×
Ad

ನೆಲ್ಸನ್ ಮಂಡೇಲಾ ಕಾರ್ಯಕ್ರಮದಲ್ಲಿ ಉಮರ್ ಖಾಲಿದ್‌ರನ್ನು ಸ್ಮರಿಸಿದ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ

Update: 2026-07-17 08:50 IST

Photo: x.com/Chrysographer

ನ್ಯೂಯಾರ್ಕ್ : ದಕ್ಷಿಣ ಆಫ್ರಿಕಾದ ಧೀಮಂತ ನಾಯಕ ನೆಲ್ಸನ್ ಮಂಡೇಲಾ ಅವರ ಬಗೆಗಿನ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ನಗರದ ಮೇಯರ್ ಝೊಹ್ರಾನ್ ಮಮ್ದಾನಿ ಅವರು ಭಾರತದ ಹೋರಾಟಗಾರ ಉಮರ್ ಖಾಲಿದ್ ಸೇರಿದಂತೆ ಹಲವು ರಾಜಕೀಯ ಕೈದಿಗಳ ಬಂಧನದ ಕುರಿತು ಪ್ರಸ್ತಾಪಿಸಿದ್ದಾರೆ. ನ್ಯಾಯಸಮ್ಮತ ಬೇಡಿಕೆಯೊಂದಿಗೆ ಸಾಗುವ ಪ್ರತಿಯೊಂದು ಮೆರವಣಿಗೆಯಲ್ಲಿ ಮಂಡೇಲಾ ಜೀವಂತವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬುಧವಾರ ನ್ಯೂಯಾರ್ಕ್ ನಗರದ ಟೌನ್ ಹಾಲ್‌ನಲ್ಲಿ ನಡೆದ "ನೆಲ್ಸನ್ ಮಂಡೇಲಾ ಗ್ಲೋಬಲ್ ಲೀಡರ್‌ಶಿಪ್ ಫೋರಂ"ನಲ್ಲಿ ಮಂಡೇಲಾ ಅವರ ಪರಂಪರೆ, ಇತಿಹಾಸದ ಬಗ್ಗೆ ದಿಕ್ಸೂಚಿ ಭಾಷಣ ಮಾಡುವಾಗ ಮಮ್ದಾನಿ ಈ ಹೇಳಿಕೆಗಳನ್ನು ನೀಡಿದ್ದಾರೆ.

ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಈ ಮಹಾನ್ ನಾಯಕ ಮಂಡೇಲಾ, ನ್ಯಾಯಕ್ಕಾಗಿ ನಡೆಯುವ ಪ್ರತಿಯೊಂದು ಪ್ರತಿಭಟನೆಯಲ್ಲಿ ಮತ್ತು ನ್ಯಾಯಸಮ್ಮತ ಬೇಡಿಕೆಯೊಂದಿಗೆ ಸಾಗುವ ಪ್ರತಿಯೊಂದು ಮೆರವಣಿಗೆಯಲ್ಲಿ ಜೀವಂತವಾಗಿದ್ದಾರೆ ಎಂದು ಮಮ್ದಾನಿ ಹೇಳಿದ್ದಾರೆ.

ಮಂಡೇಲಾ ಅವರ ಸುದೀರ್ಘ ಹೋರಾಟವನ್ನು ಪ್ರಸ್ತಾಪಿಸಿದ ಮಮ್ದಾನಿ, ಇಂದು ಜಗತ್ತಿನ ಬಹುತೇಕ ಪ್ರತಿಯೊಬ್ಬರೂ, ತಾವು ವರ್ಣಭೇದ ನೀತಿಯನ್ನು ವಿರೋಧಿಸಿದ್ದೆವು ಮತ್ತು ಮಂಡೇಲಾ ಪರವಾಗಿ ನಿಂತಿದ್ದೆವು ಎಂದು ಹೇಳಿಕೊಳ್ಳುತ್ತಾರೆ. ಅಂತಿಮವಾಗಿ, ಇಂದು ತಾವು ಸಮರ್ಥಿಸಿಕೊಳ್ಳುತ್ತಿರುವ ಪ್ರತಿಯೊಂದು ಅನ್ಯಾಯವನ್ನು ತಾವು ವಿರೋಧಿಸುತ್ತಿದ್ದೆವು ಎಂದು ಮುಂದೆ ಒಂದಲ್ಲಾ ಒಂದು ದಿನ ಬಹುತೇಕ ಎಲ್ಲರೂ ಹೇಳಿಕೊಳ್ಳುತ್ತಾರೆ. ಆದರೆ, ಇತಿಹಾಸವು ತನ್ನ ತೀರ್ಪನ್ನು ನೀಡಿದ ನಂತರ ನಾವು ಎಲ್ಲಿ ನಿಂತಿದ್ದೆವು ಎಂಬುದರ ಆಧಾರದ ಮೇಲೆ ನ್ಯಾಯವನ್ನು ಅಳೆಯಲಾಗುವುದಿಲ್ಲ. ಬದಲಿಗೆ, ಇತಿಹಾಸದ ತೀರ್ಪು ಇನ್ನೂ ಹೊರಬೀಳುತ್ತಿರುವಾಗ, ಪ್ರಸ್ತುತ ಪರಿಸ್ಥಿತಿಯಲ್ಲಿ, ನಾವು ಎಲ್ಲಿ ನಿಂತಿದ್ದೇವೆ ಎಂಬುದರ ಆಧಾರದ ಮೇಲೆ ನ್ಯಾಯವನ್ನು ಅಳೆಯಲಾಗುತ್ತದೆ" ಎಂದು ಅವರು ಹೇಳಿದರು.

ಇದೇ ವೇಳೆ ಅವರು ಸಕ್ರಿಯ ಹೋರಾಟಗಾರ ಉಮರ್ ಖಾಲಿದ್ ಸೇರಿದಂತೆ ಹಲವರ ಬಂಧನದ ಕುರಿತು ಪ್ರಸ್ತಾಪಿಸಿದ್ದಾರೆ.

"ದಿಲ್ಲಿಯಲ್ಲಿ ಉಮರ್ ಖಾಲಿದ್ ಅವರ ಬಂಧನವು 6ನೇ ವರ್ಷಕ್ಕೆ ಕಾಲಿಡುತ್ತಿರುವಾಗ ನಾವು ಏಕೆ ಸುಮ್ಮನೆ ಕಾಯುತ್ತಾ ಕುಳಿತುಕೊಳ್ಳಬೇಕು? ಒಂದು ಕಾಲದಲ್ಲಿ ಮಂಡೇಲಾ ವಿರುದ್ಧ ಸುಳ್ಳು ಭಯೋತ್ಪಾದನಾ ಆರೋಪಗಳನ್ನು ಹೊರಿಸಲಾಗಿತ್ತು. ಈಗ ಅದೇ ರೀತಿಯ ಸುಳ್ಳು ಭಯೋತ್ಪಾದನಾ ಆರೋಪಗಳ ಅಡಿಯಲ್ಲಿ ಉಮರ್ ಖಾಲಿದ್ ರಾಜಕೀಯ ಕೈದಿಯಾಗಿ ಜೈಲಿನಲ್ಲಿದ್ದಾರೆ" ಎಂದು ಮಮ್ದಾನಿ ಹೇಳಿದರು.

ಭಾರತೀಯ ಮೂಲದವರಾದ ಮಮ್ದಾನಿ ಅವರು, ಇಸ್ರೇಲ್‌ನಲ್ಲಿ ಬಂಧನದಲ್ಲಿರುವ ಫೆಲಸ್ತೀನಿಯನ್ ಮಕ್ಕಳ ತಜ್ಞ ಹುಸ್ಸಾಮ್ ಇದ್ರಿಸ್ ಅಬು ಸಫಿಯಾ ಅವರ ಬಂಧನ ಹಾಗೂ ಇತರ ಹಲವು ಪ್ರಕರಣಗಳನ್ನು ಪ್ರಸ್ತಾಪಿಸಿದರು.

ಮಮ್ದಾನಿ ಅವರು ಖಾಲಿದ್‌ಗೆ ಪತ್ರವೊಂದನ್ನು ಬರೆದಿದ್ದರು ಎಂಬುದು ಕಳೆದ ಜನವರಿಯಲ್ಲಿ ವರದಿಯಾಗಿತ್ತು. ಈ ಪತ್ರವನ್ನು ಖಾಲಿದ್ ಅವರ ಸಂಗಾತಿ ಬನೋಜ್ಯೋತ್ಸ್ನಾ ಲಾಹಿರಿ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News