ಅಮೆರಿಕಾದ್ಯಂತ ವಿವಿಗಳಿಗೆ ವ್ಯಾಪಿಸಿದ ಪ್ರತಿಭಟನೆ

Update: 2024-04-25 17:33 GMT

PC : X/@TRTWorldNow

ವಾಷಿಂಗ್ಟನ್: ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಗೊಳ್ಳಬೇಕೆಂದು ಆಗ್ರಹಿಸಿ ಕೊಲಂಬಿಯಾ ವಿವಿಯಲ್ಲಿ ಕಳೆದ ವಾರ ನಡೆದ ಫೆಲೆಸ್ತೀನ್ ಪರ ಪ್ರತಿಭಟನೆ ಇದೀಗ ಅಮೆರಿಕದಾದ್ಯಂತದ ವಿಶ್ವವಿದ್ಯಾಲಯಗಳನ್ನು ವ್ಯಾಪಿಸಿದ್ದು ಕೊಲಂಬಿಯಾ ವಿವಿಗೆ ಭೇಟಿ ನೀಡಿದ ಅಮೆರಿಕ ಸಂಸತ್ ಸ್ಪೀಕರ್ ಮೈಕ್ ಜಾನ್ಸನ್‍ಗೆ ಪ್ರತಿಭಟನಾ ನಿರತರು ಘೆರಾವೊ ಹಾಕಿರುವುದಾಗಿ ವರದಿಯಾಗಿದೆ.

ಇದರಿಂದ ತೀವ್ರ ಮುಜುಗುರಕ್ಕೆ ಒಳಗಾದ ಜಾನ್ಸನ್, ಕೊಲಂಬಿಯಾ ವಿವಿ ಆಡಳಿತವನ್ನು ಟೀಕಿಸಿದ್ದು ಪರಿಸ್ಥಿತಿ ನಿಯಂತ್ರಿಸಲು ವಿಫಲವಾಗಿರುವುದರಿಂದ ವಿವಿಯ ಅಧ್ಯಕ್ಷೆ ನೆಮಾತ್ ಶಫಿಕ್ ರಾಜೀನಾಮೆ ನೀಡಬೇಕೆಂದು ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಗೆ ಪದೇ ಪದೇ ಅಡ್ಡಿಪಡಿಸಿದ ಜನಸಮೂಹ, ಜಾನ್ಸನ್ ಹಾಗೂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಇತರ ರಿಪಬ್ಲಿಕನ್ ಸಂಸದರನ್ನು ಗೇಲಿ ಮಾಡಿರುವುದಾಗಿ ವರದಿಯಾಗಿದೆ. `ನಮ್ಮ ಕ್ಯಾಂಪಸ್‍ಗಳಲ್ಲಿ ಈ ರೀತಿಯ ದ್ವೇಷ ಮತ್ತು ಯೆಹೂದಿ ವಿರೋಧಿ ಕೃತ್ಯಗಳು ಪ್ರವರ್ಧಮಾನಕ್ಕೆ ಬರಲು ನಾವು ಅನುಮತಿಸುವುದಿಲ್ಲ ಮತ್ತು ಇದನ್ನು ಆರಂಭದಲ್ಲೇ ತಡೆಯಬೇಕಿದೆ. ಈ ಹಿಂಸಾಕೃತ್ಯದ ಹಿಂದೆ ಇರುವವರನ್ನು ತಕ್ಷಣ ಬಂಧಿಸಬೇಕು. ಈ ಅವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಅಧ್ಯಕ್ಷೆ ಶಫಿಕ್ ತಕ್ಷಣ ರಾಜೀನಾಮೆ ನೀಡಬೇಕೆಂಬ ಆಗ್ರಹಕ್ಕೆ ನನ್ನ ಸಹಮತವಿದೆ' ಎಂದು ಜಾನ್ಸನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪ್ರತಿಭಟನೆಯು ವಾಕ್‍ಸ್ವಾತಂತ್ರ್ಯದಡಿ ಬರುತ್ತದೆ ಎಂಬ ವಾದವನ್ನು ತಿರಸ್ಕರಿಸಿದ ಅವರು , ಯೆಹೂದಿ ವಿದ್ಯಾರ್ಥಿಗಳ ರಕ್ಷಣೆ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೊಲಂಬಿಯಾ ವಿವಿ ವಿಫಲವಾಗಿದೆ. ಇದು ಅಪಾಯದ ಸಂಕೇತವಾಗಿದೆ. ನಾವು ವಾಕ್‍ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಚಿಂತನೆ, ಅಭಿಪ್ರಾಯಗಳಲ್ಲಿ ವೈವಿಧ್ಯತೆಯನ್ನು ನಾವು ಗೌರವಿಸುತ್ತೇವೆ. ಆದರೆ ಇದನ್ನು ಕಾನೂನಿಗೆ ಅನುಗುಣವಾಗಿ ನಡೆಸುವ ಮಾರ್ಗವಿದೆ' ಎಂದು ಜಾನ್ಸನ್ ` ಈ ಅಸಂಬದ್ಧವನ್ನು ನಿಲ್ಲಿಸಿ ನಿಮ್ಮ ತರಗತಿಗೆ ಹಿಂತಿರುಗಿ' ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಆಗ್ರಹಿಸಿದರು. ಸುದ್ದಿಗೋಷ್ಠಿಯ ಸಂದರ್ಭ ಜಾನ್ಸನ್‍ರನ್ನು ಗೇಲಿ ಮಾಡುತ್ತಿದ್ದ ಪ್ರತಿಭಟನಾಕಾರರು `ನಿಮ್ಮ ಸಲಹೆ ನಮಗೆ ಬೇಕಿಲ್ಲ' ಎಂದು ಘೋಷಣೆ ಕೂಗುತ್ತಾ ಘೆರಾವೊ ಹಾಕಿದರು.

ಪ್ರತಿಭಟನೆಯನ್ನು ತ್ವರಿತವಾಗಿ ನಿಯಂತ್ರಿಸಲು ಆಗದಿದ್ದರೆ ನ್ಯಾಷನಲ್ ಗಾರ್ಡ್ ನಿಯೋಜಿಸಲು ಇದು ಸಕಾಲವಾಗಿದೆ ಎಂದು ಜಾನ್ಸನ್ ಹೇಳಿದ್ದಾರೆ. ಈ ಬೆದರಿಕೆಗಳನ್ನು ನಿಲ್ಲಿಸದಿದ್ದರೆ ನ್ಯಾಷನಲ್ ಗಾರ್ಡ್‍ಗಳಿಗೆ ಭದ್ರತೆಯ ಹೊಣೆಯವನ್ನು ವಹಿಸುವುದು ಒಳ್ಳೆಯದು. ವಿವಿ ಕ್ಯಾಂಪಸ್‍ಗಳಲ್ಲಿ ಸುವ್ಯವಸ್ಥೆ ಮರುಸ್ಥಾಪಿಸಬೇಕಾಗಿದೆ. ಅಧ್ಯಕ್ಷ ಜೋ ಬೈಡನ್ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಾನ್ಸನ್ ಆಗ್ರಹಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೈಡನ್ ಬೆಂಬಲ

ವಾಷಿಂಗ್ಟನ್: ಅಮೆರಿಕದ ವಿವಿ ಕ್ಯಾಂಪಸ್‍ಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬೆಂಬಲಿಸುತ್ತಾರೆ ಎಂದು ಶ್ವೇತಭವನ ಹೇಳಿಕೆ ಬಿಡುಗಡೆಗೊಳಿಸಿದೆ.

ಕಾಲೇಜು ಕ್ಯಾಂಪಸ್‍ಗಳಲ್ಲಿ ಮುಕ್ತ ಭಾಷಣ, ಚರ್ಚೆ ಮತ್ತು ನಿಷ್ಪಕ್ಷಪಾತದ ಧೋರಣೆ ಅತೀ ಮುಖ್ಯ ಎಂದು ಅಧ್ಯಕ್ಷರು ನಂಬುತ್ತಾರೆ. ಜನತೆ ಶಾಂತಿಯುತ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವುದರಲ್ಲಿ ನಮಗೆ ನಂಬಿಕೆಯಿದೆ. ಆದರೆ ದ್ವೇಷ ಭಾಷಣ, ದ್ವೇಷ ಹೇಳಿಕೆ, ಹಿಂಸಾಚಾರಕ್ಕೆ ನಮ್ಮ ವಿರೋಧವಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಕಾಲೇಜು ಕ್ಯಾಂಪಸ್‍ಗಳಲ್ಲಿ ಕಟುವಾದ ಯೆಹೂದ್ಯ ವಿರೋಧಿ ಕೃತ್ಯ ನಡೆಸಲು ಆಸ್ಪದವಿಲ್ಲ ಎಂದು ಜೋ ಬೈಡನ್ ರವಿವಾರ ಖಂಡಿಸಿದ್ದರು.

93 ಪ್ರತಿಭಟನಾಕಾರರ ಬಂಧನ

ಆದೇಶ ಮೀರಿ ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ವಿವಿ ಕ್ಯಾಂಪಸ್‍ನಲ್ಲಿ ಅಡ್ಡಾಡುತ್ತಿದ್ದ 93 ಜನರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದುವರೆಗೆ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ವಿವಿ ಆವರಣದಲ್ಲಿ ಪೊಲೀಸ್ ಗಸ್ತು ಮುಂದುವರಿಯಲಿದೆ ಎಂದು ಲಾಸ್‍ಏಂಜಲೀಸ್ ಪೊಲೀಸ್ ಇಲಾಖೆ `ಎಕ್ಸ್(ಟ್ವೀಟ್) ಮಾಡಿದೆ. ಈ ಮಧ್ಯೆ, ನ್ಯೂಯಾರ್ಕ್ ವಿವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ನ್ಯೂಯಾರ್ಕ್ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿ ಪೊಲೀಸ್ ಮುಖ್ಯಸ್ಥರು ಹಾಗೂ ಅಲ್ಲಿನ ಸಿಬ್ಬಂದಿಗಳನ್ನು ಸುತ್ತುವರಿದು ಘೋಷಣೆ ಕೂಗಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News