ಅರ್ಮೇನಿಯಾಕ್ಕೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ | ಭಾರತಕ್ಕೆ ಅಜೆರ್ಬೈಜಾನ್ ಆಗ್ರಹ

Update: 2024-04-25 17:17 GMT

PC : WIKIPEDIA

ಬಾಕು: ತನ್ನ ಸಾಂಪ್ರದಾಯಿಕ ಎದುರಾಳಿ ಅರ್ಮೇನಿಯಾಕ್ಕೆ ಶಸ್ತ್ರಾಸ್ತ್ರ ಸಹಿತ ರಕ್ಷಣಾ ಸಾಧನಗಳನ್ನು ಪೂರೈಸುವುದರಿಂದ ಅಜೆರ್ಬೈಜಾನ್‍ನ ರಾಷ್ಟ್ರೀಯ ಭದ್ರತೆಗೆ ತೀವ್ರ ಅಪಾಯ ಎದುರಾಗಿದೆ. ಆದ್ದರಿಂದ ಶಸ್ತ್ರಾಸ್ತ್ರ ಪೂರೈಕೆ ತಕ್ಷಣ ನಿಲ್ಲಿಸುವಂತೆ ಅಧ್ಯಕ್ಷ ಇಲ್ಹಾನ್ ಅಲಿಯೆವ್ ಅವರು ಭಾರತ ಸೇರಿದಂತೆ ದೇಶಗಳನ್ನು ಆಗ್ರಹಿಸಿದ್ದಾರೆ.

ಇದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ಫ್ರಾನ್ಸ್, ಭಾರತ ಮತ್ತು ಗ್ರೀಸ್ ದೇಶಗಳು ಅರ್ಮೇನಿಯಾವನ್ನು ಆಯುಧೀಕರಣಗೊಳಿಸುವುದನ್ನು ನೋಡುತ್ತಾ ಸುಮ್ಮನೆ ಕೂರಲಾಗದು ಎಂದವರು ಹೇಳಿದ್ದಾರೆ.

ನಮ್ಮ ಆಕ್ಷೇಪ ಮತ್ತು ಕಳವಳವನ್ನು ಅರ್ಮೇನಿಯಾ ಸರಕಾರ ಹಾಗೂ ಅವರಿಗೆ ಶಸ್ತ್ರಾಸ್ತ್ರ ಪೂರೈಸುವ ಇತರ ದೇಶಗಳಿಗೆ ಬಹಿರಂಗವಾಗಿ ತಿಳಿಸಿದ್ದೇವೆ. ಶಸ್ತ್ರಾಸ್ತ್ರ ಪೂರೈಕೆಯ ಅಪಾಯ ಮುಂದುವರಿದರೆ ಅಜೆರ್ಬೈಜಾನ್ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.

ಅರ್ಮೇನಿಯಾ ಇತ್ತೀಚಿನ ದಿನಗಳಲ್ಲಿ ತನ್ನ ರಕ್ಷಣಾ ಸಾಮಥ್ರ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದು ಕಡಿಮೆ ದೂರ ವ್ಯಾಪ್ತಿಯ ಕ್ಷಿಪಣಿ, ಡ್ರೋನ್ ನಿರೋಧಕ ವ್ಯವಸ್ಥೆ ಸಹಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತವು ಆಕಾಶ್ ಕ್ಷಿಪಣಿ, ಪಿನಾಕಾ ರಾಕೆಟ್ ಉಡಾವಣಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವ ಪ್ರಮುಖ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.

ಅವರು (ಅರ್ಮೇನಿಯಾ) ನಮ್ಮ ವಿರುದ್ಧ ಮಿಲಿಟರಿ ಬಲವನ್ನು ಹೆಚ್ಚಿಸಿಕೊಳ್ಳುತ್ತಿರುವಾಗ, ನಮ್ಮ ಗಡಿಭಾಗದಲ್ಲಿ ಅವರ ಪಡೆಗಳನ್ನು ಕೇಂದ್ರೀಕರಿಸುತ್ತಿರುವಾಗ ನಾವು ಸುಮ್ಮನಿರಲು ಆಗುವುದಿಲ್ಲ. ಇದು ನಮ್ಮ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದ್ದು ನಾವು ಕ್ರಮ ಕೈಗೊಳ್ಳಲೇ ಬೇಕಿದೆ ಎಂದು ಅಧ್ಯಕ್ಷ ಇಲ್ಹಾನ್ ಅಲಿಯೆವ್ ಹೇಳಿದ್ದಾರೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ ಭಾರತದ ರಾಯಭಾರಿಯ ಜತೆ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲೂ ಅಲಿಯೇವ್ ಇದೇ ವಿಷಯವನ್ನು ಪ್ರಸ್ತಾವಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News