ಪಿಒಕೆ ಜನರು ಜಮ್ಮು-ಕಾಶ್ಮೀರದೊಂದಿಗೆ ಒಂದುಗೂಡಲು ಬಯಸಿದ್ದಾರೆ : ಪಾಕ್ ಆಕ್ರಮಿತ ಕಾಶ್ಮೀರದ ನಾಯಕ ಮಕ್ಸೂದ್ ಹೇಳಿಕೆ
ಜಮೀಲ್ ಮಕ್ಸೂದ್ | Photo Credit : ANI
ಮುಜಾಫರಾಬಾದ್, ಅ.3: ಜನರನ್ನು ದಮನಿಸುವ ಇತಿಹಾಸವಿರುವ ಪಾಕಿಸ್ತಾನ ರಾಕ್ಷಸ ರಾಷ್ಟ್ರ. ಪಾಕಿಸ್ತಾನವು ತನ್ನದೇ ಜನರ ವಿರುದ್ಧ ದಬ್ಬಾಳಿಕೆ ನಡೆಸುತ್ತಿದೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ಪ್ರಮುಖ ನಾಯಕ ಜಮೀಲ್ ಮಕ್ಸೂದ್ ಆರೋಪಿಸಿದ್ದು ಪಿಒಕೆಯ ಜನರು ಜಮ್ಮು ಮತ್ತು ಕಾಶ್ಮೀರ ರಾಜ್ಯದೊಂದಿಗೆ ಒಂದುಗೂಡಲು ಆಶಿಸುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.
ಪಾಕಿಸ್ತಾನದೊಂದಿಗೆ ಬದುಕಲು ತಾವು ಸಿದ್ಧರಿಲ್ಲ ಎಂದು ಜನರು ಈಗ ಅರಿತಿದ್ದಾರೆ ಮತ್ತು ಈ ಎಲ್ಲಾ ಪ್ರದೇಶಗಳ ಜನರ ಪ್ರಮುಖ ಆಕಾಂಕ್ಷೆ ಮತ್ತು ನಿಲುವು ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದೊಂದಿಗೆ ಒಂದಾಗುವುದು. ಬಲಪ್ರಯೋಗದ ಮೂಲಕ ಈ ಧ್ವನಿಗಳನ್ನು ಅಡಗಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಆದರೆ ಜನರು ಸುಮ್ಮನಿರಲು ಸಿದ್ಧವಿಲ್ಲ' ಎಂದು `ಯುನೈಟೆಡ್ ಕಾಶ್ಮೀರ್ ಪೀಪಲ್ಸ್ ನ್ಯಾಷನಲ್ ಪಾರ್ಟಿ(ಯುಕೆಪಿಎನ್‍ಪಿ) ಅಧ್ಯಕ್ಷರೂ ಆಗಿರುವ ಮಕ್ಸೂದ್‍ರನ್ನು ಉಲ್ಲೇಖಿಸಿ ಎಎನ್‍ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಲೂಚಿಸ್ತಾನ, ಸಿಂಧ್, ಖೈಬರ್ ಪಖ್ತೂಂಕ್ವಾ, ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮೂಲಭೂತ ಮಾನವ ಹಕ್ಕುಗಳ ನಿರಾಕರಣೆ ದಬ್ಬಾಳಿಕೆ ಮತ್ತು ನಿಗ್ರಹದ ಪ್ರಕ್ರಿಯೆಯಾಗಿದೆ ಎಂದು ಜಮೀಲ್ ಮಕ್ಸೂದ್ ಆರೋಪಿಸಿರುವುದಾಗಿ ವರದಿಯಾಗಿದೆ.
ಭುಗಿಲೆದ್ದ ಹಿಂಸಾಚಾರ
ಜನರು ತೀವ್ರ ಸಂಕಷ್ಟದಲ್ಲಿರುವಾಗ ರಾಜಕಾರಣಿಗಳಿಗೆ ಉಚಿತ ವಿದ್ಯುತ್, ಐಷಾರಾಮಿ ಕಾರುಗಳ ಸಹಿತ ಇತರ ಸೌಲಭ್ಯಗಳನ್ನು ಒದಗಿಸುವುದನ್ನು ವಿರೋಧಿಸಿ ಸೋಮವಾರ ಮುಝಫರಾಬಾದ್‍ನಲ್ಲಿ ಆರಂಭಗೊಂಡಿದ್ದ ಪ್ರತಿಭಟನೆ ಕ್ರಮೇಣ ಇತರ ಪ್ರದೇಶಗಳಿಗೂ ವ್ಯಾಪಿಸಿತ್ತು. `ಪಿಒಕೆಯ ರಸ್ತೆಗಳು ರಕ್ತದ ಕಲೆಗಳು, ಖಾಲಿಯಾದ ಬುಲೆಟ್ ಕಾಟ್ರ್ರಿಡ್ಜ್, ಗಾಜಿನ ಚೂರುಗಳು ಮತ್ತು ಕಲ್ಲಿನ ರಾಶಿಗಳಿಂದ ತುಂಬಿದೆ' ಎಂದು ಎಎಫ್‍ಪಿ ಬುಧವಾರ ವರದಿ ಮಾಡಿತ್ತು.
ಕಣಿವೆಯಾದ್ಯಂತ ಇಂಟರ್‌ನೆಟ್ ಮತ್ತು ಮೊಬೈಲ್ ಫೋನ್ ಸೇವೆಗಳನ್ನು ಬ್ಲಾಕ್ ಮಾಡಲಾಗಿತ್ತು ಮತ್ತು ಪ್ರತಿಭಟನೆಯನ್ನು ವರದಿ ಮಾಡದಂತೆ ಸ್ಥಳೀಯ ಮಾಧ್ಯಮಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಮತ್ತು ಭದ್ರತಾ ಪಡೆಗಳು ಲಾಠಿಜಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದ್ದು ಘರ್ಷಣೆಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು 170ಕ್ಕೂ ಅಧಿಕ ಭದ್ರತಾ ಸಿಬ್ಬಂದಿ, 100ಕ್ಕೂ ಅಧಿಕ ನಾಗರಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಸರ್ಕಾರ - ನಾಗರಿಕ ಸಮಾಜ ಸಮಿತಿಯ ನಡುವೆ ಮಾತುಕತೆ
ಪಿಒಕೆಯಲ್ಲಿ ಹಿಂಸಾಚಾರ ಮತ್ತು ಪ್ರತಿಭಟನೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸಮಾಜ ಸಮಿತಿ ಹಾಗೂ ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ರವಾನಿಸಿರುವ ಉನ್ನತ ಮಟ್ಟದ ಸರಕಾರಿ ನಿಯೋಗದ ನಡುವೆ ಮಾತುಕತೆ ಮುಂದುವರಿದಿರುವುದಾಗಿ `ದಿ ಡಾನ್' ವರದಿ ಮಾಡಿದೆ.
ಪಿಒಕೆಯ ಪ್ರಧಾನಿ ಚೌಧರಿ ಅನ್ವರುಲ್ ಹಕ್, ಫೆಡರಲ್ ಸಚಿವರು ಸೇರಿದಂತೆ 8 ಸದಸ್ಯರ ಉನ್ನತ ಮಟ್ಟದ ಸಮಿತಿಯು ಜಮ್ಮು ಕಾಶ್ಮೀರ್ ಜಾಯಿಂಟ್ ಅವಾಮಿ ಆ್ಯಕ್ಷನ್ ಕಮಿಟಿ(ಜೆಕೆಜೆಎಎಸಿ)ಯ ಸದಸ್ಯರೊಂದಿಗೂ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.