×
Ad

ಅಟ್ಟಾರಿ-ವಾಘಾ ಗಡಿ ಮತ್ತೆ ತೆರೆದ ಪಾಕಿಸ್ತಾನ

Update: 2025-05-02 22:07 IST

PC : PTI 

ಇಸ್ಲಮಾಬಾದ್: ಭಾರತದಿಂದ ವಾಪಸಾಗುತ್ತಿರುವ ಪಾಕಿಸ್ತಾನದ ಪ್ರಜೆಗಳು ದೇಶದೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಅಟ್ಟಾರಿ-ವಾಘಾ ಗಡಿಯನ್ನು ಶುಕ್ರವಾರ ಪಾಕಿಸ್ತಾನ ಮತ್ತೆ ತೆರೆದಿದೆ ಎಂದು ವರದಿಯಾಗಿದೆ.

ಎಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಘಟನೆಯ ಹಿನ್ನೆಲೆಯಲ್ಲಿ, ದೇಶವನ್ನು ತೊರೆಯಲು ಅಲ್ಪಾವಧಿ ವೀಸಾದಲ್ಲಿ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ನಾಗರಿಕರಿಗೆ ಭಾರತ ಆದೇಶಿಸಿದ ಬಳಿಕ ಗಡಿಭಾಗದಲ್ಲಿ ಗೊಂದಲ, ಗದ್ದಲದ ಪರಿಸ್ಥಿತಿ ನೆಲೆಸಿತ್ತು. ಈ ಕಾರಣದಿಂದ ಗುರುವಾರ (ಮೇ 1) ಅಟ್ಟಾರಿ-ವಾಘಾ ಗಡಿಯನ್ನು ಪಾಕಿಸ್ತಾನ ಮುಚ್ಚಿತ್ತು. ಗಡಿಭಾಗವನ್ನು ತಲುಪಲು ಪಾಕ್ ಪ್ರಜೆಗಳಿಗೆ ಭಾರತ ಅನುಮತಿ ನೀಡಿದ್ದರೂ ಪಾಕಿಸ್ತಾನದ ಕ್ರಮದಿಂದಾಗಿ ಅವರಿಗೆ ಗಡಿಯನ್ನು ದಾಟಲು ಆಗಿರಲಿಲ್ಲ.

ತನ್ನ ಪ್ರಜೆಗಳಿಗೆ ಯಾಕೆ ಒಳ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದು ಎಂಬುದಕ್ಕೆ ಪಾಕಿಸ್ತಾನ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಭಾರತದಿಂದ ನಿರ್ಗಮಿಸಲು ಕಾಯುತ್ತಿರುವ ಪಾಕಿಸ್ತಾನದ ಪ್ರಜೆಗಳು ಗಡಿಭಾಗದಲ್ಲಿ ಅಧಿಕಾರಿಗಳ ಜೊತೆ ವಾಗ್ಯುದ್ದ ನಡೆಸುತ್ತಿರುವ, ಬ್ಯಾರಿಕೇಡ್‍ಗಳನ್ನು ತಳ್ಳಿ ಒಳನುಗ್ಗಲು ಪ್ರಯತ್ನಿಸುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅಲ್ಪಾವಧಿಯ ವೀಸಾ, ಮೆಡಿಕಲ್ ವೀಸಾದಡಿ ಭಾರತದಲ್ಲಿರುವ ಪಾಕ್ ಪ್ರಜೆಗಳು ತಕ್ಷಣ ನಿರ್ಗಮಿಸಬೇಕೆಂದು ಭಾರತ ಸರಕಾರ ಆದೇಶಿಸಿತ್ತು.

ದೀರ್ಘಾವಧಿಯ ವೀಸಾ ಹೊಂದಿರುವ ಪಾಕ್ ಪ್ರಜೆಗಳು ಹಾಗೂ ಪಾಕಿಸ್ತಾನ ಮೂಲದ ಹಿಂದೂಗಳಿಗೆ ಭಾರತದಲ್ಲಿ ಇರಲು ಅವಕಾಶ ನೀಡಲಾಗಿದೆ. ಭಾರತ ಸರಕಾರದ ಆದೇಶದ ಬಳಿಕ ಎಪ್ರಿಲ್ 30ರಂದು 125 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತದಿಂದ ನಿರ್ಗಮಿಸಿದ್ದು ಕಳೆದ ವಾರದಿಂದ ಒಟ್ಟು 911 ಪಾಕ್ ಪ್ರಜೆಗಳು ಭಾರತದಿಂದ ನಿರ್ಗಮಿಸಿದಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News