ಬಲೂಚಿಸ್ತಾನದಲ್ಲಿ ಪಾಕ್ ಪಡೆಯ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ, 23 ಒತ್ತೆಯಾಳುಗಳ ರಕ್ಷಣೆ
Photo: x.com/the_hindu
ಕ್ವೆಟಾ: ಪಾಕಿಸ್ತಾನದ ನೈರುತ್ಯ ಭಾಗದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಹತ್ಯೆಯಾಗಿದ್ದು, 23 ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ ಎಂದು ಸೇನೆ ರವಿವಾರ ತಿಳಿಸಿದೆ.
ಉಗ್ರರು ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದ ಅವಧಿಯಲ್ಲಿ ಬಲೂಚಿಸ್ತಾನ್ ಪ್ರಾಂತದ ಕಲಾತ್ ಬಳಿ ಕಾನೂನುಬಾಹಿರ ಚೆಕ್‌ಪೋಸ್ಟ್ ನಿರ್ಮಿಸಿದ್ದರು. ಹಣ ಸುಲಿಗೆ ಮಾಡಲು, ವಾಹನಗಳನ್ನು ವಶಪಡಿಸಿಕೊಳ್ಳಲು ಮತ್ತು ಜನರನ್ನು ಅಪಹರಿಸಲು ಅವರು ವಾಹನಗಳನ್ನು ತಡೆಯುತ್ತಿದ್ದರು.
ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಜೊತೆಗೆ ಆರು ಟ್ರಕ್‌ಗಳು, ಮೂರು ಬಸ್‌ಗಳು ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಂಡಿವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅಡಗಿರುವ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಿಲಿಟರಿ ತಿಳಿಸಿದೆ.
ಹತ್ಯೆಗೀಡಾದ ಉಗ್ರರನ್ನು ‘ಬಲೂಚ್ ಲಿಬರೇಷನ್ ಆರ್ಮಿ’ (ಬಿಎಲ್‌ಎ) ಸದಸ್ಯರೆಂದು ಗುರುತಿಸಿರುವುದಾಗಿ ಸೇನೆಯ ಮೂಲಗಳು ತಿಳಿಸಿವೆ.