×
Ad

ಉಕ್ರೇನ್‍ ನಲ್ಲಿ 3 ದಿನದ ಯುದ್ಧ ವಿರಾಮ ಜಾರಿ: ರಶ್ಯ ಘೋಷಣೆ

Update: 2025-05-08 20:47 IST

PC : NDTV 

ಮಾಸ್ಕೋ: ಎರಡನೇ ವಿಶ್ವಯುದ್ಧ ಅಂತ್ಯಗೊಂಡ ದಿನಾಚರಣೆಯ ಅಂಗವಾಗಿ ಉಕ್ರೇನ್‌ ನಲ್ಲಿ ರಶ್ಯ ಘೋಷಿಸಿರುವ 3 ದಿನಗಳ ಕದನ ವಿರಾಮ ಗುರುವಾರದಿಂದ ಜಾರಿಗೆ ಬಂದಿರುವುದಾಗಿ ರಶ್ಯ ಸರಕಾರ ಘೋಷಿಸಿದೆ.

ಮೇ 8ರಿಂದ ಮೇ 10ರವರೆಗೆ ಯುದ್ಧ ವಿರಾಮ ಜಾರಿಯಲ್ಲಿರುತ್ತದೆ. ಈ ಕ್ರಮವು ಶಾಂತಿಗೆ ಉಕ್ರೇನ್ ಸಿದ್ಧವಿದೆಯೇ ಎಂಬುದನ್ನು ಪರೀಕ್ಷಿಸುವ ಪ್ರಕ್ರಿಯೆಯಾಗಿದೆ ಎಂದು ರಶ್ಯ ಅಧ್ಯಕ್ಷರ ಕಚೇರಿ ಹೇಳಿದೆ. ಆದರೆ ಕದನ ವಿರಾಮ ಎಂಬುದು ರಶ್ಯದ ಮತ್ತೊಂದು ಪ್ರಹಸನ ಎಂದು ಉಕ್ರೇನ್ ಟೀಕಿಸಿದೆ.

ಎರಡನೇ ಮಹಾಯುದ್ಧದಲ್ಲಿ ಯುಎಸ್‍ಎಸ್‍ಆರ್ (ಸೋವಿಯತ್ ಒಕ್ಕೂಟ)ದ ಗೆಲುವಿನ ಸಂಭ್ರಮಾಚರಣೆಯ ಅಂಗವಾಗಿ ಮೇ 9ರಂದು ಮಾಸ್ಕೋದ `ರೆಡ್ ಸ್ಕ್ವೇರ್'ನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಪಸ್ಥಿತಿಯಲ್ಲಿ ಪೆರೇಡ್ ನಡೆಯಲಿದ್ದು 20ಕ್ಕೂ ಅಧಿಕ ದೇಶಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. `ರಶ್ಯ ಏಕಪಕ್ಷೀಯವಾಗಿ ಘೋಷಿಸಿರುವ 72 ಗಂಟೆಗಳ ಕದನ ವಿರಾಮವು ಉಕ್ರೇನ್‌ ನ ಶಾಂತಿಯುತ ಉದ್ದೇಶಗಳ ಪರೀಕ್ಷೆಯಾಗಲಿದೆ' ಎಂದು ರಶ್ಯ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೊವಾರನ್ನು ಉಲ್ಲೇಖಿಸಿ `ತಾಸ್' ಸುದ್ದಿಸಂಸ್ಥೆ ವರದಿ ಮಾಡಿದೆ.

ಇದೊಂದು ರಾಜಕೀಯ ಉದ್ದೇಶದ ಮತ್ತು ಪುಟಿನ್ ಸೇನೆಯ ಪರೇಡ್‍ಗೆ ಸೀಮಿತವಾಗಿರುವ ಕ್ರಮವಾಗಿದ್ದು ಬೇರೆ ಯಾವ ಉದ್ದೇಶವೂ ಇದರ ಹಿಂದೆ ಇಲ್ಲ ಎಂದು ಉಕ್ರೇನ್ ಕದನ ವಿರಾಮವನ್ನು ತಿರಸ್ಕರಿಸಿದ್ದು 30 ದಿನಗಳ ತಾತ್ಕಾಲಿಕ ಕದನ ವಿರಾಮವನ್ನು ಪ್ರತಿಪಾದಿಸಿದೆ. ಉಕ್ರೇನ್‌ ನ ನಿಲುವನ್ನು ಅಮೆರಿಕವೂ ಬೆಂಬಲಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News