ಶಿಶಿರ್ ಕನಾಲ್ | Photo Credit : PTI 

ಕಠ್ಮಂಡು, ಸೆ. 2: ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿರುವ ಹಾಗೂ ಸಹಸ್ರಾರು ಮಂದಿ ನಾಪತ್ತೆಯಾಗಿರುವ ದಿಢೀರ್ ಪ್ರವಾಹ ಸೇರಿದಂತೆ ಹವಾಮಾನ ವೈಪರೀತ್ಯಗಳಿಂದ ಸಂಭವಿಸಿದ ನಾಶ, ನಷ್ಟಗಳಿಗಾಗಿ ಇಂಗಾಲಾಮ್ಲ ಮತ್ತಿತರ ‘ಹಸಿರುಮನೆ ಅನಿಲ’ಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಹೊರಸೂಸುವ ಚೀನಾ, ಅಮೆರಿಕ ಹಾಗೂ ಭಾರತದಂತಹ ದೇಶಗಳು ಪರಿಹಾರ ನೀಡಬೇಕೆಂದು ನೇಪಾಳವು ಬುಧವಾರ ಆಗ್ರಹಿಸಿದೆ.

ಜಾಗತಿಕ ತಾಪಮಾನ ಬಿಕ್ಕಟ್ಟಿಗೆ ಇತರ ರಾಷ್ಟ್ರಗಳು ನೀಡುತ್ತಿರುವ ‘ಕೊಡುಗೆ’ಗಳಿಗೆ ಹೋಲಿಸಿದರೆ ನೇಪಾಳದ ಪಾತ್ರ ಅತ್ಯಂತ ಸಣ್ಣದಾಗಿದೆ. ಆದರೂ ಪ್ರಾಕೃತಿಕ ವಿಪತ್ತುಗಳಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಅದು ಭರಿಸಬೇಕೆಂಬುದನ್ನು ಇತರ ರಾಷ್ಟ್ರಗಳು ನಿರೀಕ್ಷಿಸಬಾರದು ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಕನಾಲ್ ಅವರು ತಿಳಿಸಿದ್ದಾರೆ. ಪ್ರಾಕೃತಿಕ ವಿಕೋಪದಿಂದ ತತ್ತರಿಸುತ್ತಿರುವ ನೇಪಾಳಕ್ಕೆ ಪರಿಹಾರವನ್ನು ನೀಡುವುದು ಜಗತ್ತಿನ ಅತ್ಯಧಿಕ ಹಸಿರುಮನೆ ಅನಿಲವನ್ನು ಹೊರಸೂಸುವ ರಾಷ್ಟ್ರಗಳ ನೈತಿಕ ಹಾಗೂ ಕಾನೂನುಬದ್ಧ ಹೊಣೆಗಾರಿಕೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇಂಗಾಲವನ್ನು ಅಧಿಕ ಪ್ರಮಾಣದಲ್ಲಿ ಹೊರಸೂಸುವ ಮೂಲಕ ಜಾಗತಿಕ ತಾಪಮಾನಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ ದೇಶಗಳ ಸಾಲಿನಲ್ಲಿ ಭಾರತ, ಚೀನಾ ಹಾಗೂ ಅಮೆರಿಕ ದೇಶಗಳನ್ನು ಕೂಡ ನೇಪಾಳವು ಗುರುತಿಸಿದೆ.

ಹವಾಮಾನ ಬದಲಾವಣೆಯಿಂದಾಗಿ ನೇಪಾಳದಂತಹ ರಾಷ್ಟ್ರಗಳ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ ಎಂಬುದನ್ನು ಇತ್ತೀಚೆಗೆ ಸಂಭವಿಸಿದ ದಿಢೀರ್ ಪ್ರವಾಹವು ಸಾಬೀತುಪಡಿಸಿದೆ ಎಂದು ನೇಪಾಳಿ ಸರ್ಕಾರವು ತಿಳಿಸಿದೆ. ನೆರೆ, ಭೂಕುಸಿತ, ಹಿಮನದಿಗಳ ಕರಗುವಿಕೆ ಮತ್ತಿತರ ಹವಾಮಾನ ಸಂಬಂಧಿತ ವಿಪತ್ತುಗಳ ಬೆದರಿಕೆಯು ಹಿಮಾಲಯದ ತಪ್ಪಲಲ್ಲಿ ವಾಸಿಸುವ ಜನಸಮುದಾಯಗಳಿಗೆ ಹೆಚ್ಚುತ್ತಲೇ ಹೋಗುತ್ತಿದೆಯೆಂದು ಅದು ಹೇಳಿದೆ.

ಕೈಗಾರೀಕರಣದಂತಹ ಇಂಗಾಲಾಮ್ಲ ಹೊರಸೂಸುವಿಕೆ ಕೇಂದ್ರೀತ ಅಭಿವೃದ್ಧಿಯ ಪ್ರಯೋಜನ ಪಡೆದ ದೇಶಗಳು, ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳನ್ನು ಎದುರಿಸುತ್ತಿರುವ ದೇಶಗಳಿಗೆ ಪರಿಹಾರ ನೀಡಬೇಕೆಂಬ ಬೇಡಿಕೆಯನ್ನು ನೇಪಾಳವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪುನರುಚ್ಚರಿಸುತ್ತಲೇ ಬಂದಿದೆ. ಅಲ್ಲದೆ, ಜಾಗತಿಕ ತಾಪಮಾನದ ಎದುರು ದುರ್ಬಲವಾಗಿರುವ ಪ್ರದೇಶಗಳಲ್ಲಿ ಹಿಮಾಲಯ ಕೂಡ ಒಂದೆಂಬುದಾಗಿ ಪರಿಗಣಿಸಬೇಕೆಂದು ಅದು ಆಗ್ರಹಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor