ಪೀಟ್ ಹೆಗ್ಸೆತ್ | Photo Credit : AP , PTI 

ವಾಷಿಂಗ್ಟನ್‌, ಸೆ. 6: ಅಮೆರಿಕದ ನೌಕಾಪಡೆಯ ಹಡಗುಗಳ ಮೇಲೆ ಇರಾನ್‌ ದಾಳಿ ನಡೆಸಿದರೆ, ಇರಾನ್‌ನ ತೈಲ ಟ್ಯಾಂಕರ್‌ ಗಳನ್ನು ನಾಶಪಡಿಸಿ ಮುಳುಗಿಸುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್‌ ಹೆಗ್ಸೆತ್‌ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ (IRGC) ಅಮೆರಿಕದ ಎರಡು ನೌಕಾಪಡೆಯ ಹಡಗುಗಳ ಮೇಲೆ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಿಂದ ದಾಳಿ ನಡೆಸಿದೆ ಎಂದು ಅಮೆರಿಕದ ಸೆಂಟ್ರಲ್‌ ಕಮಾಂಡ್‌ (ಸೆಂಟ್‌ಕಾಮ್‌) ಹೇಳಿದೆ. ಈ ದಾಳಿಗೆ ಪ್ರತಿಯಾಗಿ ಅಮೆರಿಕ ಮೂರು ಇರಾನಿನ ತೈಲ ಟ್ಯಾಂಕರ್‌ ಗಳ ಮೇಲೆ ದಾಳಿ ನಡೆಸಿದೆ ಎಂದು ಸೆಂಟ್‌ಕಾಮ್‌ ತಿಳಿಸಿದೆ.

ಇದರ ಬೆನ್ನಲ್ಲೇ ಹೆಗ್ಸೆತ್‌ ಇರಾನ್‌ ಗೆ ಈ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಇರಾನ್‌ ಅಮೆರಿಕದ ಹಡಗುಗಳ ಮೇಲೆ ಗುಂಡು ಹಾರಿಸಿದರೆ, ನಾವು ಅವರ ತೈಲ ಟ್ಯಾಂಕರ್‌ ಗಳನ್ನು ನಾಶಪಡಿಸುತ್ತೇವೆ ಮತ್ತು ಮುಳುಗಿಸುತ್ತೇವೆ. ಅವರು ಮಾಡಬೇಕಾಗಿರುವುದು ಅಮೆರಿಕದ ನೌಕಾಪಡೆಯ ಮೇಲೆ ಗುಂಡು ಹಾರಿಸದಿರುವುದು’ ಎಂದು ಹೇಳಿದ್ದಾರೆ.

ಅಮೆರಿಕದ ಸೆಂಟ್‌ಕಾಮ್‌ ಕಮಾಂಡರ್‌ ಅಡ್ಮಿರಲ್‌ ಬ್ರಾಡ್‌ ಕೂಪರ್‌ ಕೂಡ ಇರಾನ್‌ ಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಹಡಗುಗಳ ಮೇಲೆ ದಾಳಿ ನಡೆಸಿದರೆ ಇರಾನ್‌ ಹೆಚ್ಚಿನ ಆರ್ಥಿಕ ಬೆಲೆ ತೆರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

IRGC ಎರಡು ಅಮೆರಿಕದ ಹಡಗುಗಳ ಮೇಲೆ ದಾಳಿ ನಡೆಸಿದರೆ, ಅಮೆರಿಕ ಮೂರು ಇರಾನಿನ ಹಡಗುಗಳನ್ನು ಗುರಿಯಾಗಿಸಿ ಪ್ರತಿಕ್ರಿಯಿಸಲಿದೆ ಎಂದು ಕೂಪರ್‌ ತಿಳಿಸಿದ್ದಾರೆ. ಅಮೆರಿಕ ತನ್ನ ಪಡೆಗಳನ್ನು ರಕ್ಷಿಸಿಕೊಳ್ಳಲು ಮತ್ತು ಅಗತ್ಯಬಿದ್ದರೆ ಇರಾನ್‌ ನ ‘ಸೀಮಿತ ಹಾಗೂ ಬಹಿರಂಗ ತೈಲ ನೌಕಾಪಡೆ’ಯನ್ನು ನಾಶಪಡಿಸಲು ಹಿಂಜರಿಯುವುದಿಲ್ಲ ಎಂದೂ ಹೇಳಿದ್ದಾರೆ.

ಖಾರ್ಗ್‌ ದ್ವೀಪದ ಬಳಿ ಟ್ಯಾಂಕರ್‌ ಮೇಲೆ ದಾಳಿ :

ಇರಾನ್‌ ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್‌ ದ್ವೀಪದ ಬಳಿ ಒಂದು ಸೇರಿದಂತೆ ಮೂರು ಇರಾನಿನ ತೈಲ ಟ್ಯಾಂಕರ್‌ ಗಳ ಮೇಲೆ ಶನಿವಾರ ಅಮೆರಿಕ ದಾಳಿ ನಡೆಸಿದೆ ಎಂದು ಸೆಂಟ್‌ಕಾಮ್‌ ತಿಳಿಸಿದೆ.

ಈ ದಾಳಿಗಳು IRGC ಅಮೆರಿಕದ ಎರಡು ನೌಕಾಪಡೆಯ ಹಡಗುಗಳ ಮೇಲೆ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಹಾರಿಸಿದ ಬಳಿಕ ನಡೆದವು ಎಂದು ಸೆಂಟ್‌ಕಾಮ್‌ ಹೇಳಿದೆ. ದಾಳಿಯಲ್ಲಿ ಯಾವುದೇ ಅಮೆರಿಕದ ಸಿಬ್ಬಂದಿಗೆ ಹಾನಿಯಾಗಿಲ್ಲ ಎಂದೂ ತಿಳಿಸಿದೆ.

ಇರಾನ್‌ ನ IRGC ನೌಕಾಪಡೆ ಪರ್ಷಿಯನ್‌ ಕೊಲ್ಲಿ ಮತ್ತು ಹಾರ್ಮುಝ್ ಜಲಸಂಧಿ ಸಮೀಪದ ಹಡಗುಗಳ ‘ಅನುಮಾನಾಸ್ಪದ ಚಲನವಲನ’ಗಳ ವಿರುದ್ಧ ಈ ಹಿಂದೆ ಎಚ್ಚರಿಕೆ ನೀಡಿತ್ತು. ಹಾರ್ಮುಝ್ ಜಲಸಂಧಿಯಲ್ಲಿ ಅನಧಿಕೃತ ಮಾರ್ಗಗಳ ಮೂಲಕ ಸಾಗುತ್ತಿದ್ದ ಮೂರು ತೈಲ ಟ್ಯಾಂಕರ್‌ ಗಳು ಹಾಗೂ ಇತರ ಪ್ರದೇಶಗಳಲ್ಲಿದ್ದ ಮೂರು ಅಮೆರಿಕದ ಹಡಗುಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇರಾನ್‌ ಪಡೆ ಹೇಳಿದೆ.

‘ಅಮೆರಿಕದ ಹಡಗುಗಳ ಮೇಲಿನ ದಾಳಿ ತೀವ್ರಗೊಳ್ಳಲಿದೆ’ :

ಅಮೆರಿಕದ ದಾಳಿ ಮತ್ತು ಬೆದರಿಕೆಗಳಿಗೆ ಪ್ರತಿಕ್ರಿಯಿಸಿರುವ ಇರಾನ್‌, ಅಮೆರಿಕ ತನ್ನ ಹಡಗುಗಳಿಗೆ ಕಿರುಕುಳ ನೀಡುವುದು ಮತ್ತು ನೌಕಾ ದಿಗ್ಬಂಧನ ಮುಂದುವರಿಸಿದರೆ, ಅಮೆರಿಕದ ಸೇನಾ ಹಡಗುಗಳ ಮೇಲಿನ ಇರಾನ್‌ ನ ದಾಳಿಗಳು ಹಿಂದಿಗಿಂತ ಹೆಚ್ಚು ತೀವ್ರವಾಗಲಿವೆ ಎಂದು ಎಚ್ಚರಿಸಿದೆ.

ಈ ದಾಳಿಗಳು ಮತ್ತಷ್ಟು ಪ್ರದೇಶಗಳಿಗೆ ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಇರಾನ್‌ ನ ಮಿಲಿಟರಿ ಕಮಾಂಡ್‌ ಹೇಳಿದೆ.

ಖಾರ್ಗ್‌ ದ್ವೀಪದ ಲಂಗರು ಪ್ರದೇಶದ ಬಳಿ ನಾಲ್ಕು ಅಮೆರಿಕದ ಕ್ಷಿಪಣಿಗಳು ಟ್ಯಾಂಕರ್‌ ಒಂದಕ್ಕೆ ಅಪ್ಪಳಿಸಿವೆ ಎಂದು ಇರಾನ್‌ ನ ಸುದ್ದಿ ಸಂಸ್ಥೆ ತಸ್ನಿಮ್‌ ವರದಿ ಮಾಡಿದೆ. ಯಾವುದೇ ಸಾವುನೋವು ಸಂಭವಿಸಿಲ್ಲ. ಟ್ಯಾಂಕರ್‌ ನ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಸಂಘರ್ಷದ ಕೇಂದ್ರವಾದ ಖಾರ್ಗ್‌ ದ್ವೀಪ :

ಇರಾನ್‌ನ ತೈಲ ಉದ್ಯಮದ ಮೇಲೆ ಅಮೆರಿಕದ ಒತ್ತಡ ಹೆಚ್ಚುತ್ತಿರುವ ನಡುವೆಯೇ ಈ ಸಂಘರ್ಷ ತೀವ್ರಗೊಂಡಿದೆ.

ಆಗಸ್ಟ್‌ 31ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಐ ಮೂಲಕ ಸೃಷ್ಟಿಸಲಾದ ವಿಡಿಯೊದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡು, ಖಾರ್ಗ್‌ ದ್ವೀಪ ‘ಧ್ವಂಸಗೊಳ್ಳುತ್ತಿದೆ’ ಎಂದು ಹೇಳಿದ್ದರು. ದ್ವೀಪದ ಮೇಲೆ ದಾಳಿ ನಡೆದರೆ ಬಲವಾದ ಪ್ರತಿಕ್ರಿಯೆ ನೀಡುವುದಾಗಿ ಇರಾನ್‌ನ ಅಧಿಕಾರಿಗಳು ಎಚ್ಚರಿಸಿದ್ದರು.

ಜೂನ್‌ 11ರಂದು ಟ್ರಂಪ್‌ ಖಾರ್ಗ್‌ ದ್ವೀಪವನ್ನು ವಶಪಡಿಸಿಕೊಳ್ಳಲು ಬಯಸುವುದಾಗಿ ಹೇಳಿದ್ದರು. ಆದರೆ, ಬಳಿಕ ದ್ವೀಪದಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಯ ಬೆದರಿಕೆ ಸದ್ಯಕ್ಕೆ ಇಲ್ಲ ಎಂದು ತಿಳಿಸಿದ್ದರು.

ಇರಾನ್‌ನ ತೈಲ ರಫ್ತಿಗೆ ಪ್ರಮುಖ ಕೇಂದ್ರ :

ತೈಲ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್‌)ಯಲ್ಲಿ ಇರಾನ್‌ ಮೂರನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಯುದ್ಧಕ್ಕೂ ಮುನ್ನ ಇರಾನ್‌ ತನ್ನ ಕಚ್ಚಾ ತೈಲದ ಸುಮಾರು ಶೇ 90ರಷ್ಟನ್ನು ಖಾರ್ಗ್‌ ದ್ವೀಪದ ಮೂಲಕ ರಫ್ತು ಮಾಡುತ್ತಿತ್ತು.

ಏಪ್ರಿಲ್‌ ಮಧ್ಯದಲ್ಲಿ ಅಮೆರಿಕ ಇರಾನ್‌ನ ತೈಲ ರಫ್ತಿನ ಮೇಲೆ ನಿರ್ಬಂಧ ವಿಧಿಸಿದ ಬಳಿಕ ತೈಲ ಹರಿವು ಅಸ್ತವ್ಯಸ್ತಗೊಂಡಿದೆ.

ಯುದ್ಧಕ್ಕೂ ಮುನ್ನ ಜಾಗತಿಕ ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗ ಸಾಗುತ್ತಿದ್ದ ಪ್ರಮುಖ ಜಲಮಾರ್ಗವಾದ ಹಾರ್ಮುಜ್‌ ಜಲಸಂಧಿಯನ್ನು ಇರಾನ್‌ ಪರಿಣಾಮಕಾರಿಯಾಗಿ ಮುಚ್ಚಿದ ಬಳಿಕ ಅಮೆರಿಕ ಇರಾನ್‌ನ ಬಂದರುಗಳ ಮೇಲೆ ದಿಗ್ಬಂಧನ ಹೇರಿದೆ.

ತೈಲ ಪೂರೈಕೆ ಆತಂಕ; ಬೆಲೆ ಏರಿಕೆ 

ಅಮೆರಿಕ–ಇರಾನ್‌ ಸಂಘರ್ಷ ತೀವ್ರಗೊಂಡಿರುವುದು ಹಾರ್ಮುಜ್‌ ಜಲಸಂಧಿ ಮೂಲಕ ನಡೆಯುವ ಜಾಗತಿಕ ಇಂಧನ ಪೂರೈಕೆ ಮತ್ತು ಸಾಗಣೆ ಕುರಿತು ಆತಂಕ ಹೆಚ್ಚಿಸಿದೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿರುವುದರಿಂದ ತೈಲ ಪೂರೈಕೆಯಲ್ಲಿ ಮತ್ತಷ್ಟು ವ್ಯತ್ಯಯ ಉಂಟಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಫ್ಯೂಚರ್ಸ್‌ ಬೆಲೆ ಶುಕ್ರವಾರ ಬ್ಯಾರೆಲ್‌ಗೆ 96.28 ಡಾಲರ್‌ಗೆ ಮುಕ್ತಾಯಗೊಂಡಿತು. ಇದು ಜುಲೈ 24ರ ಬಳಿಕದ ಗರಿಷ್ಠ ಮಟ್ಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor