ಷರತ್ತು ಈಡೇರುವವರೆಗೆ ಹಾರ್ಮುಝ್ ತೆರೆಯುವುದಿಲ್ಲ: ಅಮೆರಿಕಕ್ಕೆ ಇರಾನ್ ಸ್ಪಷ್ಟ ಸಂದೇಶ
ಮೊಹಮ್ಮದ್ ಬಾಘರ್ ಘಾಲಿಬಾಫ್ | Photo Credit : AP
ಟೆಹರಾನ್, ಸೆ. 20: ತಮ್ಮ ಷರತ್ತುಗಳು ಈಡೇರುವವರೆಗೆ ಮತ್ತು ಅಮೆರಿಕಾದ ಬದ್ಧತೆಗಳು ಜಾರಿಯಾಗುವವರೆಗೆ ಹಾರ್ಮುಝ್ ಜಲಸಂಧಿಯನ್ನು ಇರಾನ್ ತೆರೆಯುವುದಿಲ್ಲ ಎಂದು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ರವಿವಾರ ತಿಳಿಸಿರುವುದಾಗಿ ‘ಫಾರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ಹೋರಾಟ ಮತ್ತು ಮಾತುಕತೆ ಎರಡನ್ನೂ ಮಾಡಬೇಕಾಗಿದೆ. ಮಧ್ಯವರ್ತಿಗಳ ಮೂಲಕ ತಮ್ಮ ಷರತ್ತುಗಳನ್ನು ಎದುರಾಳಿಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಈ ಷರತ್ತುಗಳನ್ನು ಪೂರೈಸುವವರೆಗೆ, ಇರಾನ್ ಜನರ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸುವವರೆಗೆ ಮತ್ತು ಅಮೆರಿಕನ್ನರು ತಮ್ಮ ಬದ್ಧತೆಗಳನ್ನು ಈಡೇರಿಸುವವರೆಗೆ ಹಾರ್ಮುಝ್ ಜಲಸಂಧಿಯನ್ನು ತೆರೆಯಲು ಯಾವುದೇ ಅವಕಾಶವಿರುವುದಿಲ್ಲ ಎಂದು ಘಾಲಿಬಾಫ್ ಹೇಳಿರುವುದಾಗಿ ವರದಿಯಾಗಿದೆ.
ಈ ಮಧ್ಯೆ, ಇರಾನ್ ನ ಪ್ರಸ್ತುತ ಯೋಜನೆಯು ಗಲ್ಫ್ ನಿಂದ ಒಮಾನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದವರೆಗೆ ವಿಸ್ತರಿಸಿರುವ ಅಮೆರಿಕದ ನೌಕಾಪಡೆಯ ಮೇಲೆ ಕೇಂದ್ರೀಕೃತವಾಗಿದೆ. ಇರಾನ್ ಇತ್ತೀಚೆಗೆ ನೌಕಾ-ವಿರೋಧಿ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ ಎಂದು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇರಾನ್ ನೀಡುವ ಉತ್ತರವು ವ್ಯಾಪಕವಾಗಿರಬಹುದು. ಈ ಪ್ರದೇಶದಲ್ಲಿರುವ ಅಮೆರಿಕದ ನೆಲೆಗಳು ಹಾಗೂ ಸ್ಥಳೀಯವಾಗಿ ಕಾರ್ಯಾಚರಿಸುತ್ತಿರುವ ಅಮೆರಿಕದ ವಾಣಿಜ್ಯ ಹಿತಾಸಕ್ತಿಗಳು ಮತ್ತು ಕಂಪನಿಗಳನ್ನು ಗುರಿಯಾಗಿಸಿಕೊಳ್ಳಬಹುದು ಎಂದು ರೆಜಾಯಿ ಎಚ್ಚರಿಸಿದ್ದಾರೆ.