ಮಧ್ಯಸ್ಥಿಕೆಗಾಗಿ ಟೆಹರಾನ್ ಗೆ ಬಂದಿಳಿದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್
ಅಸಿಮ್ ಮುನೀರ್ | Photo Credit : aljazeera.com
ಟೆಹರಾನ್, ಆ. 24: ಇರಾನ್ ನ ವ್ಯಾಪಾರ ಪಾಲುದಾರರನ್ನು ಗುರಿಯಾಗಿಸಿಕೊಂಡು ಇತಿಹಾಸದಲ್ಲೇ ಅತ್ಯಂತ ದೊಡ್ಡ ಆರ್ಥಿಕ ದಾಳಿಯನ್ನು ನಡೆಸಲು ಅಮೆರಿಕ ಸಜ್ಜಾಗುತ್ತಿರುವ ಬೆನ್ನಲ್ಲೇ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಸೋಮವಾರ ಮಧ್ಯಸ್ಥಿಕೆಗಾಗಿ ಟೆಹರಾನ್ ಗೆ ಭೇಟಿ ನೀಡಿದ್ದಾರೆ.
ಅಮೆರಿಕದ ಈ ಬೆದರಿಕೆಯನ್ನು ನಿರ್ಲಕ್ಷಿಸಿರುವ ಇರಾನ್, ಒಂದು ವೇಳೆ ಆರ್ಥಿಕ ಸಮರ ಮುಂದುವರಿದರೆ ಕೊಲ್ಲಿಯಿಂದ ನಡೆಯುವ ಎಲ್ಲಾ ತೈಲ ರಫ್ತನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದೆ. ಜೊತೆಗೆ, ತನ್ನ ಅನುಮತಿಯಿಲ್ಲದೆ ಹಾರ್ಮುಝ್ ಜಲಸಂಧಿಯ ಮೂಲಕ ಸಾಗದಂತೆ ಸರಕು ಹಡಗುಗಳಿಗೆ ಹೊಸದಾಗಿ ಎಚ್ಚರಿಕೆಯನ್ನು ನೀಡಿದೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಸತತ ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿರುವ ಇರಾನ್ ವಿರುದ್ಧ ಕಠಿಣ ಕ್ರಮಗಳನ್ನು ಘೋಷಿಸುವುದಾಗಿ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ. ಅವರು ಭಾರತೀಯ ಕಾಲಮಾನ ಸೋಮವಾರ ತಡರಾತ್ರಿ ಏರ್ಪಡಿಸುವ ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ದಿಗ್ಬಂಧನದ ಕ್ರಮಗಳನ್ನು ಬಹಿರಂಗಪಡಿಸಲಿದ್ದಾರೆ.
‘‘ಮುಂಜಾನೆಯೊಂದಿಗೆ ‘ಆರ್ಥಿಕ ಡಿ-ಡೇ’ (ಅತ್ಯಂತ ತೀವ್ರ ಆರ್ಥಿಕ ನಿರ್ಬಂಧಗಳು) ಆರಂಭವಾಗಲಿದೆ. ಇದು ಎದುರಾಳಿಯ ವಿರುದ್ಧ ಇದುವರೆಗೆ ಮಾಡಲಾಗಿರುವ ಆರ್ಥಿಕ ದಾಳಿಗಳಲ್ಲೇ ಅತಿದೊಡ್ಡ ಏಕೈಕ ದಾಳಿಯಾಗಿದೆ’’ ಎಂದು ಬೆಸೆಂಟ್ ರವಿವಾರ ‘financial times’ ಪತ್ರಿಕೆಯ ಅಂಕಣದಲ್ಲಿ ಬರೆದಿದ್ದಾರೆ.