×
Ad

ಲೆಬನಾನ್: ವಿಶ್ವಸಂಸ್ಥೆ ಶಾಂತಿಪಾಲಕರ ಮೇಲೆ ನಾಗರಿಕರ ದಾಳಿ; ವಿಶ್ವಸಂಸ್ಥೆಯ ವಾಹನಗಳಿಗೆ ಹಾನಿ

Update: 2025-05-16 22:06 IST

PC :aljazeera.com

ಬೈರೂತ್: ದಕ್ಷಿಣ ಲೆಬನಾನ್‌ ನಲ್ಲಿ ಶುಕ್ರವಾರ ನಾಗರಿಕರ ಗುಂಪೊಂದು ಲೋಹದ ರಾಡ್‍ ಗಳು ಮತ್ತು ಕೊಡಲಿಗಳನ್ನು ಝಳಪಿಸುತ್ತಾ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಮೇಲೆ ದಾಳಿ ನಡೆಸಿದ್ದು ವಿಶ್ವಸಂಸ್ಥೆಯ ವಾಹನಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಮೂಲಗಳು ಹೇಳಿವೆ.

ಜೆಮೈಜ್ಮೆಹ್ ಮತ್ತು ಖಿರ್ಬತ್ ಸಿಲಿಮ್ ಹಳ್ಳಿಗಳ ನಡುವೆ ವಾಡಿಕೆಯ ಕಾರ್ಯಾಚರಣೆಯಲ್ಲಿದ್ದಾಗ ನಾಗರಿಕರ ಗುಂಪು ದಾಳಿ ನಡೆಸಿದೆ. ವಿಶ್ವಸಂಸ್ಥೆಯ ಪಡೆಗಳು ತಮ್ಮನ್ನು ಮತ್ತು ಆ ಪ್ರದೇಶದಲ್ಲಿ ಉಪಸ್ಥಿತರಿದ್ದವರನ್ನು ರಕ್ಷಿಸಲು ಮಾರಣಾಂತಿಕವಲ್ಲದ ಬಲವನ್ನು ಪ್ರಯೋಗಿಸಿವೆ. ಘಟನೆ ನಡೆದ ಕೆಲ ಹೊತ್ತಲ್ಲೇ ಲೆಬನಾನ್‌ ನ ಸಶಸ್ತ್ರ ಪಡೆ(ಎಲ್‍ಎಎಫ್) ಸ್ಥಳಕ್ಕೆ ಆಗಮಿಸಿದ್ದು ಗಸ್ತು ಪಡೆ ಅದರ ನೆಲೆ ತಲುಪಲು ಬೆಂಗಾವಲು ಒದಗಿಸಿದವು. ಗಸ್ತು ತಿರುಗುವಿಕೆಯನ್ನು ಮೊದಲೇ ಯೋಜಿಸಲಾಗಿದೆ ಮತ್ತು ಎಲ್‍ಎಎಫ್‍ನೊಂದಿಗೆ ಸಂಯೋಜಿಸಲಾಗಿತ್ತು ಎಂದು ಲೆಬನಾನ್‌ ನಲ್ಲಿನ ವಿಶ್ವಸಂಸ್ಥೆ ಮಧ್ಯಂತರ ಪಡೆ(ಯುಎನ್‍ಐಎಫ್‍ಐಎಲ್) ಹೇಳಿದೆ.

ತನಗೆ ವಹಿಸಿರುವ ಜವಾಬ್ದಾರಿಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1701 ನಿರ್ಣಯದಡಿ ಕಾರ್ಯಾಚರಣೆಯ ಸ್ಥಳದಲ್ಲಿ ಚಲನೆಯ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಎಂದು ವಿಶ್ವಸಂಸ್ಥೆ ಶಾಂತಿಪಾಲನಾ ನಿಯೋಗ ಸ್ಪಷ್ಟಪಡಿಸಿದೆ. ಈ ಮಧ್ಯೆ, ಬುಧವಾರ (ಮೇ 14) ಇಸ್ರೇಲ್ ಸೇನೆಯು ನಡೆಸಿದ ನೇರ ಗುಂಡಿನ ದಾಳಿಯು ದಕ್ಷಿಣ ಲೆಬನಾನ್‌ ನಲ್ಲಿರುವ ತನ್ನ ಶಾಂತಿಪಾಲನಾ ಠಾಣೆಯ ಮೇಲೆ ಅಪ್ಪಳಿಸಿದೆ. 2024ರ ನವೆಂಬರ್ ನಲ್ಲಿ ಇಸ್ರೇಲ್-ಲೆಬನಾನ್ ಕದನ ವಿರಾಮ ಆರಂಭಗೊಂಡಂದಿನಿಂದ ಇದು ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ನೆಲೆಯ ಮೇಲಿನ ಮೊದಲ ನೇರ ದಾಳಿಯಾಗಿದೆ ಎಂದು ಯುಎನ್‍ಐಎಫ್‍ಐಎಲ್ ಹೇಳಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News