×
Ad

ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ: ಪ್ರಧಾನಿ ನರೇಂದ್ರ ಮೋದಿ

ಇಂಧನ ಮತ್ತು ರಕ್ಷಣಾ ಒಪ್ಪಂದಗಳಿಗೆ ಭಾರತ-ಯುಎಇ ಸಹಿ

Update: 2026-05-15 20:15 IST

 ಪ್ರಧಾನಿ ಮೋದಿ ,  ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್-ನಹ್ಯಾನ್ | Photo Credit : PTI 

ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಶುಕ್ರವಾರ ವ್ಯೂಹಾತ್ಮಕ ರಕ್ಷಣಾ ಪಾಲುದಾರಿಕೆಯ ಚೌಕಟ್ಟನ್ನು ಒಪ್ಪಿಕೊಂಡಿವೆ ಎಂದು ಭಾರತದ ವಿದೇಶಾಂಗ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ತಮ್ಮ ಐದು ರಾಷ್ಟ್ರಗಳ ರಾಜತಾಂತ್ರಿಕ ಪ್ರವಾಸದ ಆರಂಭಿಕ ಹಂತವಾಗಿ ಯುಎಇಗೆ ಆಗಮಿಸಿದ ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್-ನಹ್ಯಾನ್ ಅವರ ಸಮ್ಮುಖದಲ್ಲಿ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಭಾರತವು ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಯುಎಇಯೊಂದಿಗೆ ಜೊತೆಯಾಗಿ ನಿಂತಿದೆ ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಸಾಧ್ಯವಿರುವ ಎಲ್ಲಾ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಮೋದಿ ಈ ಸಂದರ್ಭ ಹೇಳಿದ್ದಾರೆ.

ಯುಎಇಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಂಕ್ಷಿಪ್ತ ಭೇಟಿಯು ಭಾರತಕ್ಕೆ ಪ್ರಮುಖ ಕಾರ್ಯತಂತ್ರದ ಮತ್ತು ಆರ್ಥಿಕ ಲಾಭವನ್ನು ಒದಗಿಸಿದ್ದು ಉಭಯ ದೇಶಗಳು ರಕ್ಷಣಾ ಸಹಕಾರ, ಇಂಧನ ಭದ್ರತೆ ಮತ್ತು ಕಡಲ ಮೂಲಸೌಕರ್ಯಗಳ ಒಪ್ಪಂದಕ್ಕೆ ಸಹಿ ಹಾಕುವುದರ ಜೊತೆಗೆ ಭಾರತೀಯ ಮೂಲಸೌಕರ್ಯ ಮತ್ತು ಹಣಕಾಸು ಸಂಸ್ಥೆಗಳಲ್ಲಿ 5 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಯುಎಇ ಘೋಷಿಸಿದೆ. ಆಯಕಟ್ಟಿನ ಪೆಟ್ರೋಲಿಯಂ ನಿಕ್ಷೇಪಗಳು ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ ಪೂರೈಕೆಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಯ ಅಡಿಯಲ್ಲಿ ಉಭಯ ದೇಶಗಳು ರಕ್ಷಣಾ ಕೈಗಾರಿಕಾ ಸಹಯೋಗ, ನಾವೀನ್ಯತೆ ಮತ್ತು ಸುಧಾರಿತ ತಂತ್ರಜ್ಞಾನ, ತರಬೇತಿ, ಸಮರಾಭ್ಯಾಸ, ಕಡಲ ಭದ್ರತೆ, ಸೈಬರ್ ಸುರಕ್ಷತೆ ಮತ್ತು ಸುರಕ್ಷಿತ ಸಂವಹನ ಮತ್ತು ಮಾಹಿತಿ ವಿನಿಮಯದ ಮೇಲೆ ಸಹಕಾರವನ್ನು ಗಾಢವಾಗಿಸಲು ಒಪ್ಪಿಕೊಂಡಿವೆ ಎಂದು ವರದಿ ಹೇಳಿದೆ.

ಗುಜರಾತ್‍ನ ವಡಿನಾರ್ ನಲ್ಲಿ ಹಡಗು ದುರಸ್ತಿ ಕ್ಲಸ್ಟರ್ ಅಭಿವೃದ್ಧಿಗೆ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಈ ಕ್ರಮವು ದೇಶಗಳ ನಡುವೆ ಸಮುದ್ರ ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಸಹಕಾರವನ್ನು ಬಲಪಡಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News