×
Ad

Iranನ ಕ್ವೆಶ್ಮ್ ದ್ವೀಪದ ಮೇಲೆ ಅಮೆರಿಕ ಮಿಲಿಟರಿ ದಾಳಿ; ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿಸಿ ಇರಾನ್ ಪ್ರತಿದಾಳಿ

Update: 2026-06-03 23:36 IST

Photo Credit : PTI

ಟೆಹರಾನ್, ಜೂ. 3: ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಮಾತುಕತೆಗೆ ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿದಿರುವಂತೆಯೇ ಗಲ್ಫ್ ಪ್ರದೇಶದಲ್ಲಿ ಘರ್ಷಣೆ ಭುಗಿಲೆದ್ದಿದೆ. ಇರಾನ್‌ ನ ಕ್ವೆಶ್ಮ್ ದ್ವೀಪದ ಮೇಲೆ ‘ಆತ್ಮರಕ್ಷಣೆಯ ದಾಳಿ’ ನಡೆಸಿರುವುದಾಗಿ ಅಮೆರಿಕದ ಮಿಲಿಟರಿ ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್‌ ನಿಂದ ದಾಳಿ ನಡೆದಿರುವುದಾಗಿ ಬಹ್ರೇನ್ ಮತ್ತು ಕುವೈತ್ ವರದಿ ಮಾಡಿವೆ.

ಕ್ವೆಶ್ಮ್ ದ್ವೀಪದಲ್ಲಿರುವ ಇರಾನ್ ಮಿಲಿಟರಿಯ ಗ್ರೌಂಡ್ ಕಂಟ್ರೋಲ್ ಸ್ಟೇಷನ್‌ ಅನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಅಮೆರಿಕದ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ. ಕ್ವೆಶ್ಮ್ ದ್ವೀಪವು ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿದೆ.

ಕ್ವೆಶ್ಮ್ ದ್ವೀಪದ ಮೇಲಿನ ದಾಳಿಗೆ ಪ್ರತಿಯಾಗಿ ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾನೆಲೆ ಹಾಗೂ ವಾಯುನೆಲೆಯ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಪ್ರತಿಪಾದಿಸಿದೆ. ಆದರೆ ಈ ಆರೋಪವನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ ನಿರಾಕರಿಸಿದೆ.

ಈ ಮಧ್ಯೆ, ಇರಾನ್ ಮಂಗಳವಾರ ಪ್ರಾದೇಶಿಕ ನೆರೆಹೊರೆಯ ರಾಷ್ಟ್ರಗಳಾದ ಕುವೈತ್ ಮತ್ತು ಬಹ್ರೇನ್ ಕಡೆಗೆ ಹಲವಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಆದರೆ ಅವುಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿರುವುದಾಗಿ ಅಮೆರಿಕ ಮಿಲಿಟರಿ ಹೇಳಿದೆ.

ಗಲ್ಫ್, ಅರಬ್ ರಾಷ್ಟ್ರಗಳ ಖಂಡನೆ

ಬುಧವಾರ ಬೆಳಿಗ್ಗೆ ಕುವೈತ್ ಮತ್ತು ಬಹ್ರೇನ್ ಅನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಿದ ದಾಳಿಯನ್ನು ಗಲ್ಫ್ ಹಾಗೂ ಅರಬ್ ರಾಷ್ಟ್ರಗಳು ಖಂಡಿಸಿವೆ.

ಕುವೈತ್ ನ ಸಾರ್ವಭೌಮತ್ವವನ್ನು ಕಡೆಗಣಿಸಿರುವ ಈ ದಾಳಿ ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ ನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸೌದಿ ಅರೆಬಿಯಾದ ವಿದೇಶಾಂಗ ಇಲಾಖೆ ಹೇಳಿದೆ.

ಗಲ್ಫ್ ಸಹಕಾರ ಮಂಡಳಿ, ಖತರ್, ಯುಎಇ, ಈಜಿಪ್ಟ್, ಜೋರ್ಡಾನ್ ಸೇರಿದಂತೆ ಹಲವು ರಾಷ್ಟ್ರಗಳು ದಾಳಿಯನ್ನು ಖಂಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News