ಸಾಂದರ್ಭಿಕ ಚಿತ್ರ | Photo Credit : PTI

ಟೆಹರಾನ್: ಹಾರ್ಮುಝ್ ಜಲಸಂಧಿಯನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಮಾನವರಹಿತ ನೌಕೆಯ ಮೇಲೆ ತಾನು ದಾಳಿ ನಡೆಸಿರುವುದಾಗಿ ಇರಾನ್ ರವಿವಾರ ತಿಳಿಸಿದೆ. ಇದು ಎರಡೂ ದೇಶಗಳ ನಡುವೆ ಪುನರಾರಂಭಗೊಂಡಿರುವ ಸಂಘರ್ಷದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ, ವರದಿಯಾದ ಈ ದಾಳಿಯನ್ನು ಅಮೆರಿಕ ನಿರಾಕರಿಸಿದೆ.

ಈ ಮಧ್ಯೆ, ಶನಿವಾರ ಸಂಜೆ ಅಮೆರಿಕದ ವಿಮಾನ ವಾಹಕ ನೌಕೆ ಮತ್ತು ನೌಕಾಪಡೆಯ ಯುದ್ಧಹಡಗಿನ ಮೇಲೆ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿರುವುದಾಗಿ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾಪ್ರ್ಸ್ (ಐಆರ್‍ಜಿಸಿ) ಪ್ರತಿಪಾದಿಸಿದೆ.

ಈ ಎರಡು ಯುದ್ಧನೌಕೆಗಳು ಇರಾನ್‍ನ ಹಡಗುಗಳಿಗೆ ಕಿರುಕುಳ ನೀಡುತ್ತಿದ್ದು, ನೌಕಾಪಡೆಯ ದಿಗ್ಬಂಧನದಲ್ಲಿ ಭಾಗಿಯಾಗಿದ್ದವು ಎಂಬ ಕಾರಣಕ್ಕೆ ಅವುಗಳನ್ನು ಗುರಿಯಾಗಿಸಲಾಗಿದೆ. ಕ್ಷಿಪಣಿ ದಾಳಿಯಿಂದಾಗಿ ನೌಕೆಗಳಿಗೆ ಹಾನಿಯಾಗಿದೆ ಮತ್ತು ತದನಂತರ ಎರಡೂ ಯುದ್ಧಹಡಗುಗಳು ಮುಂದಿನ ದಾಳಿಯ ಭಯದಿಂದ ಆ ಪ್ರದೇಶವನ್ನು ತೊರೆದಿವೆ ಎಂದು ಐಆರ್‌ಜಿಸಿ ಮೂಲಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.

ಅಮೆರಿಕ ತನ್ನ ವೈರತ್ವ ಮತ್ತು ಆಕ್ರಮಣಕಾರಿ ಕ್ರಮಗಳನ್ನು ಮುಂದುವರಿಸಿದರೆ, ಇರಾನ್‍ನ ಸಶಸ್ತ್ರ ಪಡೆಗಳಿಂದ ತೀವ್ರವಾದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ನಾವು ಎಂದಿಗಿಂತಲೂ ಈಗ ಹೆಚ್ಚು ಶಕ್ತಿಶಾಲಿಯಾಗಿದ್ದೇವೆ ಎಂದು ಐಆರ್‍ಜಿಸಿ ಹೇಳಿದೆ.

ಇರಾನ್‍ನ ದಾಳಿಗಳಿಂದ ಅಮೆರಿಕದ ನೌಕೆಗಳು ಪಾರಾಗಿದ್ದು ಈ ಘಟನೆಯಲ್ಲಿ ಯಾವುದೇ ಅಮೆರಿಕನ್ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿರುವುದಾಗಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

ಯುದ್ಧದ ನಿಯಮಗಳು ಬದಲಾಗಿವೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಇರಾನ್ ವಿರುದ್ಧದ ತನ್ನ ಯುದ್ಧದಲ್ಲಿ ನಿಯಮಗಳು ಬದಲಾಗಿವೆ ಎಂಬುದನ್ನು ಸಮಯ ಮೀರುವ ಮುನ್ನ ಅಮೆರಿಕ ಅರ್ಥ ಮಾಡಿಕೊಳ್ಳಬೇಕು ಎಂದು ಇರಾನ್ ಎಚ್ಚರಿಕೆ ನೀಡಿದೆ.

ಇಂದಿನಿಂದ, ಇರಾನ್‍ನ ಹಿತಾಸಕ್ತಿಗಳು ಮತ್ತು ಭದ್ರತೆಯ ವಿರುದ್ಧದ ಯಾವುದೇ ದಾಳಿಗೆ ವೇಗದ, ಭಾರಿ ಮತ್ತು ಇನ್ನಷ್ಟು ನೋವಿನ ಪ್ರತ್ಯುತ್ತರ ಸಿಗಲಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಹೇಳಿದ್ದಾರೆ.

ಅಮೆರಿಕದ ಆರ್ಥಿಕ ಒತ್ತಡಕ್ಕೆ ಸುಧಾರಣೆಗಳ ಮೂಲಕವೇ ಉತ್ತರ ನೀಡಲು ಇರಾನ್ ಯೋಜಿಸಿದೆ. ದೇಶದ ಆರ್ಥಿಕತೆಯ ಮೇಲೆ ಒತ್ತಡ ಹಾಕುವುದರಿಂದ ಅಲ್ಲಿನ ಜನರ ನಿರ್ಧಾರವನ್ನು ಬದಲಿಸಬಹುದು ಎಂಬ ಕಲ್ಪನೆಯನ್ನು ಇರಾನ್ ತಿರಸ್ಕರಿಸಿದೆ ಎಂದು ಇರಾನ್‍ನ ಆರ್ಥಿಕ ಸಚಿವ ಅಲಿ ಮದನಿಜಾದೆ ತಿಳಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor