ಅಮೆರಿಕ ತಂತ್ರಜ್ಞಾನ ಉದ್ಯಮದಲ್ಲಿ ಬದಲಾವಣೆಯ ಬಿರುಗಾಳಿ; ಭಾರತ ಸೇರಿ ವಿದೇಶೀಯರ ನೇಮಕಾತಿ ತಡೆಗೆ ಟ್ರಂಪ್ ಸೂಚನೆ
ಡೊನಾಲ್ಡ್ ಟ್ರಂಪ್ (PTI)
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪೆನಿಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸೇರಿದಂತೆ ವಿದೇಶಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಬದಲು ಅಮೆರಿಕನ್ನರಿಗೇ ಮೊದಲ ಆದ್ಯತೆ ನೀಡಬೇಕೆಂದು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ವಾಷಿಂಗ್ಟನ್‌ನಲ್ಲಿ ನಡೆದ AI ಶೃಂಗಸಭೆಯಲ್ಲಿ ಬುಧವಾರ ಮಾತನಾಡಿದ ಟ್ರಂಪ್ ಅವರು, “ಅಮೆರಿಕದ ಕಂಪೆನಿಗಳು ಭಾರತೀಯ ತಂತ್ರಜ್ಞಾನ ಉದ್ಯೋಗಿಗಳಿಗೆ ಅವಕಾಶ ನೀಡುವ ಬದಲು ದೇಶೀಯ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಬೇಕು,” ಎಂದು ತಿಳಿಸಿದರು.
ತಂತ್ರಜ್ಞಾನ ಉದ್ಯಮದ ಜಾಗತಿಕ ಮನೋಭಾವವನ್ನು ಅವರು ತೀವ್ರವಾಗಿ ಟೀಕಿಸಿದ್ದು, ಇದರಿಂದ ಅನೇಕ ಅಮೆರಿಕನ್ನರು ಉದ್ಯೋಗವಿಲ್ಲದ ಸ್ಥಿತಿಗೆ ತುತ್ತಾಗಿದ್ದಾರೆ ಎಂದು ಆರೋಪಿಸಿದ್ದಾರೆ.
“ಅವರು ಭಾರತದಲ್ಲಿ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಚೀನಾದಲ್ಲಿ ಕಾರ್ಖಾನೆಗಳನ್ನು ನಿರ್ಮಿಸುತ್ತಾರೆ. ಐರ್ಲೆಂಡ್‌ನಲ್ಲಿ ಲಾಭ ಸಂಗ್ರಹಿಸುತ್ತಾರೆ. ಆದರೆ ಈ ದೇಶಗಳ ಹೊರಗಿನಿಂದ ಬಂಡವಾಳ ಹಾಕುವ ಮೂಲಕ ಅಮೆರಿಕದ ಶಕ್ತಿಯನ್ನು ದುರ್ಬಳಕೆ ಮಾಡುತ್ತಿದ್ದಾರೆ,” ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದರು. “ಅಂತಹ ದಿನಗಳು ಈಗ ಮುಕ್ತಾಯವಾಗುತ್ತಿವೆ,” ಎಂದು ಅವರು ಘೋಷಿಸಿದರು.
ಟ್ರಂಪ್ ಈ ವೇಳೆ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಮಹತ್ವದ ಕಾರ್ಯನಿರ್ವಹಣಾ ಆದೇಶಗಳಿಗೆ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದರು.
Winning the Race ಯೋಜನೆಯ ಮೂಲಕ ಅಮೆರಿಕದಲ್ಲಿ ಡೇಟಾ ಸೆಂಟರ್‌ಗಳ ನಿರ್ಮಾಣಕ್ಕೆ ಉತ್ತೇಜನೆ ನೀಡಿಲಾಗುವುದು. ಈ ಮೂಲಕ AI ಮೂಲಸೌಕರ್ಯವನ್ನು ಸುಧಾರಿಸಿ, ದೇಶೀಯವಾಗಿ AI ಅಭಿವೃದ್ಧಿ ವೇಗವರ್ಧನೆಗೆ ನೆರವಾಗಲಿದೆ.
ತಟಸ್ಥ AI ಅಭಿವೃದ್ಧಿಗೆ ಒತ್ತಾಯಿಸುವ ಮೂಲಕ ಫೆಡರಲ್ ಹಣ ಸಹಾಯ ಪಡೆದ AI ಸಂಸ್ಥೆಗಳು ರಾಜಕೀಯ ತಟಸ್ಥತೆಯನ್ನು ಕಾಯ್ದುಕೊಳ್ಳಬೇಕು. “ಅದನ್ನು ಮೀರುವ AIಗೆ ಸರ್ಕಾರದಿಂದ ಬೆಂಬಲವಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದರು.
ಅಮೆರಿಕನ್ ನಿರ್ಮಿತ AI ಸಾಧನಗಳ ಪ್ರಚಾರಕ್ಕೆ ಒತ್ತು ನೀಡುವ ಮೂಲಕ ದೇಶೀಯ AI ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವುದು ಮತ್ತು ಪೂರ್ಣ ಮಟ್ಟದ ಅಭಿವೃದ್ಧಿಗೆ ಬೆಂಬಲ ಕಲ್ಪಿಸುವದು ಈ ಆದೇಶದ ಗುರಿಯಾಗಿದೆ. ಆ ಮೂಲಕ ಟ್ರಂಪ್ ಅಮೆರಿಕ ಮೊದಲು ಘೋಷಣೆಗೆ ಮುಂದಡಿಯಿಟ್ಟಿದ್ದಾರೆಹ
"ಇದು ಕೃತಕವಲ್ಲ ಸಾಧನವಲ್ಲ, ಪ್ರತಿಭೆ" ಎಂಬ ಘೋಷಣೆಯ ಮೂಲಕ ಟ್ರಂಪ್ AI ಪದ ಬಳಕೆಯ ಮೇಲೂ ಅಸಮಾಧಾನ ವ್ಯಕ್ತಪಡಿಸಿದರು. AI ಎಂದರೆ ಕೃತಕ ಬುದ್ಧಿಮತ್ತೆ ಅಲ್ಲ, ಬದಲಿಗೆ ನೈಸರ್ಗಿಕ ಪ್ರತಿಭೆಯ ಫಲ ಎಂದು ಅವರು ಅಭಿಪ್ರಾಯಪಟ್ಟರು.
ಈ ಘೋಷಣೆಗಳು ತಕ್ಷಣ ಪರಿಣಾಮ ಬೀರುವಂತಿಲ್ಲದಿದ್ದರೂ, ಭಾರತೀಯ ತಂತ್ರಜ್ಞಾನ ವೃತ್ತಿಪರರು, ಹೊರಗುತ್ತಿಗೆ ಕಂಪನಿಗಳು ಮತ್ತು H1B ವೀಸಾ ಆಧಾರಿತ ಉದ್ಯೋಗಗಳಿಗೆ ಗಂಭೀರ ಪರಿಣಾಮಗಳ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.