ಅಮೆರಿಕ | ನ್ಯಾಯಾಧೀಶರ ಆದೇಶದ ಬೆನ್ನಲ್ಲೇ CNN, MS NOW, Politico ವರದಿಗಾರರಿಗೆ ಶ್ವೇತಭವನ ಪ್ರವೇಶ
ಸಾಂದರ್ಭಿಕ ಚಿತ್ರ (Photo: The Economic Times)
ವಾಷಿಂಗ್ಟನ್: ಟ್ರಂಪ್ ಆಡಳಿತ ಹೇರಿದ್ದ ಪ್ರವೇಶ ನಿರ್ಬಂಧವನ್ನು ಹಿಂಪಡೆಯುವಂತೆ ಫೆಡರಲ್ ನ್ಯಾಯಾಧೀಶರು ಆದೇಶಿಸಿದ ಬಳಿಕ, ತಾತ್ಕಾಲಿಕವಾಗಿ ಶ್ವೇತಭವನ ಪ್ರವೇಶ ನಿರಾಕರಿಸಲಾಗಿದ್ದ CNN, MS NOW ಮತ್ತು Politico ಸಂಸ್ಥೆಗಳ ವರದಿಗಾರರಿಗೆ ಗುರುವಾರ ಪ್ರವೇಶ ಮರುಸ್ಥಾಪಿಸಲಾಯಿತು.
ಯು.ಎಸ್. ಜಿಲ್ಲಾ ನ್ಯಾಯಾಧೀಶ ತಿಮೋತಿ ಕೆಲ್ಲಿ ಅವರು, ಈ ಮೂರು ಸುದ್ದಿ ಸಂಸ್ಥೆಗಳ ಪತ್ರಕರ್ತರ ಪತ್ರಿಕಾ ಪ್ರವೇಶದ ಅನುಮತಿಯನ್ನು ಸೂಕ್ತ ಕಾನೂನು ಪ್ರಕ್ರಿಯೆ ಅನುಸರಿಸದೆ ರದ್ದುಗೊಳಿಸಲಾಗಿದೆ ಎಂಬ ಅವರ ವಾದದಲ್ಲಿ ಹುರುಳಿದೆ ಎಂದು ಅಭಿಪ್ರಾಯಪಟ್ಟರು. 14 ದಿನಗಳ ಅವಧಿಗೆ ಪತ್ರಕರ್ತರ ಪ್ರವೇಶವನ್ನು ‘ತಕ್ಷಣವೇ ಮರಳಿಸಿ ಮತ್ತು ಪುನಃಸ್ಥಾಪಿಸಿ’ ಎಂದು ಶ್ವೇತಭವನಕ್ಕೆ ಆದೇಶಿಸಿದರು.
ಆದರೆ, ಆದೇಶ ಹೊರಬಿದ್ದ ಕೆಲವೇ ಗಂಟೆಗಳ ಬಳಿಕವೂ CNN, MS NOW ಮತ್ತು Politico ಸಂಸ್ಥೆಗಳ ಕೆಲವು ವರದಿಗಾರರಿಗೆ ಶ್ವೇತಭವನದ ಆವರಣ ಪ್ರವೇಶ ನಿರಾಕರಿಸಲಾಯಿತು. ಇದರಿಂದಾಗಿ ಸಂಸ್ಥೆಗಳು ತುರ್ತು ವಿಚಾರಣೆಗೆ ನ್ಯಾಯಾಲಯದ ಮೊರೆ ಹೋದವು.
‘CNN, MS NOW ಮತ್ತು POLITICO ಸಂಸ್ಥೆಗಳ ಪತ್ರಕರ್ತರು ಗುರುವಾರ ಬೆಳಿಗ್ಗೆ ಶ್ವೇತಭವನ ಪ್ರವೇಶಿಸಲು ಪ್ರಯತ್ನಿಸಿದಾಗ ಅವರನ್ನು ಹಿಂತಿರುಗಿಸಲಾಯಿತು. ಈ ಹಿಂದೆ ವಶಪಡಿಸಿಕೊಳ್ಳದಿದ್ದ ಕೆಲವು ಪತ್ರಕರ್ತರ ಪಾಸ್‌ಗಳನ್ನು ಸೀಕ್ರೆಟ್ ಸರ್ವಿಸ್ ಏಜೆಂಟ್ ಗಳು ವಶಪಡಿಸಿಕೊಂಡರು’ ಎಂದು ಸಂಸ್ಥೆಗಳು ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಯಲ್ಲಿ ತಿಳಿಸಿವೆ.
ನ್ಯಾಯಾಲಯದ ಆದೇಶ ಪಾಲಿಸದಿರುವ ಆರೋಪಗಳಿಗೆ ಗುರುವಾರ ಮಧ್ಯಾಹ್ನದೊಳಗೆ ಉತ್ತರಿಸುವಂತೆ ಕೆಲ್ಲಿ ಆಡಳಿತಕ್ಕೆ ಸೂಚಿಸಿದರು. ಕೆಲವೇ ಗಂಟೆಗಳಲ್ಲಿ ಮೂರು ಸಂಸ್ಥೆಗಳ ಸಿಬ್ಬಂದಿಗೂ ಶ್ವೇತಭವನ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ವಶಪಡಿಸಿಕೊಂಡಿದ್ದ ಎಲ್ಲ ಪತ್ರಿಕಾ ಪ್ರವೇಶ ಗುರುತಿನ ಚೀಟಿಗಳನ್ನು ಹಿಂತಿರುಗಿಸಲಾಗಿದೆ ಎಂದು ಆಡಳಿತ ನ್ಯಾಯಾಲಯಕ್ಕೆ ತಿಳಿಸಿತು.
ಪ್ರವೇಶ ಮರುಸ್ಥಾಪನೆಯಾದ ಹಿನ್ನೆಲೆಯಲ್ಲಿ ಮಾಧ್ಯಮ ಸಂಸ್ಥೆಗಳು ಕೋರಿದ್ದ ತುರ್ತು ವಿಚಾರಣೆಯ ಮನವಿಯನ್ನು ಕೆಲ್ಲಿ ತಿರಸ್ಕರಿಸಿದರು. ಪ್ರಕರಣದ ಮೂಲ ಕಾನೂನು ಪ್ರಶ್ನೆಗಳನ್ನು ನ್ಯಾಯಾಲಯ ಪರಿಶೀಲಿಸುವ ಸಂದರ್ಭದಲ್ಲಿ ನಿಷೇಧ ಮುಂದುವರಿಯದಂತೆ ತಡೆಯಲು ‘ಪ್ರಾಥಮಿಕ ತಡೆಯಾಜ್ಞೆ’ ನೀಡುವಂತೆ ಅರ್ಜಿ ಸಲ್ಲಿಸಲು ಮಾಧ್ಯಮ ಸಂಸ್ಥೆಗಳಿಗೆ ಸೋಮವಾರದವರೆಗೆ ಕಾಲಾವಕಾಶ ನೀಡಿದರು.
‘ನಕಲಿ ಸುದ್ದಿ’ ಆರೋಪ
ತಮ್ಮ ಆಡಳಿತದ ಕುರಿತು ಈ ಸಂಸ್ಥೆಗಳು ‘ನಿರಂತರವಾಗಿ ಕಟ್ಟುಕಥೆಗಳನ್ನು ಅಥವಾ ಸುಳ್ಳುಗಳನ್ನು ಬರೆಯುತ್ತವೆ ಅಥವಾ ವರದಿ ಮಾಡುತ್ತವೆ’ ಎಂದು ಆರೋಪಿಸಿದ್ದ ಟ್ರಂಪ್, ಸೆಪ್ಟೆಂಬರ್ 18ರಂದು CNN, MS NOW ಮತ್ತು Politico ವರದಿಗಾರರ ಮೇಲೆ ನಿಷೇಧ ಹೇರಿದ್ದರು.
ತಮಗೆ ಇಷ್ಟವಾಗದ ವರದಿಗಾರಿಕೆಗಾಗಿ ಪ್ರತೀಕಾರ ತೀರಿಸಿಕೊಳ್ಳುವ ಮೂಲಕ ಟ್ರಂಪ್ ತಮ್ಮ ‘ಮೊದಲ ತಿದ್ದುಪಡಿ ಹಕ್ಕುಗಳನ್ನು’ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಮೂರು ಸುದ್ದಿ ಸಂಸ್ಥೆಗಳು ಸೋಮವಾರ ಫೆಡರಲ್ ನ್ಯಾಯಾಲಯದಲ್ಲಿ ದಾವೆ ಹೂಡಿದವು.
‘ತಮ್ಮ ಆಡಳಿತವನ್ನು ಶ್ಲಾಘಿಸುವ ಸುದ್ದಿ ಸಂಸ್ಥೆಗಳು ಮತ್ತು ವರದಿಗಾರರಿಂದ ಮಾತ್ರ ತಮ್ಮ ಸುದ್ದಿಯನ್ನು ಪ್ರಸಾರ ಮಾಡಬೇಕೆಂದು ಅಧ್ಯಕ್ಷ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ವರದಿಯ ವಿಷಯದ ಬಗ್ಗೆ ಅಸಮಾಧಾನವಿದೆ ಎಂಬ ಕಾರಣಕ್ಕೆ ಯಾವುದೇ ಮುನ್ಸೂಚನೆ ಅಥವಾ ಕಾನೂನುಬದ್ಧ ಪ್ರಕ್ರಿಯೆಯಿಲ್ಲದೆ ಪತ್ರಿಕಾ ರಂಗದ ಮೊದಲ ತಿದ್ದುಪಡಿಯ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಆಸ್ತಿ ಹಿತಾಸಕ್ತಿಗಳನ್ನು ಕಸಿದುಕೊಳ್ಳಲು ಅಧ್ಯಕ್ಷರಿಗೆ ಅಥವಾ ಯಾವುದೇ ಸರಕಾರಿ ಅಧಿಕಾರಿಗೆ ಸಂವಿಧಾನ ಅವಕಾಶ ನೀಡುವುದಿಲ್ಲ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವರದಿಗಾರರಿಗೆ ಸೂಕ್ತ ಕಾನೂನು ಪ್ರಕ್ರಿಯೆಯ ಅವಕಾಶ ನೀಡಲಾಗಿಲ್ಲ ಎಂದು ವಾದಿಸಿರುವ ಸಂಸ್ಥೆಗಳು, ಟ್ರಂಪ್ ಅವರ ನಿರ್ಬಂಧ ಅಸಂವಿಧಾನಿಕ ಎಂದು ಘೋಷಿಸುವಂತೆ ಫೆಡರಲ್ ನ್ಯಾಯಾಧೀಶರನ್ನು ಕೋರಿವೆ. ಸೂಕ್ತ ಪ್ರಕ್ರಿಯೆ ಇಲ್ಲದೆ ಪತ್ರಕರ್ತರ ಶ್ವೇತಭವನದ ಪ್ರವೇಶ ಪರವಾನಗಿಯನ್ನು ನಿರಂಕುಶವಾಗಿ ರದ್ದುಗೊಳಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದ 1977ರ ‘ಡಿ.ಸಿ. ಸರ್ಕ್ಯೂಟ್ ಕೋರ್ಟ್ ಆಫ್ ಅಪೀಲ್ಸ್’ ತೀರ್ಪನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
‘ಈ ನಿರ್ಬಂಧವು ಮೊದಲ ತಿದ್ದುಪಡಿಯ ಮೇಲಿನ ನೇರ ದಾಳಿ ಮತ್ತು ನಮ್ಮ ಅತ್ಯಂತ ಮೂಲಭೂತ ಸಾಂವಿಧಾನಿಕ ತತ್ವಗಳ ಸ್ಪಷ್ಟ ಉಲ್ಲಂಘನೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
CNN, MS NOW ಮತ್ತು Politico ಪರವಾಗಿ ಡಜನ್‌ಗಟ್ಟಲೆ ಮಾಧ್ಯಮ ಸಂಸ್ಥೆಗಳು ‘ಅಮಿಕಸ್ ಕ್ಯೂರಿ’ ಅರ್ಜಿಗೆ ಸಹಿ ಹಾಕಿವೆ.
‘ಪ್ರವೇಶ ಹಕ್ಕಲ್ಲ, ಸವಲತ್ತು’
ಟ್ರಂಪ್ ಆಡಳಿತ ಮಂಗಳವಾರ ಮೊಕದ್ದಮೆಗೆ ಪ್ರತಿಕ್ರಿಯಿಸಿ, ‘ಶ್ವೇತಭವನಕ್ಕೆ ಪ್ರವೇಶ ಪಡೆಯುವುದು ಒಂದು ಸವಲತ್ತು, ಹಕ್ಕಲ್ಲ’ ಎಂದು ವಾದಿಸಿತು.
ಶ್ವೇತಭವನ ಪ್ರವೇಶ ಪಡೆಯುವವರಿಂದ ನಿರೀಕ್ಷಿಸಲಾಗುವ ವೃತ್ತಿಪರತೆ ಮತ್ತು ಮರ್ಯಾದೆಯ ಮಾನದಂಡಗಳನ್ನು ಈ ಮೂರು ಸುದ್ದಿ ಸಂಸ್ಥೆಗಳು ಉಲ್ಲಂಘಿಸಿವೆ ಎಂದು ಟ್ರಂಪ್ ನಿರ್ಧರಿಸಿದ್ದಾರೆ ಎಂದು ಆಡಳಿತ ಹೇಳಿದೆ. ರಾಷ್ಟ್ರೀಯ ಭದ್ರತೆ ಮತ್ತು ಇತರ ವಿಷಯಗಳ ಕುರಿತು ಪರಿಶೀಲಿಸಬಹುದಾದ ಸುಳ್ಳುಗಳನ್ನು ಹರಡುವುದು ಹಾಗೂ ಸೂಕ್ಷ್ಮ ಅಥವಾ ಗೌಪ್ಯ ಮಾಹಿತಿಯನ್ನು ಪ್ರಕಟಿಸುವುದೂ ಇದರಲ್ಲಿ ಸೇರಿದೆ.
ತಮ್ಮ ವಿರುದ್ಧ ಬರುವ ಯಾವುದೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಟ್ರಂಪ್ ಈ ಹಿಂದೆಯೇ ಸೂಚಿಸಿದ್ದರು.
ಶುಕ್ರವಾರ ಮಧ್ಯಾಹ್ನ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರಂಪ್ ನಿಷೇಧ ಘೋಷಿಸಿದ್ದರು. ಯಾವುದೇ ನಿರ್ದಿಷ್ಟ ಸುದ್ದಿಯಿಂದ ಈ ಕ್ರಮ ಪ್ರೇರಿತವಾಗಿಲ್ಲ; ತಮ್ಮ ಆಡಳಿತದ ಕುರಿತು ನಡೆಯುತ್ತಿರುವ ‘ನಕಲಿ ಸುದ್ದಿ’ ವರದಿಗಳ ಫಲಿತಾಂಶ ಎಂದು ಅವರು ಹೇಳಿದ್ದರು.
‘ಇದು ವಾಸ್ತವವಾಗಿ ಕಳೆದ ಕೆಲವು ವರ್ಷಗಳಲ್ಲಿನ ಸುದ್ದಿಗಳ ಒಟ್ಟು ಮೊತ್ತ. ಅದರಿಂದ ಬೇಸರವಾಗುತ್ತದೆ’ ಎಂದು ಓವಲ್ ಆಫೀಸ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದರು.
‘ಉದ್ದೇಶಪೂರ್ವಕವಾಗಿ ನಕಾರಾತ್ಮಕ ಸುದ್ದಿಕಥೆಗಳನ್ನು ಬರೆಯಲು ಜನರಿಗೆ ಅವಕಾಶ ನೀಡುವ ದೇಶದಲ್ಲಿ ಏನೋ ದೋಷವಿದೆ. ಅವರು ಬರೆಯಲು ಬಯಸಿದರೆ ಅದು ಸರಿ. ಆದರೆ ನಾನು ಅವರನ್ನು ನನ್ನ—ಅಂದರೆ ಜನರ ಮನೆಗೆ (ಶ್ವೇತಭವನಕ್ಕೆ) ಬಿಟ್ಟುಕೊಳ್ಳಬೇಕಾದ ಅಗತ್ಯವಿಲ್ಲ’ ಎಂದು ಟ್ರಂಪ್ ಹೇಳಿದ್ದರು.
CNN ಪ್ರಕಾರ, ನಿಷೇಧ ಘೋಷಿಸುವ ಸ್ವಲ್ಪ ಸಮಯ ಮೊದಲು ಟ್ರಂಪ್ ಅವರ ಆಪ್ತ ಸಹಾಯಕಿ ನಟಾಲಿ ಹಾರ್ಪ್ ಅವರಿಗೆ ಮಾಧ್ಯಮ ವರದಿಗಳ ತುಣುಕುಗಳನ್ನು ತೋರಿಸಿದ್ದರು.
ಶನಿವಾರ CNNನ ಬೆಟ್ಸಿ ಕ್ಲೈನ್, MS NOWನ ಅಕೈಲಾ ಗಾರ್ಡ್ನರ್ ಮತ್ತು Politicoನ ಚೆಯೆನ್ನೆ ಹ್ಯಾಸ್ಲೆ ಅವರನ್ನು ಸೀಕ್ರೆಟ್ ಸರ್ವಿಸ್ ಸದಸ್ಯರು ಶ್ವೇತಭವನದಿಂದ ದೂರವಿಟ್ಟಿದ್ದರು. ಪ್ರವೇಶಕ್ಕೆ ಅಗತ್ಯವಿರುವ ಪಾಸ್‌ಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಈ ಮೂವರು ಪತ್ರಕರ್ತರನ್ನು ನ್ಯಾಯಾಲಯದ ಅರ್ಜಿಯಲ್ಲಿ ವಾದಿಗಳಾಗಿ ಪಟ್ಟಿಮಾಡಲಾಗಿದೆ. ಅವರು ಶ್ವೇತಭವನದ ದೈನಂದಿನ ಚಟುವಟಿಕೆಗಳನ್ನು ವರದಿ ಮಾಡುವ ಹಾಗೂ ಅಧ್ಯಕ್ಷರೊಂದಿಗೆ ಪ್ರಯಾಣಿಸುವ ಪತ್ರಿಕಾ ಪೂಲ್ ನ ದೀರ್ಘಕಾಲದ ಸದಸ್ಯರಾಗಿದ್ದಾರೆ.
WHCA ಖಂಡನೆ
‘ದಿ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್’ (WHCA) ಕ್ರಮವನ್ನು ಖಂಡಿಸಿದೆ. ಇದು ಸಂವಿಧಾನದ ಮೊದಲ ತಿದ್ದುಪಡಿಯ ಉಲ್ಲಂಘನೆ ಎಂದು ಹೇಳಿದೆ.
‘ಸರಕಾರಿ ಅಧಿಕಾರಿಗಳು ಇದನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಮುಕ್ತ ಮತ್ತು ಸ್ವತಂತ್ರ ಮಾಧ್ಯಮದ ಮೂಲಕ ಅಮೆರಿಕದ ಜನರು ಅಧಿಕಾರಕ್ಕೆ ಆಯ್ಕೆಯಾದವರನ್ನು ಪರಿಶೀಲಿಸಲು ಸಾಧ್ಯವಾಗಬೇಕು’ ಎಂದು ಫಾಕ್ಸ್ ನ್ಯೂಸ್ ನ ಹಿರಿಯ ವೈಟ್ ಹೌಸ್ ವರದಿಗಾರ್ತಿ ಹಾಗೂ WHCA ಅಧ್ಯಕ್ಷೆ ಜಾಕ್ವಿ ಹೆನ್ರಿಚ್ ಹೇಳಿದ್ದಾರೆ.
‘ಒಮ್ಮೆ ವೈಟ್ ಹೌಸ್ ಪತ್ರಕರ್ತರಿಗೆ ಪ್ರವೇಶ ನೀಡಿದ ಬಳಿಕ, ಅವರ ವರದಿಯ ವಿಷಯದ ಆಧಾರದ ಮೇಲೆ ಆ ಪ್ರವೇಶವನ್ನು ನಿರಂಕುಶವಾಗಿ ನಿರಾಕರಿಸಲಾಗದು ಎಂದು ನ್ಯಾಯಾಲಯಗಳು ಪದೇ ಪದೇ ಅಭಿಪ್ರಾಯಪಟ್ಟಿವೆ’ ಎಂದು ಅವರು ತಿಳಿಸಿದ್ದಾರೆ.
ಟಿವಿ ನೆಟ್‌ವರ್ಕ್‌ಗಳ ನಿರಾಕರಣೆ
ನಿಷೇಧಕ್ಕೆ ಪ್ರತಿಕ್ರಿಯೆಯಾಗಿ ABC, CBS, NBC ಮತ್ತು Fox News ಸೇರಿದಂತೆ ನಾಲ್ಕು ಪ್ರಮುಖ ಟಿವಿ ನೆಟ್‌ವರ್ಕ್‌ಗಳು ‘ವೈಟ್ ಹೌಸ್ ಪೂಲ್’ನಲ್ಲಿ ಭಾಗವಹಿಸಲು ನಿರಾಕರಿಸಿದವು.
ಅಧ್ಯಕ್ಷರ ಸಾರ್ವಜನಿಕ ಕಾರ್ಯಕ್ರಮಗಳನ್ನು ದಾಖಲಿಸುವ ವರದಿಗಾರರು, ಛಾಯಾಗ್ರಾಹಕರು ಮತ್ತು ವೀಡಿಯೊಗ್ರಾಫರ್‌ಗಳ ಸರದಿಯ ಆಧಾರದ ಮೇಲೆ ಈ ಪೂಲ್ ಕಾರ್ಯನಿರ್ವಹಿಸುತ್ತದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಗಾಗಿ ಟ್ರಂಪ್ ನ್ಯೂಯಾರ್ಕ್‌ಗೆ ಕೈಗೊಂಡಿದ್ದ ಪ್ರವಾಸ ಸೇರಿದಂತೆ ಸೋಮವಾರದ ಕಾರ್ಯಕ್ರಮಗಳಿಗೆ ಟೆಲಿವಿಷನ್ ಪೂಲ್ ಆಗಿ CNN ಅನ್ನು ನಿಗದಿಪಡಿಸಲಾಗಿತ್ತು.
ಇದರ ಪರಿಣಾಮವಾಗಿ ಸೋಮವಾರ ವೈಟ್ ಹೌಸ್‌ನ ಹೊಸ ಹೆಲಿಪ್ಯಾಡ್ ಉದ್ಘಾಟನಾ ಸಮಾರಂಭದಲ್ಲಿ ಟ್ರಂಪ್ ಅವರ ಮಾತುಗಳು ಬಹುತೇಕ ಕೇಳಿಸದಂತಾದವು. ಸಾಮಾನ್ಯವಾಗಿ ಪೂಲ್ ಒದಗಿಸುವ ಮೈಕ್ರೊಫೋನ್ ಇಲ್ಲದೆ ಅವರು ಸಂಕ್ಷಿಪ್ತ ಭಾಷಣ ಮಾಡಿದರು.
ಟ್ರಂಪ್–ಮಾಧ್ಯಮ ಸಂಘರ್ಷ
ಅಮೆರಿಕದ ಅಧ್ಯಕ್ಷರು ಇತಿಹಾಸದುದ್ದಕ್ಕೂ ತಮ್ಮ ಆಡಳಿತದ ಕುರಿತು ಬಂದ ನಕಾರಾತ್ಮಕ ವರದಿಗಳ ಬಗ್ಗೆ ದೂರು ನೀಡುತ್ತಲೇ ಬಂದಿದ್ದಾರೆ.
2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ, ಖಜಾನೆ ಇಲಾಖೆಯ ಅಧಿಕಾರಿಯೊಂದಿಗಿನ ಸಂದರ್ಶನಗಳ ಸರಣಿಯಿಂದ Fox News ಅನ್ನು ಹೊರಗಿಡಲು 2009ರಲ್ಲಿ ಒಬಾಮಾ ಆಡಳಿತ ಪ್ರಯತ್ನಿಸಿತ್ತು. ಇತರ ಪ್ರಮುಖ ಟಿವಿ ಜಾಲಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಆಡಳಿತ ಆ ನಿರ್ಧಾರದಿಂದ ಹಿಂದೆ ಸರಿದಿತ್ತು.
ತಮ್ಮ ಮೊದಲ ಅವಧಿಯಲ್ಲಿ ಟ್ರಂಪ್ ಮಾಧ್ಯಮಗಳೊಂದಿಗೆ ಸಂಘರ್ಷಯುತ ಸಂಬಂಧ ಹೊಂದಿದ್ದರು. ಅವರು ಪತ್ರಿಕಾ ಮಾಧ್ಯಮವನ್ನು ‘ನಕಲಿ ಸುದ್ದಿ’ ಮತ್ತು ‘ಜನರ ಶತ್ರು’ ಎಂದು ಕರೆದಿದ್ದರು. ಎರಡನೇ ಅವಧಿಯಲ್ಲಿ ಈ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.
2018ರಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಅಧ್ಯಕ್ಷರಿಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಟ್ರಂಪ್ ಆಡಳಿತವು CNNನ ಶ್ವೇತಭವನ ವರದಿಗಾರ ಜಿಮ್ ಅಕೋಸ್ಟಾ ಅವರ ಪತ್ರಿಕಾ ಮಾನ್ಯತಾ ಪತ್ರವನ್ನು ರದ್ದುಗೊಳಿಸಿತ್ತು. CNN ಮೊಕದ್ದಮೆ ಹೂಡಿದ ಬಳಿಕ ಡಿ.ಸಿ.ಯ ಫೆಡರಲ್ ನ್ಯಾಯಾಧೀಶ ಕೆಲ್ಲಿ ಅವರು ಅಕೋಸ್ಟಾ ಅವರ ಮಾನ್ಯತೆಯನ್ನು ಮರುಸ್ಥಾಪಿಸುವಂತೆ ಆದೇಶಿಸಿದ್ದರು.
ಮುಂದಿನ ವರ್ಷವೂ ಇದೇ ರೀತಿಯ ಪರಿಸ್ಥಿತಿ ಎದುರಾಯಿತು. ರೋಸ್ ಗಾರ್ಡನ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶ್ವೇತಭವನದ ಮಾಜಿ ಸಹಾಯಕ ಸೆಬಾಸ್ಟಿಯನ್ ಗೋರ್ಕಾ ಮತ್ತು ‘ಪ್ಲೇಬಾಯ್’ ವರದಿಗಾರ ಬ್ರಿಯಾನ್ ಕರೇಮ್ ನಡುವೆ ನಡೆದ ಮಾತಿನ ಚಕಮಕಿಯ ಹಿನ್ನೆಲೆಯಲ್ಲಿ ಶ್ವೇತಭವನವು ಕರೇಮ್ ಅವರ ಪತ್ರಿಕಾ ಮಾನ್ಯತಾ ಪತ್ರವನ್ನು ರದ್ದುಗೊಳಿಸಿತ್ತು. ಮತ್ತೊಬ್ಬ ಫೆಡರಲ್ ನ್ಯಾಯಾಧೀಶರು ಅವರ ಮಾನ್ಯತೆಯನ್ನು ಮರುಸ್ಥಾಪಿಸುವಂತೆ ಆದೇಶಿಸಿದ್ದರು.
ಕಳೆದ ವರ್ಷ ‘ಗಲ್ಫ್ ಆಫ್ ಮೆಕ್ಸಿಕೋ’ವನ್ನು ಟ್ರಂಪ್ ಬಯಸಿದಂತೆ ‘ಗಲ್ಫ್ ಆಫ್ ಅಮೆರಿಕ’ ಎಂದು ಕರೆಯಲು Associated Press (AP) ನಿರಾಕರಿಸಿದ ಬಳಿಕ, ಟ್ರಂಪ್ ಆಡಳಿತವು ಆ ಸಂಸ್ಥೆಯ ಪತ್ರಕರ್ತರನ್ನು ಓವಲ್ ಆಫೀಸ್, ಏರ್ ಫೋರ್ಸ್ ಒನ್ ಮತ್ತು ಕೆಲವು ಅಧಿಕೃತ ಕಾರ್ಯಕ್ರಮಗಳಿಂದ ನಿರ್ಬಂಧಿಸಿತ್ತು. AP ಮೊಕದ್ದಮೆ ಹೂಡಿದ್ದು, ಪ್ರಕರಣ ಇನ್ನೂ ನಡೆಯುತ್ತಿದೆ.
ಪೆಂಟಗನ್ ನಿರ್ಬಂಧವೂ ವಿವಾದಕ್ಕೆ ಕಾರಣ
ಡಿಸೆಂಬರ್ ನಲ್ಲಿ ಪೆಂಟಗನ್ ಪತ್ರಕರ್ತರ ಮೇಲೆ ಹೊಸ ನಿರ್ಬಂಧಗಳನ್ನು ಘೋಷಿಸಿತ್ತು. ಪ್ರಕಟಣೆಗಾಗಿ ಅನಧಿಕೃತ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎಂದು ದೃಢಪಡಿಸುವ ಪ್ರತಿಜ್ಞಾಪತ್ರಕ್ಕೆ ಸಹಿ ಹಾಕುವಂತೆ ಪತ್ರಕರ್ತರಿಗೆ ಸೂಚಿಸಿತ್ತು.
ಸುದ್ದಿ ಸಂಸ್ಥೆಗಳು ಪ್ರತಿಜ್ಞಾಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವುಗಳ ಪತ್ರಿಕಾ ಮಾನ್ಯತಾ ಪತ್ರಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು.
ನ್ಯೂಯಾರ್ಕ್ ಟೈಮ್ಸ್ ಮೊಕದ್ದಮೆ ಹೂಡಿದ ಬಳಿಕ ಮಾರ್ಚ್‌ನಲ್ಲಿ ಫೆಡರಲ್ ನ್ಯಾಯಾಧೀಶರು ಪೆಂಟಗನ್ ನ ನಿರ್ಬಂಧಗಳು ಅಸಂವಿಧಾನಿಕ ಎಂದು ತೀರ್ಪು ನೀಡಿದ್ದರು.
ಪ್ರತಿಜ್ಞಾಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ ಪತ್ರಕರ್ತರಿಗೆ ಪೆಂಟಗನ್ ಪತ್ರಿಕಾ ರುಜುವಾತುಗಳನ್ನು ಮರುಸ್ಥಾಪಿಸಿತು. ಆದರೆ ಅವರು ಬೆಂಗಾವಲು ಸಿಬ್ಬಂದಿಯೊಂದಿಗೆ ಮಾತ್ರ ಪೆಂಟಗನ್ ಪ್ರವೇಶಿಸಬಹುದು ಎಂಬ ಹೊಸ ನಿಯಮ ಜಾರಿಗೊಳಿಸಿತು. ಟೈಮ್ಸ್ ಮತ್ತೆ ಮೊಕದ್ದಮೆ ಹೂಡಿದ್ದು, ಪ್ರಕರಣ ಮುಂದುವರಿದಿದೆ.
‘ಟ್ರಂಪ್ ಟಿವಿ’ ಮೂಲಕ ನೇರ ಪ್ರಸಾರ
ಶ್ವೇತಭವನವು ಸಾಂಪ್ರದಾಯಿಕ ಪ್ರಸಾರ ಟಿವಿ ಮಾದರಿಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ.
ಸೋಮವಾರ ರಾತ್ರಿ ‘ಟ್ರಂಪ್ ಟಿವಿ: ದಿ ಎಸೆನ್ಷಿಯಲ್ಸ್ ಸ್ಟೇಷನ್’ ಎಂಬ ಬ್ರಾಂಡ್ ನ ಯೂಟ್ಯೂಬ್ ಸ್ಟ್ರೀಮ್ ಆರಂಭಿಸಿತು. ‘ಟ್ರಂಪ್ ಆಡಳಿತದ ಅತಿದೊಡ್ಡ ಕ್ಷಣಗಳನ್ನು ಒಂದೇ ಸ್ಥಳದಲ್ಲಿ’ ಪ್ರದರ್ಶಿಸುವುದಾಗಿ ಶ್ವೇತಭವನ ಹೇಳಿದೆ.
ಆರಂಭವಾದ ಬಳಿಕ ಟ್ರಂಪ್ ಟಿವಿಯಲ್ಲಿ ಟ್ರಂಪ್ ಅವರ ಭಾಷಣಗಳು, ಓವಲ್ ಆಫೀಸ್ ಸಭೆಗಳು ಹಾಗೂ ಅಧ್ಯಕ್ಷರ ಎರಡನೇ ಅವಧಿಯ ಇತರ ಶ್ವೇತಭವನ ಕಾರ್ಯಕ್ರಮಗಳ ನಿರಂತರ ಪ್ರಸಾರ ನೀಡಲಾಗುತ್ತಿದೆ. ಮೊದಲ ವೀಡಿಯೊದಲ್ಲಿ ಜುಲೈ 3ರಂದು ಮೌಂಟ್ ರಶ್ಮೋರ್ ನಲ್ಲಿ ಟ್ರಂಪ್ ನೀಡಿದ ಹೇಳಿಕೆಗಳನ್ನು ಪ್ರಸಾರ ಮಾಡಲಾಗಿತ್ತು.
ಮಾರ್ಚ್ ನಲ್ಲಿ ವೈಟ್ ಹೌಸ್ ಅಧಿಕೃತ ಆ್ಯಪ್ ಒಂದನ್ನೂ ಬಿಡುಗಡೆ ಮಾಡಿತ್ತು. ಅದು ಈಗ ಆ್ಯಪ್ ಸ್ಟೋರ್‌ನಲ್ಲಿ ಎರಡನೇ ಅತಿ ಜನಪ್ರಿಯ ಸುದ್ದಿ ಆ್ಯಪ್ ಆಗಿದೆ ಎಂದು ಶ್ವೇತಭವನ ತಿಳಿಸಿದೆ.
‘ಅಮೆರಿಕದ ಜನರು ಆ ಕ್ಯಾಮೆರಾಗಳಿಗಾಗಿ ಕಾಯುತ್ತಿಲ್ಲ; ಅವರು ನೇರವಾಗಿ ಅಧ್ಯಕ್ಷೀಯ ಕಚೇರಿಯನ್ನೇ ಸಂಪರ್ಕಿಸುತ್ತಿದ್ದಾರೆ’ ಎಂದು ಆ್ಯಪ್ ನ ಜನಪ್ರಿಯತೆಯನ್ನು ಉಲ್ಲೇಖಿಸಿ ವೈಟ್ ಹೌಸ್ ಹೇಳಿತ್ತು.
ಹೆಲಿಪ್ಯಾಡ್‌ನಲ್ಲಿ ಧ್ವನಿ ಸಮಸ್ಯೆ
ಸೋಮವಾರ ನೆಟ್‌ವರ್ಕ್ ಟಿವಿ ವರದಿಗಾರರ ಪೂಲ್ ನ ಉಪಸ್ಥಿತಿಯಿಲ್ಲದೆ ನಡೆದ ತಮ್ಮ ಮೊದಲ ಕಾರ್ಯಕ್ರಮದಲ್ಲಿ ಟ್ರಂಪ್ ನ್ಯೂಯಾರ್ಕ್ ಗೆ ತೆರಳುವ ಮುನ್ನ ವೈಟ್ ಹೌಸ್ ನ ಹೊಸ ಹೆಲಿಪ್ಯಾಡ್ ಅನಾವರಣಗೊಳಿಸಿದರು.
ವೈಟ್ ಹೌಸ್ ನ ವೀಡಿಯೊ ಪ್ರಸಾರದಲ್ಲಿ ಟ್ರಂಪ್ ಅವರ ಮಾತುಗಳು ಬಹುತೇಕ ಕೇಳಿಸಲಿಲ್ಲ. ಸ್ಥಳೀಯ ವರದಿಗಾರರ ತಂಡದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ‘ವಾಷಿಂಗ್ಟನ್ ಬ್ಲೇಡ್’ನ ವೈಟ್ ಹೌಸ್ ವರದಿಗಾರ ಜೋ ರೆಬರ್‌ಕೆನ್ನಿ, ‘ಹೆಲಿಕಾಪ್ಟರ್‌ನ ಶಬ್ದದ ಕಾರಣದಿಂದ ಟ್ರಂಪ್ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.
ಕಾಲಿನ್ಸ್ ಉಪಸ್ಥಿತಿಗೆ ಟ್ರಂಪ್ ಅಸಮಾಧಾನ
ಮಂಗಳವಾರ ವಿಶ್ವಸಂಸ್ಥೆಗೆ ಆಗಮಿಸಿದ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಟ್ರಂಪ್, CNNನ ಕೈಟ್ಲಾನ್ ಕಾಲಿನ್ಸ್ ಅವರ ಉಪಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
‘ನೀವು ನನ್ನ ಬಗ್ಗೆ ವರದಿ ಮಾಡಲು ಇಲ್ಲಿ ಇರಬಾರದು. ನೀವು ನನ್ನನ್ನು ವರದಿ ಮಾಡುವುದಿಲ್ಲ ಎಂದು ಹೇಳಿದ್ದಿರಿ’ ಎಂದು ಕಾಲಿನ್ಸ್ ಅವರನ್ನು ಉದ್ದೇಶಿಸಿ ಟ್ರಂಪ್ ಹೇಳಿದರು.
ಆದರೆ, ‘ಎಕ್ಸ್’ನಲ್ಲಿನ ಪೋಸ್ಟ್ ನಲ್ಲಿ ಕಾಲಿನ್ಸ್, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ವರದಿ ಮಾಡಲು ತಮಗೆ ಅಧಿಕೃತ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಗುರುವಾರ ರಾತ್ರಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವೈಟ್ ಹೌಸ್ ಭೇಟಿಯ ಸಂದರ್ಭದಲ್ಲಿ ಟೆಲಿವಿಷನ್ ಪೂಲ್ ಆಗಿ ಕಾರ್ಯನಿರ್ವಹಿಸಲು CNN ಅನ್ನು ನಿಗದಿಪಡಿಸಲಾಗಿತ್ತು.
ಮಂಗಳವಾರದ ಆರಂಭದಲ್ಲಿ NBCಯ ‘ಟುಡೇ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ನಿಷೇಧವನ್ನು ಸಮರ್ಥಿಸಿಕೊಂಡಿದ್ದರು.
‘ನಾವು CNN ಅನ್ನು ಮುಚ್ಚುತ್ತಿಲ್ಲ. MSNBC ಅಥವಾ MS NOW—ಏನೇ ಹೆಸರಿದ್ದರೂ—ಅದರ ಬಾಗಿಲುಗಳನ್ನು ಒಡೆದು ನುಗ್ಗಿ, ಜನರನ್ನು ಬಂಧಿಸಿ ಅಥವಾ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಹ ಪೊಲೀಸ್ ಅಧಿಕಾರಿಗಳು ಅಥವಾ ಸೈನಿಕರು ಅಲ್ಲಿಗೆ ಹೋಗುತ್ತಿಲ್ಲ. ಅವರಿಗೆ ಕೇವಲ ವೈಟ್ ಹೌಸ್‌ನಲ್ಲಿರುವ ಕೆಲಸದ ಸ್ಥಳದಿಂದ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿಲ್ಲ ಅಷ್ಟೇ’ ಎಂದು ರೂಬಿಯೊ ಹೇಳಿದ್ದರು.