ಶೇಖ್ ಹಸೀನಾ (Photo: India Today)

ಢಾಕಾ: ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ, ತವರಿಗೆ ಮರಳುವ ಉದ್ದೇಶದಿಂದ ಹೊಸ ಪಾಸ್‌ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿಗಾಗಿ (NID) ಅರ್ಜಿ ಸಲ್ಲಿಸಿದ್ದಾರೆ. ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವ ಅವರ ಯೋಜನೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಆದರೆ, ಶೇಖ್ ಹಸೀನಾ ಅವರಿಗೆ ಹೊಸ ಪ್ರಯಾಣ ದಾಖಲೆಗಳನ್ನು ನೀಡುವ ಬದಲು ಅವರನ್ನು ಭಾರತದಿಂದ ಹಸ್ತಾಂತರಿಸಬೇಕು ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯುನ್ ಕಬೀರ್ ಒತ್ತಾಯಿಸಿದ್ದಾರೆ. “ನಮಗೆ ಹಸೀನಾ ಅವರನ್ನು ಹಸ್ತಾಂತರಿಸಬೇಕು. ಅವರು ಪರಾರಿಯಾಗಿರುವ ವ್ಯಕ್ತಿ. ಭಾರತ ಮತ್ತು ಬಾಂಗ್ಲಾದೇಶ ನಡುವೆ ಸಕ್ರಿಯ ಹಸ್ತಾಂತರ ಒಪ್ಪಂದವಿದೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಬಾಂಗ್ಲಾದೇಶದ ದಿ ಡೈಲಿ ಸ್ಟಾರ್ ವರದಿ ಮಾಡಿದೆ.

ರಾಯಿಟರ್ಸ್ ವರದಿಯ ಪ್ರಕಾರ, ಶೇಖ್ ಹಸೀನಾ ಅವರ ವಕೀಲರು ದಿಲ್ಲಿಯಲ್ಲಿರುವ ಬಾಂಗ್ಲಾದೇಶ ರಾಯಭಾರ ಕಚೇರಿಗೆ ಪತ್ರ ಬರೆದು ಹೊಸ ಪಾಸ್‌ಪೋರ್ಟ್ ಮತ್ತು ಗುರುತಿನ ಚೀಟಿ ನೀಡುವಂತೆ ಮನವಿ ಮಾಡಿದ್ದಾರೆ.

2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಭೀಕರ ಪ್ರತಿಭಟನೆಯ ಪರಿಣಾಮವಾಗಿ ತಮ್ಮ 20 ವರ್ಷಗಳ ಆಡಳಿತ ಕಳೆದುಕೊಂಡು ದೇಶದಿಂದ ಪಲಾಯನ ಮಾಡಿದ ಬಳಿಕ ಹಸೀನಾ ಅವರ ಕಡೆಯಿಂದ ನಡೆದಿರುವ ಇಂತಹ ಮೊದಲ ಅಧಿಕೃತ ಸಂಪರ್ಕ ಇದಾಗಿದೆ.

ಲಂಡನ್ ಮೂಲದ ಮ್ಯಾಟ್ರಿಕ್ಸ್ ಚೇಂಬರ್ಸ್‌ನಲ್ಲಿರುವ ಅವರ ವಕೀಲರು, ದಿಲ್ಲಿಯ ಬಾಂಗ್ಲಾದೇಶ ರಾಯಭಾರ ಕಚೇರಿಯ ಹಂಗಾಮಿ ಹೈಕಮಿಷನರ್ ಪ್ರೀತಿ ರಹಮಾನ್ ಅವರಿಗೆ ಪತ್ರ ರವಾನಿಸಿದ್ದಾರೆ.

ಬಾಂಗ್ಲಾದೇಶದ ಮಧ್ಯಂತರ ಸರಕಾರ ಮತ್ತು ಇತರ ಅಧಿಕಾರಿಗಳು ಹಸೀನಾ ಅವರ ಹಳೆಯ ಪಾಸ್‌ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿಯನ್ನು ರದ್ದುಗೊಳಿಸಿರುವ ವರದಿಗಳನ್ನು ಉಲ್ಲೇಖಿಸಿರುವ ವಕೀಲರು, ಅವರ ಬಾಂಗ್ಲಾದೇಶದ ಪೌರತ್ವದ ಆಧಾರದ ಮೇಲೆ ಹೊಸ ದಾಖಲೆಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಅಲ್ಲದೆ, ಬಾಂಗ್ಲಾದೇಶದ ಪೌರತ್ವ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳ ಅಡಿಯಲ್ಲಿ ದೇಶಕ್ಕಿರುವ ಬಾಧ್ಯತೆಗಳನ್ನು ಉಲ್ಲೇಖಿಸಿ, ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ.

ಈ ಹಿಂದೆ ಶೇಖ್ ಹಸೀನಾ ಅವರು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಿ ನ್ಯಾಯಾಲಯದ ಮುಂದೆ ಶರಣಾಗುವುದಾಗಿ ಹೇಳಿದ್ದರು. ಅಗತ್ಯ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ವಾಪಸಾತಿಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರ ಆಪ್ತರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor