ನೇಪಾಳ ಪ್ರವಾಹ | ಒಂದೇ ಮನೆಯಲ್ಲಿ 23 ಮೃತದೇಹಗಳು ಪತ್ತೆ : ಜಲವಿದ್ಯುತ್ ಸುರಂಗದೊಳಗೆ 900ಕ್ಕೂ ಅಧಿಕ ಕಾರ್ಮಿಕರು ಸಿಲುಕಿರುವ ಶಂಕೆ
ಮೃತರ ಸಂಖ್ಯೆ 1,003ಕ್ಕೆ ಏರಿಕೆ
Photo Credit : PTI
ಕಾಠ್ಮಂಡು : ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 1,000 ದಾಟಿದೆ. ರಕ್ಷಣಾ ಕಾರ್ಯಕರ್ತರು ಬದುಕುಳಿದವರನ್ನು ತಲುಪಲು ಹರಸಾಹಸಪಡುತ್ತಿದ್ದಾರೆ.
ಇದರ ನಡುವೆ, ಹೊಸ ಪ್ರವಾಹದ ಎಚ್ಚರಿಕೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಮತ್ತಷ್ಟು ಅಡ್ಡಿಯಾಗುವ ಆತಂಕವನ್ನು ಹೆಚ್ಚಿಸಿದೆ.
ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, ಪ್ರವಾಹದಲ್ಲಿ 987 ಮಂದಿ ಮೃತಪಟ್ಟಿದ್ದು, 583 ವಿದೇಶಿಯರು ಸೇರಿದಂತೆ 3,916 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
ಚೀನಾ ಅಧಿಕಾರಿಗಳು ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಟಿಬೆಟ್‌ನ ಗೈರಾಂಗ್ ಕೌಂಟಿಯಲ್ಲಿ 16 ಮಂದಿ ಮೃತಪಟ್ಟಿದ್ದು, 546 ಮಂದಿ ನಾಪತ್ತೆಯಾಗಿದ್ದಾರೆ. ಇದರಿಂದ ನೇಪಾಳ ಮತ್ತು ಟಿಬೆಟ್‌ನಲ್ಲಿ ಪ್ರವಾಹದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 1,003ಕ್ಕೆ ಏರಿಕೆಯಾಗಿದೆ.
ನುವಾಕೋಟ್ ಮತ್ತು ರಸುವಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಅಪಾಯದ ಕುರಿತು ಅಧಿಕಾರಿಗಳು ಮಂಗಳವಾರ ಹೊಸ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಆರನೇ ದಿನವೂ ಮುಂದುವರಿದಿರುವ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿಯಾಗುವ ಸಾಧ್ಯತೆ ಇದೆ. ಮಣ್ಣು, ಹಾನಿಗೊಳಗಾದ ರಸ್ತೆಗಳು ಹಾಗೂ ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆಗೆ ಈಗಾಗಲೇ ಅಡ್ಡಿಯಾಗುತ್ತಿದೆ. ಇದರ ನಡುವೆಯೂ, ಆರು ದಿನಗಳಿಂದ ಜಲವಿದ್ಯುತ್ ಸುರಂಗಗಳೊಳಗೆ ಸಿಲುಕಿರುವರೆಂದು ಶಂಕಿಸಲಾಗಿರುವ 900ಕ್ಕೂ ಹೆಚ್ಚು ಕಾರ್ಮಿಕರನ್ನು ತಲುಪಲು ರಕ್ಷಣಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ನೇಪಾಳ ಸೇನೆಯು ಮುಚ್ಚಿಹೋಗಿರುವ ಸುರಂಗಗಳಿಂದ ಮಣ್ಣು ಮತ್ತು ನೀರನ್ನು ತೆರವುಗೊಳಿಸಲು ಹಾಗೂ ಬದುಕುಳಿದವರಿಗಾಗಿ ಶೋಧ ನಡೆಸಲು ಜೆಸಿಬಿ ಯಂತ್ರಗಳು, ನಿಯಂತ್ರಿತ ಸ್ಫೋಟಗಳು ಮತ್ತು ಶೋಧ ದೀಪಗಳನ್ನು ಬಳಸುತ್ತಿದೆ. ನುವಾಕೋಟ್‌ನ ಬೆತ್ರಾವತಿಯಲ್ಲಿ ಒಂದೇ ಮನೆಯಿಂದ 23 ಮೃತದೇಹಗಳು ಪತ್ತೆಯಾಗಿವೆ.
ಇಲ್ಲಿಯವರೆಗೆ ನೇಪಾಳದಲ್ಲಿ 3,916 ಮಂದಿ ನಾಪತ್ತೆಯಾಗಿದ್ದು, 11,814 ಮಂದಿಯನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ 279 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 65,000 ಜನರಿಗೆ ತುರ್ತು ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ ನೆರವು ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 22,000ಕ್ಕೂ ಹೆಚ್ಚು ಮಕ್ಕಳಿಗೆ ರಕ್ಷಣಾ ಸೇವೆಗಳ ಅಗತ್ಯವಿದ್ದು, ಐದು ವರ್ಷದೊಳಗಿನ ಸುಮಾರು 2,600 ಮಕ್ಕಳಿಗೆ ತೀವ್ರ ಅಪೌಷ್ಟಿಕತೆಗೆ ಚಿಕಿತ್ಸೆ ಅಗತ್ಯವಾಗಬಹುದು ಎಂದು ತಿಳಿಸಿದೆ.
ಹಠಾತ್ ಪ್ರವಾಹದಿಂದ 19 ಶಾಲೆಗಳು ಹಾನಿಗೊಳಗಾಗಿದ್ದು, ಈ ಪೈಕಿ 9 ಶಾಲೆಗಳು ಸಂಪೂರ್ಣವಾಗಿ ನಾಶವಾಗಿವೆ. 8 ಶಾಲೆಗಳನ್ನು ನಿರಾಶ್ರಿತ ಕುಟುಂಬಗಳಿಗೆ ಆಶ್ರಯ ತಾಣಗಳಾಗಿ ಬಳಸಲಾಗುತ್ತಿದೆ.