×
Ad

Iran | ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಸಮೀಪ ಅಮೆರಿಕ ದಾಳಿ; ರೋಗಿಗಳು, ಕುಟುಂಬಸ್ಥರ ಸ್ಥಳಾಂತರ

Update: 2026-07-16 21:56 IST

Photo Credits: @Iranpress_eng on X

ಟೆಹರಾನ್, ಜು.16: ನೈಋತ್ಯ ಇರಾನ್ ನ ಅಹ್ವಾಜ್ ನಲ್ಲಿರುವ ಶಾಹಿದ್ ಬಘೇಯ್ ಆಸ್ಪತ್ರೆಯ ಸಮೀಪ ಅಮೆರಿಕದ ಕ್ಷಿಪಣಿಗಳು ಅಪ್ಪಳಿಸಿದ ನಂತರ, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಸೇರಿದಂತೆ ರೋಗಿಗಳನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಲಾಗಿದೆ ಎಂದು ಇರಾನ್ ನ 'ಮೆಹರ್' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಕ್ಕಳು ಸೇರಿದಂತೆ ಕ್ಯಾನ್ಸರ್ ರೋಗಿಗಳಿಗೆ ಕೀಮೋಥೆರಪಿ ಚಿಕಿತ್ಸೆಯನ್ನು ನೀಡುವ ಶಾಹಿದ್ ಬಘೇಯ್ ಆಸ್ಪತ್ರೆಯ ಆವರಣದ ಸಮೀಪ ದಾಳಿ ನಡೆದಿದ್ದು, ದಾಳಿಯ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ಸಿಬ್ಬಂದಿ ರೋಗಿಗಳನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಿದ್ದಾರೆ. ಆಸ್ಪತ್ರೆಯ ಸಮೀಪ ಹಲವಾರು ಕ್ಷಿಪಣಿಗಳು ಅಪ್ಪಳಿಸಿದ್ದು, ರೋಗಿಗಳು ಮತ್ತು ಅವರ ಕುಟುಂಬಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಪ್ರದೇಶದಲ್ಲಿ ಸ್ಫೋಟದ ಶಬ್ದಗಳು ಕೇಳಿಬರುತ್ತಿದ್ದಂತೆ ವೈದ್ಯಕೀಯ ಸಿಬ್ಬಂದಿ ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿರುವುದು ಕಂಡುಬಂದಿದೆ.

ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದೆಯೇ ಅಥವಾ ಆಸ್ಪತ್ರೆಗೆ ಹಾನಿಯಾಗಿದೆಯೇ ಎಂಬುದು ವರದಿಗಳಿಂದ ಸ್ಪಷ್ಟವಾಗಿಲ್ಲ.

ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳಿಗೆ ಬೆದರಿಕೆ ಹಾಕಲು ಇರಾನ್ ಬಳಸುತ್ತಿತ್ತು ಎನ್ನಲಾದ ಕಮಾಂಡ್ ಸೆಂಟರ್ ಗಳು, ವಾಯು ರಕ್ಷಣಾ ವ್ಯವಸ್ಥೆಗಳು, ಕ್ಷಿಪಣಿ ಮತ್ತು ಡ್ರೋನ್ ಮೂಲಸೌಕರ್ಯಗಳು ಹಾಗೂ ಕರಾವಳಿ ಕಣ್ಗಾವಲು ಸೌಲಭ್ಯಗಳು ಸೇರಿದಂತೆ ಇರಾನ್ ನ ಮಿಲಿಟರಿ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು 'ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್)' ತಿಳಿಸಿದೆ.

ಇರಾನ್ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ಮುರಿಯಲು ಯತ್ನಿಸುತ್ತಿದ್ದ ಕುರಾಕೊ ದೇಶದ ಧ್ವಜ ಹೊಂದಿದ್ದ 'ಎಂ/ಟಿ ಬೆಲ್ಮಾ' ಎಂಬ ತೈಲ ಟ್ಯಾಂಕರ್ನ ಹೊಗೆಕೊಳವೆಗೆ ಅಮೆರಿಕದ ಯುದ್ಧವಿಮಾನವು ಹೆಲ್ಫೈರ್ ಕ್ಷಿಪಣಿಗಳನ್ನು ಉಡಾಯಿಸಿದ್ದು, ಹಡಗು ಮುಳುಗದಂತೆ ಅದನ್ನು ನಿಷ್ಕ್ರಿಯಗೊಳಿಸಿದೆ ಎಂದು ಸೆಂಟ್ಕಾಮ್ ಹೇಳಿದೆ. ಇರಾನ್ ನ ಏಕೈಕ ನಾಗರಿಕ ಪರಮಾಣು ವಿದ್ಯುತ್ ಸ್ಥಾವರವನ್ನು ಹೊಂದಿರುವ ಬುಶೆಹರ್ ಸೇರಿದಂತೆ ಬಂದರ್ ಅಬ್ಬಾಸ್, ರಾಸ್ಕ್, ಚಬಹಾರ್, ಕೇಶ್ಮ್ ಮತ್ತು ಬಂದರ್ ಇಮಾಮ್ ಖಾಮಿನೈ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News