×
Ad

"ಯುಎಇ ಮೇಲಿನ ದಾಳಿ ಖಂಡನೀಯ": ಅಬುಧಾಬಿಯಲ್ಲಿ ಪ್ರಧಾನಿ ಮೋದಿ ಹೇಳಿಕೆ

ಯುಎಇಯಲ್ಲಿ ವಾಸಿಸುತ್ತಿರುವ ಭಾರತೀಯರ ಬಗ್ಗೆ ತೋರಿದ ಕಾಳಜಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ

Update: 2026-05-15 15:03 IST

Photo credit: X/@narendramodi

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಮೇಲಿನ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಯುಎಇಯನ್ನು ಯಾವುದೇ ರೂಪದಲ್ಲಿಯೂ ಯುದ್ಧದ ಗುರಿಯಾಗಿಸುವುದು ಸ್ವೀಕಾರಾರ್ಹವಲ್ಲ ಎಂದೂ ಅವರು ಹೇಳಿದರು.

ಯುಎಇ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅಲ್ಲಿನ ಸರಕಾರದ ಮುಖ್ಯಸ್ಥರೊಂದಿಗೆ ನಡೆಸಿದ ಮಾತುಕತೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

“ಯುಎಇ ಮೇಲಿನ ದಾಳಿಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಯುಎಇಯನ್ನು ಗುರಿಯಾಗಿಸಿಕೊಂಡ ರೀತಿಯೂ ಯಾವುದೇ ರೂಪದಲ್ಲಿಯೂ ಸ್ವೀಕಾರಾರ್ಹವಲ್ಲ. ಈ ಕಠಿಣ ಸಂದರ್ಭಗಳಲ್ಲಿ ನೀವು ತೋರಿಸಿರುವ ಸಂಯಮ ಮತ್ತು ಪ್ರಬುದ್ಧತೆ ಅತ್ಯಂತ ಶ್ಲಾಘನೀಯ,” ಎಂದು ಪ್ರಧಾನಿ ಹೇಳಿದರು.

ರಾಷ್ಟ್ರೀಯ ಏಕತೆ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಯುಎಇ ಕೈಗೊಂಡ ಕ್ರಮಗಳನ್ನು ಭಾರತ ಮೆಚ್ಚುತ್ತದೆ ಎಂದರು.

ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯ ನಡುವೆಯೂ ಯುಎಇಯಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರು ಎಮಿರೇಟ್ಸ್ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

“ಈ ಸಂಕಷ್ಟದ ಸಮಯದಲ್ಲಿ ಯುಎಇಯಲ್ಲಿರುವ ಭಾರತೀಯ ಸಮುದಾಯದ ಬಗ್ಗೆ ನೀವು ಕಾಳಜಿ ವಹಿಸಿದ್ದೀರಿ. ಅವರನ್ನು ನಿಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದೀರಿ. ಭಾರತ ಸರ್ಕಾರ ಮತ್ತು ಭಾರತೀಯರ ಪರವಾಗಿ ನಿಮ್ಮ ರಾಜಮನೆತನ ಹಾಗೂ ಆಡಳಿತಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ,” ಎಂದು ಅವರು ಹೇಳಿದರು.

ಭಾರತ–ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧಗಳು, ಪ್ರಾದೇಶಿಕ ಭದ್ರತೆ ಮತ್ತು ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಭೇಟಿಯಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News