ಮೂಲದವರನ್ನು ಅಮೆರಿಕದಿಂದ ಹೊರಗಿಡಲು ಅನೇಕ ಕಾನೂನುಗಳನ್ನು ತರಲಾಗುತ್ತಿದೆ. ಎಚ್1ಬಿ ವೀಸಾದಲ್ಲಿ ಅಮೆರಿಕದಲ್ಲಿ ಉದ್ಯೋಗ ಪಡೆಯಬೇಕೆಂದರೆ 1 ಲಕ್ಷ ಡಾಲರ್ ಪಾವತಿಸಬೇಕು ಎನ್ನುವ ಹೊಸ ನಿಯಮ ತರಲಾಗಿದೆ. ಜೊತೆಗೆ ವೀಸಾಗಳಲ್ಲಿ ಅಮೆರಿಕದಲ್ಲಿ ನೆಲೆಸಿರುವ ಜನರ ಸಾಮಾಜಿಕ ಜಾಲತಾಣಗಳನ್ನು ‘ಗೌಪ್ಯ’ವಾಗಿ ಇಡುವಂತಿಲ್ಲ ಎನ್ನುವ ಹೊಸ ನಿಯಮವನ್ನು ತರಲಾಗುತ್ತಿದೆ. ಭಾರತದ ಮೇಲೆ ಶೇ 50ರಷ್ಟು ಸುಂಕ ಹೇರಲಾಗಿದೆ. ಅಮೆರಿಕದಲ್ಲಿ ಸಾರ್ವಜನಿಕ ಅಭಿಮತ ಸೃಷ್ಟಿಸುವ ಪ್ರಮುಖ ಕಂಪೆನಿಯೊಂದರ ಮಾಲೀಕ H1Bಯಲ್ಲಿ ಅಮೆರಿಕಕ್ಕೆ ಬಂದು ಉದ್ಯೋಗ ನಿರತರಾಗಿರುವವರ ಭಾರತೀಯರನ್ನು ಹೊರಗೆ ಕಳುಹಿಸಲು ಕನ್ಸಲ್ಟನ್ಸಿ ತೆರೆಯುವುದಾಗಿ ಘೋಷಿಸಿದ್ದಾರೆ! ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇಂತಹ ಸಂದಿಗ್ಧ ಘಟ್ಟದಲ್ಲಿರುವಾಗ ಅಮೆರಿಕದಲ್ಲಿರುವ ಭಾರತೀಯರು ಏನು ಹೇಳುತ್ತಾರೆ?
►ಚೂರಾದ ಅಮೆರಿಕ ಕನಸು
ಹೈದರಾಬಾದಿನ ಜವಾಹರಲಾಲ್ ನೆಹರು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ 17 ವರ್ಷದ ಸಾಯಿ ಜಾಗೃತಿ ನ್ಯೂಯಾರ್ಕ್ಟೈಮ್ಸ್ನಲ್ಲಿ ಲೇಖನದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದರು. ಭಾರತದ ಮಧ್ಯಮವರ್ಗದ ಕುಟುಂಬದ ಸಾಯಿ ಜಾಗೃತಿಗೆ ಅಮೆರಿಕದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಅಲ್ಲೇ ನೆಲೆ ಕಂಡುಕೊಳ್ಳುವುದು ಕನಸಾಗಿತ್ತು. “ಉತ್ತಮ ಜೀವನಕ್ಕಾಗಿ ಅಮೆರಿಕಕ್ಕೆ ಹೋಗುವೆ” ಎಂದು ತನ್ನ ಸ್ನೇಹಿತರಲ್ಲಿ ಹೇಳುತ್ತಿದ್ದರು. ಆದರೆ ಇದೀಗ ಟ್ರಂಪ್ ಸರ್ಕಾರ H1B ವೀಸಾಗೆ 1 ಲಕ್ಷ ಡಾಲರ್ ಶುಲ್ಕ ವಿಧಿಸಿರುವುದು ಆಕೆಯ ಕನಸನ್ನು ನುಚ್ಚುನೂರು ಮಾಡಿದೆ. “ಅಷ್ಟೊಂದು ಬೃಹತ್ ಪ್ರಮಾಣದ ಶುಲ್ಕ ತೆರಲು ಸಾಧ್ಯವಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ. ಅದೇ ಕಾಲೇಜಿನ ಮತ್ತೊಬ್ಬ ಹುಡುಗ ನಾಸಾದಲ್ಲಿ ಕೆಲಸ ಮಾಡುವ ಕನಸು ಕಂಡಿದ್ದ. ಆ ಕನಸೂ ಇದೀಗ ಚೂರಾಗಿದೆ.
►ಏನಿದು H1B ವೀಸಾ ಸಮಸ್ಯೆ?
ಭಾರತೀಯರ “ಅಮೆರಿಕದ ಉತ್ತಮ ಜೀವನದ ಕನಸು” ಇಂದಿನದಲ್ಲ. ಹಲವಾರು ದಶಕಗಳಿಂದ ಭಾರತದಿಂದ ಪ್ರತಿಭಾ ವಲಸೆಯ ಬಗ್ಗೆ ಪದೇಪದೇ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಅದು ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ತಲುಪಿದೆ. ಭಾರತದಲ್ಲಿ ಗೋಲ್ಡ್ ಮೆಡಲ್ ಪಡೆದ ಮುಕ್ಕಾಲುಪಾಲು ವಿದ್ಯಾರ್ಥಿಗಳು ಅಮೆರಿಕದಲ್ಲಿ ಅಥವಾ ವಿದೇಶಗಳಲ್ಲಿ ಹೆಚ್ಚಿನ ಓದು ಮತ್ತು ಕೆಲಸದ ಕನಸು ಕಾಣುತ್ತಾರೆ.
H1B ವೀಸಾ ಎನ್ನುವುದು ವಿಶೇಷ ಪರಿಣತಿ ಹೊಂದಿದ ತಂತ್ರಜ್ಞರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ನೀಡಲಾಗುವ ವೀಸಾ. ಸಾಮಾನ್ಯವಾಗಿ F1B ವೀಸಾ ಪಡೆದು ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕೆ ಹೋದವರು ನಂತರ H1B ವೀಸಾ ಅಡಿಯಲ್ಲಿ ಅಮೆರಿಕದಲ್ಲಿ ಉದ್ಯೋಗಕ್ಕೆ ಸೇರುತ್ತಾರೆ. ಕೆಲವೊಮ್ಮೆ ತಂತ್ರಜ್ಞಾನ ಕಂಪೆನಿಗಳು ನೇರವಾಗಿ ಭಾರತದಿಂದಲೇ H1B ವೀಸಾದ ಅಡಿಯಲ್ಲಿ ನುರಿತ ತಂತ್ರಜ್ಞರನ್ನು ನೇಮಿಸಿಕೊಳ್ಳುತ್ತಾರೆ. ಕೆಲವು ಪ್ರಕರಣಗಳಲ್ಲಿ H1B ವೀಸಾ ಪಡೆದ ತಂತ್ರಜ್ಞರು ಭಾರತದ ಹುಡುಗಿಯನ್ನು ಮದುವೆಯಾಗಿ H4 ವೀಸಾದಡಿ ಅಮೆರಿಕಕ್ಕೆ ಕರೆದೊಯ್ಯುತ್ತಾರೆ. ಭಾರತದಲ್ಲಿ ಉದ್ಯೋಗದ ಅನುಭವ ಇರುವ ಹುಡುಗಿಯರು ಈ ವೀಸಾದಡಿ ಅಮೆರಿಕದಲ್ಲಿ ಉದ್ಯೋಗ ಕಂಡುಕೊಳ್ಳುತ್ತಾರೆ. ಇಂತಹ ಹಲವಾರು ರೀತಿಯ ವೀಸಾಗಳಿಂದ ಜನರು ಅಮೆರಿಕದಲ್ಲಿ ಉದ್ಯೋಗ ಮತ್ತು ವಸತಿ ಕಂಡುಕೊಳ್ಳುತ್ತಾರೆ.
90ರ ದಶಕದಲ್ಲಿ H1B ವೀಸಾ ಪಡೆದ ಪತಿಯೊಂದಿಗೆ ಅಮೆರಿಕಕ್ಕೆ ಹೋಗಿ ಈಗ ಅಲ್ಲೇ ನೆಲೆಸಿರುವ ಮಂಗಳೂರು ಮೂಲದ ಮಹಿಳೆಯೊಬ್ಬರು ಹೇಳಿರುವ ಪ್ರಕಾರ, “ನಾನು H4 ವೀಸಾದ ಜೊತೆಗೆ ಪತಿಯೊಂದಿಗೆ ಇಲ್ಲಿಗೆ ಬಂದಿದ್ದೆ. 90ರ ದಶಕದಲ್ಲಿ ನಾವು ಬಂದಿದ್ದೆವು. ನಮಗೆ Green Card ಇದೆ. ಆದರೆ ಪೌರತ್ವ ಸ್ವೀಕರಿಸಿರಲಿಲ್ಲ. ನಮ್ಮ ಮಕ್ಕಳು ಇಲ್ಲೇ ಜನಿಸಿದ ಕಾರಣ ಅವರಿಗೆ ಪೌರತ್ವವಿದೆ. ಈ ಮೊದಲು Green Card ಎಂದರೆ ಪೌರತ್ವವಾಗಿತ್ತು. ಹೀಗಾಗಿ ನಮಗೆ ಅದರ ಅಗತ್ಯ ಕಂಡುಬಂದಿರಲಿಲ್ಲ. ಆದರೆ ಇದೀಗ ಪೌರತ್ವ ಪಡೆಯಬೇಕೆಂದರೆ ಬಹಳ ಕಠಿಣ ನಿಯಮಗಳು ಮತ್ತು ಪರಿಶೀಲನೆಯನ್ನು ಅನುಸರಿಸಬೇಕಿದೆ. ಇನ್ನು ಮುಂದೆ ಇಲ್ಲಿ ಜನಿಸಿದ ವಲಸಿಗರ ಮಕ್ಕಳಿಗೂ ಪೌರತ್ವ ಸಿಗುವುದಿಲ್ಲ. ಆದರೆ ನಮ್ಮ ಮಕ್ಕಳಿಗೇನೂ ಸಮಸ್ಯೆ ಇಲ್ಲ” ಎಂದು ಅಭಿಪ್ರಾಯಪಟ್ಟರು.
►ಭಾರತೀಯ ಸಂಜಾತರು ಹೆಚ್ಚಿರುವ ಪ್ರದೇಶಗಳು
H1B ವೀಸಾದ ಮೇಲೆ ಅಮೆರಿಕಕ್ಕೆ ಹೋಗಿ ನಂತರ Green Card ಪಡೆದು ಅಮೆರಿಕದ ಪೌರತ್ವ ಪಡೆದು ಟೆಕ್ಸಾಸ್ ನಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಮೂಲದ ಐಟಿ ವೃತ್ತಿಪರರಾದ ಅನಿತಾ (ಹೆಸರು ಬದಲಿಸಲಾಗಿದೆ) ಪ್ರಕಾರ, “ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಗೆ ತಮ್ಮ ಪ್ರಜೆಗಳ ಹಿತಾಸಕ್ತಿಯನ್ನು ಗಮನಿಸುತ್ತಿದ್ದಾರೆಯೋ, ಅದೇ ರೀತಿ ಇಲ್ಲಿಯೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಥಳೀಯರ ಹಿತಾಸಕ್ತಿ ಗಮನಿಸುತ್ತಿದ್ದಾರೆ. H1B ವೀಸಾವನ್ನು ವಿಶೇಷ ಪರಿಣತ ತಂತ್ರಜ್ಞರನ್ನು ನೇಮಿಸಿಕೊಳ್ಳಲೆಂದು ನೀಡಲಾಗುತ್ತಿದೆ. ಆದರೆ ಕೆಲವು ರಾಜ್ಯಗಳ ಕನ್ಸಲ್ಟನ್ಸಿಗಳು ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ H1B ವೀಸಾದ ಮೂಲಕ ವಿಭಿನ್ನ ವೃತ್ತಿಪರರನ್ನು ಕರೆತರುತ್ತಿದ್ದಾರೆ. ಅವರು ಇಲ್ಲಿ ರೆಸ್ಟೊರೆಂಟ್, ಹೊಟೇಲ್ ಮತ್ತಿತರ ಕಡೆ ಕೆಲಸಗಳಲ್ಲಿ ತೊಡಗಿದ್ದಾರೆ. ನಾನಿರುವ ಸ್ಥಳದಲ್ಲಿ ಭಾರತೀಯರೇ ತುಂಬಿದ್ದಾರೆ. ನನ್ನ ಮಗಳು ಹೋಗುವ ಶಾಲೆಯಲ್ಲಿ ಒಬ್ಬ ಸ್ಥಳೀಯ ಬಾಲಕ ಹೊರತುಪಡಿಸಿದರೆ ಉಳಿದವರೆಲ್ಲರೂ ಭಾರತೀಯರು! ಇದು ಒಂದು ಪ್ರದೇಶಕ್ಕೆ ಸೀಮಿತವಾಗಿರುವ ಸಮಸ್ಯೆಯಾಗಿರಬಹುದು. ಆದರೆ, ಈ ಸಮಸ್ಯೆಯನ್ನು ಸರಿಪಡಿಸಲು ಇಲ್ಲಿನ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.”
ಅವರ ಪ್ರಕಾರ, H1B ವೀಸಾಗೆ ಮಾತ್ರ ನಿಯಂತ್ರಣ ಹೇರಲಾಗುತ್ತಿದೆ. ಉಳಿದಂತೆ ಶಿಕ್ಷಣ, ಪ್ರಯಾಣ ಮತ್ತಿತರ ಉದ್ದೇಶಗಳಿಗೆ ನೀಡುವ F1B, ಎಲ್1, H4 ಮೊದಲಾದ ವೀಸಾಗಳಿಗೆ ಏನೂ ಸಮಸ್ಯೆಯಾಗಿಲ್ಲ. ವಲಸಿಗರು ಹೆಚ್ಚಾಗಿ ಇಲ್ಲಿನ ಸ್ಥಳೀಯರಿಗೆ ಉದ್ಯೋಗ ದೊರಕುತ್ತಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರ ವೀಸಾದ ಬೆಲೆಯನ್ನು ಗಗನಕ್ಕೇರಿಸಿದೆ.”
ಆದರೆ, ಅಕ್ಕ (ಅಮೆರಿಕದ ಕನ್ನಡ ಕೂಟ) ಸಂಘಟನೆಯ ಅಮರನಾಥ್ ಗೌಡ ಅವರು ಹೇಳುವ ಪ್ರಕಾರ ಹೀಗೆ ನಕಲಿ H1B ವೀಸಾ ಪಡೆದವರು ಬೇರೆ ಮೂಲದಿಂದ ಬಂದಿರಬಹುದು. ಆದರೆ ನೇರವಾಗಿ ಭಾರತದಿಂದ ಬರುವ ಸಾಧ್ಯತೆ ಕಡಿಮೆಯಿದೆ. “ನಾನು ವಲಸಿಗರ ವಕೀಲನಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾಗ ಅಂತಹ ಪ್ರಕರಣಗಳಿಗೆ ಅವಕಾಶ ಕೊಡುವುದಿಲ್ಲ. ವೀಸಾ ಕೊಡುವ ಮೊದಲು ಆಂಟಿ ಫ್ರಾಡ್ ಯುನಿಟ್ (ವಂಚನೆ ನಿಗಾ ಘಟಕ) ಮನೆ-ಮನೆಗೆ ಹೋಗಿ ಮೂಲದಲ್ಲಿಯೇ ಪರಿಶೀಲಿಸುತ್ತಾರೆ. ಹೀಗಾಗಿ ವ್ಯಾಪಕವಾಗಿ ಇಂತಹ ಸಮಸ್ಯೆ ಇರಲು ಸಾಧ್ಯವಿಲ್ಲ.”
“ಇಲ್ಲಿನ ವಲಸಿಗ ಅಧಿಕಾರಿಗಳು ಟೀಕಿಸಿರುವುದನ್ನು ನಾನೂ ಕೇಳಿದ್ದೇನೆ. ಆದರೆ H1B ವೀಸಾದ ಮೇಲೆ ಎರಡು ರೀತಿಯಲ್ಲಿ ಭಾರತೀಯರು ಅಮೆರಿಕಕ್ಕೆ ಬರುತ್ತಾರೆ. ಮೊದಲನೆಯದಾಗಿ ವಿದೇಶಗಳಿಂದ ಬರುವವರು. ಅವರನ್ನು ಎರಡು ಭಾರತೀಯ ರಾಯಭಾರ ಕಚೇರಿ ಮತ್ತು ಅಮೆರಿಕದ ರಾಯಭಾರ ಕಚೇರಿ ಇಬ್ಬರೂ ಪರಿಶೀಲಿಸುತ್ತಾರೆ. ಉಳಿದಂತೆ F1B ವೀಸಾದಲ್ಲಿ ವಿದ್ಯಾರ್ಥಿಗಳಾಗಿ ಬಂದವರಿಗೆ H1B ವೀಸಾ ನೀಡಿ ಉದ್ಯೋಗಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಅವರೇ 85,000 ವೀಸಾದಲ್ಲಿ ಸುಮಾರು 20,000 ವೀಸಾ ಪಡೆಯುತ್ತಾರೆ. ಹೀಗಾಗಿ ನಕಲಿ ವೀಸಾ ಪಡೆದು ಬರುವವರ ಸಂಖ್ಯೆ ಕಡಿಮೆಯೇ ಇರಬಹುದು.”
ಇದೀಗ ಟ್ರಂಪ್ ಸರ್ಕಾರ ವೀಸಾದಲ್ಲಿ ನೆಲೆಸಿರುವವರ ಸಾಮಾಜಿಕ ಜಾಲತಾಣಗಳನ್ನು ಪರಿಶೀಲನೆ ಮಾಡುವುದಾಗಿ ಹೇಳಿರುವುದರಿಂದ ಪರಿಣಾಮ ಬೀರಲಿದೆಯೇ ಎನ್ನುವ ಕಳವಳಕ್ಕೆ ಉತ್ತರಿಸಿದ ಅಮರನಾಥ್ ಅವರು, “ಖಂಡಿತಾ ಪರಿಣಾಮವಾಗಲಿದೆ, ವಿದ್ಯಾರ್ಥಿಗಳು ಕ್ರಿಮಿನಲ್ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಬಹಳಷ್ಟು ಮಂದಿ ವಿದ್ಯಾರ್ಥಿಗಳಾಗಿ ಬಂದವರು ಹಕ್ಕುಗಳ ಪ್ರತಿಭಟನೆಗಳಲ್ಲಿ ತೊಡಗಿರುವುದು ಸ್ಥಳೀಯ ಸರ್ಕಾರಗಳಿಗೆ ಸಮ್ಮತವಿಲ್ಲ. ಅದು ದೇಶದ ಸಹಜ ಪ್ರಕ್ರಿಯೆ”, ಎಂದು ಪ್ರತಿಕ್ರಿಯಿಸಿದರು.