America | H-1B ವೀಸಾದಾರರ ಸಂಗಾತಿಗಳ ಉದ್ಯೋಗ ಹಕ್ಕು ರದ್ದುಪಡಿಸಲು ಟ್ರಂಪ್ ಆಡಳಿತ ಪ್ರಸ್ತಾಪ; ಭಾರತೀಯರ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ
ಸಾಂದರ್ಭಿಕ ಚಿತ್ರ | ndtv
ವಾಷಿಂಗ್ಟನ್: H-1B ವೀಸಾ ಹೊಂದಿರುವವರ ಸಂಗಾತಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ನೀಡಿರುವ ಅವಕಾಶವನ್ನು ರದ್ದುಪಡಿಸಲು ಟ್ರಂಪ್ ಆಡಳಿತ ಪ್ರಸ್ತಾಪಿಸಿದೆ. ಈ ಪ್ರಸ್ತಾಪ ಜಾರಿಗೆ ಬಂದರೆ, H-4 ವೀಸಾ ಹೊಂದಿರುವ ಸಾವಿರಾರು ಮಂದಿ ಅಮೆರಿಕದಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡುವ ಅವಕಾಶ ಕಳೆದುಕೊಳ್ಳಬಹುದು.
H-1B ವೀಸಾ ಹೊಂದಿರುವವರ ಸಂಗಾತಿ ಮತ್ತು ಮಕ್ಕಳಿಗೆ H-4 ವೀಸಾ ನೀಡಲಾಗುತ್ತದೆ. ಆದರೆ H-4 ವೀಸಾ ಮಾತ್ರ ಇದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ. ಅರ್ಹ H-4 ವೀಸಾದಾರರು ಪ್ರತ್ಯೇಕವಾಗಿ ಉದ್ಯೋಗ ಅಧಿಕಾರ ದಾಖಲೆ (EAD) ಪಡೆದುಕೊಂಡರೆ ಮಾತ್ರ ಕೆಲಸ ಮಾಡಬಹುದು.
ಈ EAD ಸೌಲಭ್ಯವನ್ನು ರದ್ದುಪಡಿಸಲು ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ಮುಂದಾಗಿದೆ. ಈ ನಿಯಮ ಒಂದು ದಶಕಕ್ಕೂ ಹೆಚ್ಚು ಕಾಲ ಜಾರಿಯಲ್ಲಿದೆ.
H-4 EAD ಹೊಂದಿರುವವರಲ್ಲಿ ಹೆಚ್ಚಿನವರು ಭಾರತೀಯರು. ಆದ್ದರಿಂದ ಪ್ರಸ್ತಾವ ಜಾರಿಗೆ ಬಂದರೆ ಭಾರತೀಯ H-1B ವೀಸಾದಾರರ ಕುಟುಂಬಗಳು ಹೆಚ್ಚು ಪರಿಣಾಮಕ್ಕೆ ಒಳಗಾಗಬಹುದು.
ಶೇ. 93ರಷ್ಟು ಅರ್ಜಿಗಳು ಭಾರತೀಯರದ್ದು
2014ರಿಂದ 2017ರವರೆಗಿನ H-4 EAD ಅರ್ಜಿಗಳ ದತ್ತಾಂಶದ ಪ್ರಕಾರ, ಅನುಮೋದನೆಯಾದ ಅರ್ಜಿಗಳಲ್ಲಿ ಶೇ. 93ರಷ್ಟು ಭಾರತೀಯ ಪ್ರಜೆಗಳಿಗೆ ಸೇರಿದ್ದವು. ಈ ಅರ್ಜಿದಾರರಲ್ಲಿ ಶೇ. 94ರಷ್ಟು ಮಹಿಳೆಯರದ್ದಾಗಿದೆ.
ಪ್ರಸ್ತಾಪದಲ್ಲಿ ಏನಿದೆ?
ಈ ಯೋಜನೆಯನ್ನು ಅಮೆರಿಕದ ಮಾಹಿತಿ ಮತ್ತು ನಿಯಂತ್ರಕ ವ್ಯವಹಾರಗಳ ಕಚೇರಿ (OIRA) ಅಡಿಯಲ್ಲಿ ಬರುವ Reginfo.govನಲ್ಲಿ ಪಟ್ಟಿ ಮಾಡಲಾಗಿದೆ.
‘ಉದ್ಯೋಗ ಅಧಿಕಾರಕ್ಕೆ ಅರ್ಹರಲ್ಲದ ನಾಗರಿಕರ ವರ್ಗಗಳಿಂದ H-4 ಅವಲಂಬಿತ ಸಂಗಾತಿಗಳನ್ನು ತೆಗೆದುಹಾಕುವುದು’ ಎಂಬ ಶೀರ್ಷಿಕೆಯಡಿ ಇದನ್ನು ದಾಖಲಿಸಲಾಗಿದೆ.
DHSನ ದೀರ್ಘಕಾಲೀನ ನಿಯಂತ್ರಕ ಕಾರ್ಯಸೂಚಿಯಲ್ಲೂ ಈ ಪ್ರಸ್ತಾವ ಸೇರಿದೆ. ಆದರೆ, ಇದನ್ನು ಯಾವಾಗ ಪ್ರಕಟಿಸಲಾಗುತ್ತದೆ ಎಂಬ ದಿನಾಂಕವನ್ನು ನಿಗದಿಪಡಿಸಿಲ್ಲ.
DHSನ ಪ್ರಕಾರ, H-1B ವೀಸಾ ಹೊಂದಿರುವವರ ಕೆಲವು H-4 ಅವಲಂಬಿತ ಸಂಗಾತಿಗಳಿಗೆ (c)(26) ವರ್ಗದಡಿ ಉದ್ಯೋಗ ಅಧಿಕಾರ ಪಡೆಯುವ ಅವಕಾಶವನ್ನು ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ.
2015ರಲ್ಲಿ ಜಾರಿಗೆ ಬಂದ ‘ಕೆಲವು H-4 ಅವಲಂಬಿತ ಸಂಗಾತಿಗಳಿಗೆ ಉದ್ಯೋಗ ಅಧಿಕಾರ’ ಎಂಬ ನಿಯಮದ ಮೂಲಕ ನೀಡಲಾದ ಈ ಅವಕಾಶವನ್ನು ರದ್ದುಪಡಿಸುವುದು ಪ್ರಸ್ತಾವದ ಉದ್ದೇಶ.
ಅಂದರೆ, 2015ಕ್ಕೂ ಮೊದಲು H-4 ಸಂಗಾತಿಗಳಿಗೆ ಉದ್ಯೋಗ ಅಧಿಕಾರ ಪಡೆಯಲು ಇದ್ದ ನಿಯಮವನ್ನು ಮತ್ತೆ ಜಾರಿಗೆ ತರಲು DHS ಬಯಸಿದೆ.
ತಕ್ಷಣದಿಂದ ಜಾರಿಗೆ ಬರುವುದಿಲ್ಲ
ಇದು ಇನ್ನೂ ಪ್ರಸ್ತಾವ ಮಾತ್ರ. ಅಂತಿಮ ನಿಯಮವಲ್ಲ. ಆದ್ದರಿಂದ H-4 EAD ಸೌಲಭ್ಯ ಈಗಲೇ ರದ್ದಾಗುವುದಿಲ್ಲ.
ಪ್ರಸ್ತಾವವನ್ನು ಜಾರಿಗೆ ತರಲು DHS ಮೊದಲು ಫೆಡರಲ್ ರಿಜಿಸ್ಟರ್ ನಲ್ಲಿ ಅಧಿಕೃತ ಸೂಚನೆ ಪ್ರಕಟಿಸಬೇಕು. ಬಳಿಕ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪಡೆಯಬೇಕು. ಆ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಂತಿಮ ನಿಯಮ ಪ್ರಕಟಿಸಬೇಕು.
ಅಲ್ಲಿಯವರೆಗೆ ಮಾನ್ಯ EAD ಹೊಂದಿರುವ H-4 ವೀಸಾದಾರರು ಪ್ರಸ್ತುತ ನಿಯಮದಂತೆ ಕೆಲಸ ಮುಂದುವರಿಸಬಹುದು.
2017ರಲ್ಲೂ ಇದೇ ಪ್ರಯತ್ನ
H-4 EAD ಸೌಲಭ್ಯವನ್ನು ರದ್ದುಪಡಿಸುವ ಪ್ರಯತ್ನ ಇದೇ ಮೊದಲಲ್ಲ.
ಟ್ರಂಪ್ ಆಡಳಿತದ ಮೊದಲ ಅವಧಿಯಲ್ಲಿ, 2017ರಲ್ಲಿ DHS ಇದೇ ರೀತಿಯ ಪ್ರಸ್ತಾವ ಮುಂದಿಟ್ಟಿತ್ತು. ಕೆಲವು H-4 ಸಂಗಾತಿಗಳಿಗೆ ಉದ್ಯೋಗ ಅಧಿಕಾರ ನೀಡುವುದನ್ನು ನಿಲ್ಲಿಸುವುದು ಅದರ ಉದ್ದೇಶವಾಗಿತ್ತು.
ಆದರೆ ಆ ಪ್ರಸ್ತಾವ ಅಂತಿಮ ನಿಯಮವಾಗಲಿಲ್ಲ. 2021ರಲ್ಲಿ ಅದನ್ನು ಹಿಂಪಡೆಯಲಾಯಿತು.
H-1B ಮೇಲೆ ಮತ್ತಷ್ಟು ಕ್ರಮ
H-4 EAD ನಿಯಮ ಬದಲಿಸುವ ಪ್ರಸ್ತಾವವು H-1B ವೀಸಾ ವ್ಯವಸ್ಥೆಗೆ ಸಂಬಂಧಿಸಿದ ಆಡಳಿತದ ಹಲವು ಕ್ರಮಗಳಲ್ಲಿ ಒಂದಾಗಿದೆ.
ಹೊಸ H-1B ನೇಮಕಾತಿಗಳ ಮೇಲೆ 1,03,265 ಡಾಲರ್ ಶುಲ್ಕ ವಿಧಿಸುವ ಪ್ರಸ್ತಾವವನ್ನೂ DHS ಮುಂದಿಟ್ಟಿದೆ.
ಇದರ ಜತೆಗೆ, H-1B ಉದ್ಯೋಗ ಕಳೆದುಕೊಂಡವರು ಹೊಸ ಉದ್ಯೋಗದಾತರನ್ನು ಹುಡುಕಲು ಈಗ ದೊರೆಯುತ್ತಿರುವ 60 ದಿನಗಳ ಅವಧಿಯನ್ನು ತೆಗೆದುಹಾಕಲು ಶ್ವೇತಭವನ ಬಯಸಿದೆ.
H-4 ವೀಸಾದಾರರು ಏನು ಮಾಡಬಹುದು?
H-4 ವೀಸಾ ಕೆಲಸ ಮಾಡಲು ನೀಡುವ ವೀಸಾ ಅಲ್ಲ. H-1B ವೀಸಾ ಹೊಂದಿರುವವರ ಸಂಗಾತಿ ಅಥವಾ ಮಕ್ಕಳಿಗೆ ಅಮೆರಿಕದಲ್ಲಿ ಅವರೊಂದಿಗೆ ವಾಸಿಸಲು H-4 ವೀಸಾ ನೀಡಲಾಗುತ್ತದೆ.
ಅರ್ಹ H-4 ವೀಸಾದಾರರು ಕೆಲಸ ಮಾಡಲು ಪ್ರತ್ಯೇಕವಾಗಿ EAD ಪಡೆಯಬೇಕು. ಈ ಸೌಲಭ್ಯವು H-1B ವೀಸಾ ಹೊಂದಿರುವ ಸಂಗಾತಿ ಈಗಾಗಲೇ ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆಯಲ್ಲಿರುವ ನಿರ್ದಿಷ್ಟ H-4 ಸಂಗಾತಿಗಳಿಗೆ ಲಭ್ಯವಿದೆ.
EAD ಇಲ್ಲದ H-4 ವೀಸಾದಾರರು ಅಮೆರಿಕದಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ ಅವರು ಅಮೆರಿಕದಲ್ಲಿ ವಾಸಿಸಬಹುದು. ಚಾಲನಾ ಪರವಾನಗಿ ಪಡೆಯಬಹುದು. ಬ್ಯಾಂಕ್ ಖಾತೆ ತೆರೆಯಬಹುದು.
ಭಾರತೀಯರಿಗೆ ಮೇಲೆ ಏಕೆ ಹೆಚ್ಚು ಪರಿಣಾಮ?
USCIS ದತ್ತಾಂಶದ ಪ್ರಕಾರ, 2024ರ ಹಣಕಾಸು ವರ್ಷದಲ್ಲಿ ಅನುಮೋದನೆಯಾದ H-1B ಅರ್ಜಿಗಳಲ್ಲಿ ಭಾರತೀಯ ಪ್ರಜೆಗಳ ಪಾಲು ಸುಮಾರು ಶೇ. 71ರಷ್ಟಿತ್ತು.
ಇದರ ಜೊತೆಗೆ, H-4 EAD ಅನುಮೋದನೆಗಳಲ್ಲಿ ಭಾರತೀಯರ ಪಾಲು ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ H-4 EAD ಸೌಲಭ್ಯವನ್ನು ರದ್ದುಪಡಿಸಿದರೆ, ಭಾರತೀಯ H-1B ವೀಸಾ ಹೊಂದಿರುವವರ ಕುಟುಂಬಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ.