ರಷ್ಯ ವಶದಲ್ಲಿರುವ ಉಕ್ರೇನ್ ನ ಪ್ರಾಂತದಲ್ಲಿ ಬಸ್ ಮೇಲೆ ಡ್ರೋನ್ ದಾಳಿ: 7 ಮೃತ್ಯು
Update: 2026-06-03 23:15 IST
ಸಾಂದರ್ಭಿಕ ಚಿತ್ರ - AI
ಮಾಸ್ಕೋ, ಜೂ. 3: ರಷ್ಯ ಆಕ್ರಮಿತ ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಪ್ರಾಂತದಲ್ಲಿ ಬುಧವಾರ ಬಸ್ ಅನ್ನು ಗುರಿಯಾಗಿಸಿ ನಡೆದ ಡ್ರೋನ್ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಇತರ 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಸ್ಕೋದಿಂದ ಕ್ರೈಮಿಯಾದ ಸಿಮ್ಫೆರೊಪೋಲ್ ಗೆ ಪ್ರಯಾಣಿಸುತ್ತಿದ್ದ ಬಸ್, ಡೊನೆಟ್ಸ್ಕ್ ಪ್ರಾಂತದ ಯೆನಾಕಿಯೆವೊದಲ್ಲಿ ಡ್ರೋನ್ ದಾಳಿಗೆ ಗುರಿಯಾಗಿದೆ. ಪ್ರಾಥಮಿಕ ವರದಿಯ ಪ್ರಕಾರ 7 ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಪ್ಪು ಸಮುದ್ರದ ಪರ್ಯಾಯ ದ್ವೀಪವಾದ ಕ್ರೈಮಿಯಾವನ್ನು 2014ರಲ್ಲಿ ಉಕ್ರೇನ್‌ನಿಂದ ರಷ್ಯ ಸ್ವಾಧೀನಪಡಿಸಿಕೊಂಡಿತ್ತು.
ಈ ಮಧ್ಯೆ, ಮಂಗಳವಾರ ತಡರಾತ್ರಿಯಿಂದ ವಿವಿಧ ಪ್ರದೇಶಗಳಲ್ಲಿ ಉಕ್ರೇನ್‌ನ 354 ಡ್ರೋನ್‌ಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ರಷ್ಯ ಮಿಲಿಟರಿ ಬುಧವಾರ ಹೇಳಿದೆ.