ಸಾಂದರ್ಭಿಕ ಚಿತ್ರ

ರಿಯಾದ್: ಸೌದಿ ಅರೇಬಿಯಕ್ಕೆ ಒಳಪಟ್ಟ ಕೆಂಪು ಸಮುದ್ರದ ಕರಾವಳಿಯಿಂದ ಬಂದ ಅಜ್ಞಾತ ಕ್ಷಿಪಣಿಯೊಂದು ತೈಲ ಟ್ಯಾಂಕರ್ ಗೆ ಅಪ್ಪಳಿಸಿದ್ದು, ಬೆಂಕಿ ಹೊತ್ತಿಕೊಂಡಿದೆ ಎಂದು ಬ್ರಿಟನ್ ನ ಸಮುದ್ರಯಾನ ಸಂಸ್ಥೆಯೊಂದು ತಿಳಿಸಿದೆ. ಈ ಪ್ರದೇಶದಲ್ಲಿ ಹಡಗುಗಳ ಮೇಲೆ ದಾಳಿ ನಡೆಸುವುದಾಗಿ ಹೌದಿಗಳು ಹಾಕಿರುವ ಹೊಸ ಬೆದರಿಕೆಗಳ ನಡುವೆಯೇ ಈ ಬೆಳವಣಿಗೆ ಸಂಭವಿಸಿದೆ.

ಟ್ಯಾಂಕರ್ ಗೆ ಅಜ್ಞಾತ ಕ್ಷಿಪಣಿಯೊಂದು ಬಡಿದಿದ್ದು, ಹಡಗಿನ ಮುಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಯುನೈಟೆಡ್ ಕಿಂಗ್ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKAMTO) ತಿಳಿಸಿದೆ.

ಹಡಗಿನ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಈ ಘಟನೆಯು ಯೆಮನ್ನಿಂದ ಉತ್ತರಕ್ಕೆ ನೂರಾರು ಕಿಲೋಮೀಟರ್ ದೂರದಲ್ಲಿರುವ ಸೌದಿ ನಗರ ಯಾನ್ಬುನಿಂದ ಪಶ್ಚಿಮಕ್ಕೆ 63 ನಾಟಿಕಲ್ ಮೈಲಿ ದೂರದಲ್ಲಿ ಸಂಭವಿಸಿದೆ.

►ಸೌದಿ ಅರೇಬಿಯದ ಮೇಲೆ ಹೌದಿಗಳ ದಾಳಿ

ಟ್ಯಾಂಕರ್ ಮೇಲಿನ ಈ ದಾಳಿಯ ಹೊಣೆಯನ್ನು ಹೌದಿಗಳು ಇನ್ನೂ ಹೊತ್ತುಕೊಂಡಿಲ್ಲವಾದರೂ, ಇರಾನ್ ಬೆಂಬಲಿತ ಈ ಗುಂಪು ಇತ್ತೀಚಿನ ವಾರಗಳಲ್ಲಿ ಸೌದಿ ಅರೇಬಿಯದ ಭೂಭಾಗಗಳು, ಮೂಲಸೌಕರ್ಯ ಮತ್ತು ಹಡಗುಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದೆ. ಈ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ದಾಳಿಯಲ್ಲಿ ಹೌದಿಯ ಕೈವಾಡದ ಶಂಕೆಯನ್ನು ಹುಟ್ಟಿಸಿದೆ.

ಕಳೆದ ತಿಂಗಳು, ಹೌದಿಗಳು ಸೌದಿ ಅರೇಬಿಯವನ್ನು ಗುರಿಯಾಗಿಸಿಕೊಂಡು ಸಮುದ್ರ ದಿಗ್ಬಂಧನವನ್ನು ಘೋಷಿಸಿದ್ದರು ಹಾಗೂ ಸೌದಿ ಅರೇಬಿಯಕ್ಕೆ ಸಂಬಂಧಿಸಿದ ಹಡಗುಗಳು, ವಿಮಾನ ನಿಲ್ದಾಣಗಳು ಮತ್ತು ತೈಲ ಘಟಕಗಳ ಮೇಲೆ ದಾಳಿ ನಡೆಸಿದ್ದರು. ಯೆಮನ್ ರಾಜಧಾನಿ ಸನಾಗೆ ಇರಾನ್ ವಿಮಾನವೊಂದು ಬಂದಿಳಿದ ನಂತರ ಸಂಘರ್ಷ ತೀವ್ರಗೊಂಡಿದೆ ಎಂದು ಎಎಫ್ಪಿ ವರದಿ ಮಾಡಿದೆ.

ಗುರುವಾರ, ಯೆಮನ್ ಗಡಿಗೆ ಸಮೀಪವಿರುವ ಸೌದಿ ಅರೇಬಿಯದ ದಕ್ಷಿಣ ನಜ್ರಾನ್ ಪ್ರದೇಶದಲ್ಲಿ ವಿಮಾನ ನಿಲ್ದಾಣ ಮತ್ತು ಅರಾಮ್ಕೊ ತೈಲ ಸ್ಥಾವರವನ್ನು ಗುರಿಯಾಗಿಸಿ ಎರಡು ಡ್ರೋನ್ ದಾಳಿಗಳನ್ನು ನಡೆಸಿರುವುದಾಗಿ ಹೌದಿ ಸೇನಾ ವಕ್ತಾರ ಯಾಹ್ಯಾ ಸಾರೀ ಹೇಳಿದ್ದಾರೆ.

ಇದಕ್ಕೂ ಮೊದಲು, ಆಗಸ್ಟ್ 9ರಂದು ಸೌದಿ ಅರೇಬಿಯದ ಜಝಾನ್ ಪ್ರದೇಶದಲ್ಲಿರುವ ಅರಾಮ್ಕೊ ಘಟಕದ ಮೇಲೂ ದಾಳಿ ನಡೆಸಲಾಗಿತ್ತು ಹಾಗೂ ಅದರ ಹೊಣೆಯನ್ನು ಹೌದಿಗಳು ಹೊತ್ತುಕೊಂಡಿದ್ದರು ಎಂದು ರಾಯ್ಟರ್ಸ್ ವರದಿ ಮಾಡಿದೆ.

ವಾಯವ್ಯ ಯೆಮನ್ ಮೇಲೆ ಸೌದಿ ನಡೆಸಿದ ಆಕ್ರಮಣಗಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿರುವ ಸಾರೀ, ಜಝಾನ್ ನಲ್ಲಿರುವ ಅರಾಮ್ಕೊ ತೈಲ ಶುದ್ಧೀಕರಣ ಘಟಕದ ಮೇಲೆ ಡ್ರೋನ್ ಮೂಲಕ ದಾಳಿ ನಡೆಸುವಲ್ಲಿ ಗುಂಪು ಯಶಸ್ವಿಯಾಗಿದೆ ಮತ್ತು ಈ ದಾಳಿ ಅತ್ಯಂತ ನಿಖರವಾಗಿತ್ತು ಎಂದು ತಿಳಿಸಿದ್ದರು.

ಆದರೆ, ಜಝಾನ್ ನಲ್ಲಿರುವ ಅರಾಮ್ಕೊ ಘಟಕದಲ್ಲಿ ಸಣ್ಣ ಮಟ್ಟದ ಬೆಂಕಿ ಕಾಣಿಸಿಕೊಂಡಿದ್ದು, ಕಂಪೆನಿಯ ಕೈಗಾರಿಕಾ ಭದ್ರತಾ ಅಗ್ನಿಶಾಮಕ ತಂಡಗಳು ಬೆಂಕಿಯನ್ನು ನಂದಿಸಿವೆ ಮತ್ತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸೌದಿ ಅರೇಬಿಯಾ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor