ಇಸ್ರೇಲ್ ಮೇಲೆ ‘ಅಕ್ಟೋಬರ್ 7’ರ ಮಾದರಿಯ ದಾಳಿಗೆ ಇರಾನ್ ಸಿದ್ಧತೆ: 'ಜೆರುಸಲೇಂ ಪೋಸ್ಟ್' ವರದಿ
Photo Credit : PTI
ಜೆರುಸಲೇಂ: ಹಮಾಸ್, ಹಿಜ್ಬುಲ್ಲಾ, ಹೌತಿಗಳು ಸೇರಿದಂತೆ ತನ್ನ ಬೆಂಬಲಿತ ಸಂಘಟನೆಗಳನ್ನು ಬಳಸಿಕೊಂಡು ಇಸ್ರೇಲ್ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಸಲು ಇರಾನ್ ಯೋಜಿಸುತ್ತಿದೆ ಎಂದು ಇಸ್ರೇಲಿ ಗುಪ್ತಚರ ಮಾಹಿತಿಯನ್ನು ಉಲ್ಲೇಖಿಸಿ ‘ಜೆರುಸಲೇಂ ಪೋಸ್ಟ್’ ವರದಿ ಮಾಡಿದೆ.
ಇಸ್ರೇಲ್ ವಿರುದ್ಧ ಒಂದೇ ಸಮಯದಲ್ಲಿ ಹಲವು ಕಡೆಗಳಿಂದ ದಾಳಿ ನಡೆಸುವುದು ಇರಾನ್ ನ ಯೋಜನೆ ಎನ್ನಲಾಗಿದೆ. ಲೆಬನಾನ್ ನ ಹಿಜ್ಬುಲ್ಲಾ, ಯೆಮೆನ್ ನ ಹೌತಿಗಳು, ಹಮಾಸ್ ಹಾಗೂ ಇರಾಕ್ ಮತ್ತು ಸಿರಿಯಾದಲ್ಲಿರುವ ಇರಾನ್ ಪರ ಮಿಲಿಟರಿ ಸಂಘಟನೆಗಳನ್ನು ಈ ದಾಳಿಯಲ್ಲಿ ಬಳಸಿಕೊಳ್ಳಲು ಇರಾನ್ ಮುಂದಾಗಿದೆ ಎಂದು ವರದಿ ತಿಳಿಸಿದೆ. ಈ ಸಂಘಟನೆಗಳ ಒಕ್ಕೂಟವನ್ನು ಇರಾನ್ ‘ಪ್ರತಿರೋಧದ ಅಕ್ಷ’ ಎಂದು ಕರೆಯುತ್ತದೆ.
2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಹಮಾಸ್ ನ ಅಂದಿನ ನಾಯಕ ಯಾಹ್ಯಾ ಸಿನ್ವರ್, ಈ ದಾಳಿಯ ಬಳಿಕ ಇರಾನ್ ಮತ್ತು ಹಿಜ್ಬುಲ್ಲಾ ಕೂಡ ಯುದ್ಧಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷಿಸಿದ್ದರು. ಇಸ್ರೇಲ್ ವಿರುದ್ಧ ದೊಡ್ಡ ಪ್ರಾದೇಶಿಕ ಯುದ್ಧ ನಡೆಸುವುದು ಅವರ ಉದ್ದೇಶವಾಗಿತ್ತು ಎಂದು ಗಾಝಾದಿಂದ ವಶಪಡಿಸಿಕೊಳ್ಳಲಾದ ಹಮಾಸ್ ನ ದಾಖಲೆಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.
ಆದರೆ, ಅಕ್ಟೋಬರ್ 7ರ ದಾಳಿಯ ದಿನಾಂಕ ಮತ್ತು ಅದರ ಸಂಪೂರ್ಣ ಯೋಜನೆ ಬಗ್ಗೆ ಇರಾನ್ ಹಾಗೂ ಹಿಜ್ಬುಲ್ಲಾಗೆ ಮುಂಚಿತವಾಗಿ ಮಾಹಿತಿ ಇರಲಿಲ್ಲ ಎಂದು ಅಮೆರಿಕ ಮತ್ತು ಇಸ್ರೇಲ್ ನ ಹಿಂದಿನ ಗುಪ್ತಚರ ಮೌಲ್ಯಮಾಪನಗಳು ಹೇಳಿದ್ದವು. ಹೀಗಾಗಿ, ಹಮಾಸ್ ದಾಳಿ ನಡೆಸಿದಾಗ ಇತರ ಸಂಘಟನೆಗಳು ಅದೇ ರೀತಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಿಲ್ಲ. ಹಿಜ್ಬುಲ್ಲಾ ಉತ್ತರ ಇಸ್ರೇಲ್ ಮೇಲೆ ಸೀಮಿತ ದಾಳಿಗಳನ್ನು ಮಾತ್ರ ನಡೆಸಿತ್ತು.
ಈ ಬಾರಿ ಒಂದೇ ಸಮಯದಲ್ಲಿ ದಾಳಿ?
ಅಕ್ಟೋಬರ್ 7ರಂದು ನಡೆದಂತಹ ಸಮನ್ವಯದ ಕೊರತೆ ಮತ್ತೆ ಉಂಟಾಗದಂತೆ ಇರಾನ್ ಈ ಬಾರಿ ತನ್ನ ಬೆಂಬಲಿತ ಸಂಘಟನೆಗಳನ್ನು ಮೊದಲೇ ಒಗ್ಗೂಡಿಸುತ್ತಿದೆ ಎಂದು ಇಸ್ರೇಲಿನ ಗುಪ್ತಚರ ಮಾಹಿತಿಗಳು ಸೂಚಿಸಿವೆ.
ಅಂದರೆ, ಒಂದು ಸಂಘಟನೆ ದಾಳಿ ಆರಂಭಿಸಿದ ಬಳಿಕ ಉಳಿದ ಸಂಘಟನೆಗಳು ಸೇರುವ ಬದಲು, ಹಿಜ್ಬುಲ್ಲಾ, ಹೌತಿಗಳು, ಹಮಾಸ್ ಮತ್ತು ಇರಾನ್ ಪರ ಇರಾಕಿ ಮಿಲಿಟರಿ ಸಂಘಟನೆಗಳು ಒಂದೇ ಸಮಯದಲ್ಲಿ ದಾಳಿ ಆರಂಭಿಸುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಈ ಮೂಲಕ ಇಸ್ರೇಲ್ ಮೇಲೆ ಹಲವು ದಿಕ್ಕುಗಳಿಂದ ಏಕಕಾಲದಲ್ಲಿ ಒತ್ತಡ ಹೇರಲು ಉದ್ದೇಶಿಸಲಾಗಿದೆ.
ಹಮಾಸ್ ಮತ್ತು ಹಿಜ್ಬೊಲ್ಲಾ ನಡುವೆ ಇರಾನ್‌ನ ನೆರವಿನಿಂದ ಮತ್ತೆ ಸಮನ್ವಯ ಹೆಚ್ಚುತ್ತಿರುವುದನ್ನು ಇಸ್ರೇಲ್ ರಕ್ಷಣಾ ಪಡೆಗಳು ಗುರುತಿಸಿವೆ. ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಇಸ್ರೇಲ್ ಮೇಲೆ ಒತ್ತಡ ಹೆಚ್ಚಿಸುವುದು ಇದರ ಉದ್ದೇಶ ಎಂದು ಹೇಳಲಾಗಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಕುಡ್ಸ್ ಫೋರ್ಸ್ ನ ಹಿರಿಯ ಅಧಿಕಾರಿಗಳು ಹಿಜ್ಬುಲ್ಲಾ, ಹೌತಿಗಳು ಮತ್ತು ಇರಾಕ್ ನ ಇರಾನ್ ಪರ ಮಿಲಿಟರಿ ಸಂಘಟನೆಗಳ ಕಮಾಂಡರ್ ಗಳೊಂದಿಗೆ ಸಭೆಗಳು ಮತ್ತು ದೂರವಾಣಿ ಮಾತುಕತೆ ನಡೆಸಿದ್ದಾರೆ. ದಾಳಿಯನ್ನು ಮತ್ತಷ್ಟು ವಿಸ್ತರಿಸುವ ಕುರಿತು ಈ ಚರ್ಚೆಗಳು ನಡೆದಿವೆ ಎಂದು ವರದಿ ಹೇಳಿದೆ.
ಮಿಲಿಟರಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿರುವ ಇರಾನ್
ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಹಿಂದಿನ ಸಂಘರ್ಷಗಳಲ್ಲಿ ಹಾನಿಗೊಳಗಾದ ತನ್ನ ಮಿಲಿಟರಿ ಸಾಮರ್ಥ್ಯವನ್ನು ಮತ್ತೆ ಬಲಪಡಿಸಲು ಇರಾನ್ ಪ್ರಯತ್ನಿಸುತ್ತಿದೆ ಎಂದು ವರದಿ ತಿಳಿಸಿದೆ.
ಇದರ ಜತೆಗೆ, ಇರಾನ್ ಬೆಂಬಲಿತ ಸಂಘಟನೆಗಳ ನಡುವಿನ ಸಂಪರ್ಕವನ್ನೂ ಬಲಪಡಿಸಲಾಗುತ್ತಿದೆ. ಅವುಗಳ ನಡುವೆ ಜಂಟಿ ತರಬೇತಿ ಕಾರ್ಯಾಚರಣೆಗಳು ನಡೆದಿವೆ ಎನ್ನಲಾಗಿದ್ದು, ಪರಸ್ಪರ ಕಾರ್ಯಾಚರಣೆ ಮತ್ತು ವೈಯಕ್ತಿಕ ಮಟ್ಟದ ಸಂಪರ್ಕವೂ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಆದರೆ, ಇಸ್ರೇಲ್ ಮೇಲೆ ಇಂತಹ ದಾಳಿ ಯಾವಾಗ ನಡೆಯಲಿದೆ ಎಂಬುದನ್ನು ವರದಿ ತಿಳಿಸಿಲ್ಲ.