ಇಸ್ರೇಲ್ ಭದ್ರತೆಗೆ ಆದ್ಯತೆ; ಆದರೆ ಅಮೆರಿಕದ ಸಂಬಂಧ ಮುಖ್ಯ: ನೆತನ್ಯಾಹು
ಬೆಂಜಮಿನ್ ನೆತನ್ಯಾಹು | Phohto Credit : PTI
ಟೆಲ್ ಅವೀವ್, ಜೂ.20: ಇಸ್ರೇಲ್ ನ ಭದ್ರತೆಯನ್ನು ರಕ್ಷಿಸುವುದಕ್ಕೆ ಆದ್ಯತೆ ನೀಡಲಾಗುವುದು. ಅದೇ ಸಮಯದಲ್ಲಿ ಅಮೆರಿಕದೊಂದಿಗೆ ನಿಕಟ ಸಂಬಂಧವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
‘ನಮ್ಮ ಅಮೆರಿಕನ್ ಸ್ನೇಹಿತರೊಂದಿಗಿನ ಪ್ರಮುಖ ಸಂಬಂಧವನ್ನು ಉಳಿಸಿಕೊಳ್ಳುವ ಜೊತೆಗೆ, ನಾವು ನಮ್ಮ ಭದ್ರತಾ ಹಿತಾಸಕ್ತಿಗಳನ್ನು ದೃಢವಾಗಿ ರಕ್ಷಿಸಬೇಕು. ನಾವು ಬುದ್ಧಿವಂತಿಕೆ ಮತ್ತು ಸರಿಯಾದ ನಿರ್ಣಯದೊಂದಿಗೆ ನಮ್ಮ ಹಾದಿಯಲ್ಲಿ ಮುನ್ನಡೆಯುವುದನ್ನು ಮುಂದುವರಿಸುತ್ತೇವೆ.
ಇಸ್ರೇಲ್ ತಾನು ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿರುವ ಪ್ರದೇಶಗಳ ಮೇಲಿನ ಹಿಡಿತವನ್ನು ಮುಂದುವರಿಸಲಿದೆ. ನಾವು ಗಾಝಾದಲ್ಲಿ ಹಮಾಸ್ ಮೇಲಿನ ನಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದೇವೆ. ಅಲ್ಲಿ ನಾವು ಗಾಝಾ ಪಟ್ಟಿಯ ಶೇಕಡಾ 60ಕ್ಕೂ ಹೆಚ್ಚು ಪ್ರದೇಶದ ಮೇಲೆ ನಿಯಂತ್ರಣ ಹೊಂದಿದ್ದೇವೆ.
ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾದ ಕ್ಷಿಪಣಿ ಸಾಮರ್ಥ್ಯವನ್ನು ತೀವ್ರವಾಗಿ ದುರ್ಬಲಗೊಳಿಸಲಾಗಿದೆ. ಲೆಬನಾನ್ ನಲ್ಲಿ ನಮ್ಮ ಸಮುದಾಯಗಳ ಮೇಲಿನ ಭೂ ಆಕ್ರಮಣದ ಭೀತಿಯನ್ನು ನಾವು ಹಿಮ್ಮೆಟ್ಟಿಸಿದ್ದೇವೆ ಮತ್ತು ಹಿಜ್ಬುಲ್ಲಾದ ಕ್ಷಿಪಣಿ ಸಾಮರ್ಥ್ಯವನ್ನು ಮುರಿದಿದ್ದೇವೆ. ಎರಡೂ ಸ್ಥಳಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ’ ಎಂದು ನೆತನ್ಯಾಹು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.