ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ | ಮೃತರ ಸಂಖ್ಯೆ 38ಕ್ಕೆ ಏರಿಕೆ; ಹಲವು ಕಟ್ಟಡಗಳು ನೆಲಸಮ
Photo Credit : NDTV
ಜಕಾರ್ತಾ, ಆ. 15 : ಶನಿವಾರ ಪೂರ್ವ ಇಂಡೋನೇಷ್ಯಾದ ಕರಾವಳಿಯಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 38 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ನೇಯ ಏಷ್ಯಾದ ಈ ದೇಶದಲ್ಲಿ ಮುಂಜಾನೆ ಸಂಭವಿಸಿದ ಭೂಕಂಪನದ ನಂತರ ಹಲವಾರು ಪ್ರದೇಶಗಳಲ್ಲಿ ಸುಮಾರು 1 ಮೀಟರ್ ಎತ್ತರದ ಸುನಾಮಿ ಅಲೆಗಳು ದಾಖಲಾಗಿವೆ. ಭೂಕಂಪ ಸಂಭವಿಸಿದ ಸುಮಾರು ಮೂರು ಗಂಟೆಗಳ ನಂತರ ಸುನಾಮಿ ಎಚ್ಚರಿಕೆಯನ್ನು ಹಿಂಪಡೆಯಲಾಯಿತು.
ಮಧ್ಯಾಹ್ನದ ವೇಳೆಗೆ ದಾಖಲಾದ ಅಂಕಿ-ಅಂಶಗಳ ಪ್ರಕಾರ 38 ಜನರು ಮೃತಪಟ್ಟಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು 11 ಜನರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸುಮಾರು 2,000 ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಸುಹಯಾರ್ಂಟೊ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂದರು ನಗರವಾದ ಮೌಮೇರ್ನಲ್ಲಿ ರಕ್ಷಣಾ ಸಿಬ್ಬಂದಿ 20 ಮೃತದೇಹಗಳನ್ನು ಪತ್ತೆ ಮಾಡಿದ್ದು, ಆರು ಜನರು ಗಾಯಗೊಂಡಿದ್ದಾರೆ ಮತ್ತು ಇಬ್ಬರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಭೂಕಂಪ ಪೀಡಿತ ಪ್ರದೇಶಗಳ ಹಲವು ಕಟ್ಟಡಗಳಲ್ಲಿ ನಿವಾಸಿಗಳು ಸಿಲುಕಿಕೊಂಡಿರುವ ಮತ್ತು ಹಲವು ರಸ್ತೆಗಳು ಭೂಕುಸಿತದಿಂದ ಬಂದ್ ಆಗಿರುವ ಬಗ್ಗೆ ವರದಿಗಳು ಬಂದಿವೆ ಎಂದು ಸುಹಯಾರ್ಂಟೊ ತಿಳಿಸಿದ್ದಾರೆ.
ಭೂಕಂಪದ ಕೇಂದ್ರಬಿಂದುವಿಗೆ ಅತ್ಯಂತ ಹತ್ತಿರದಲ್ಲಿರುವ ನಾಗೇಕಿಯೊ ಪ್ರದೇಶವನ್ನು ತಂಡಗಳು ಇನ್ನೂ ತಲುಪಲಾಗಿಲ್ಲ ಹಾಗೂ ಅಲ್ಲಿ ಸಂಪರ್ಕ ವ್ಯವಸ್ಥೆ ಹಾನಿಗೊಳಗಾಗಿದೆ. ನಾಗೇಕಿಯೊದಲ್ಲಿನ ಸುಮಾರು 2,000 ನಿವಾಸಿಗಳನ್ನು ತೆರವುಗೊಳಿಸಲಾಗಿದ್ದು, ಹಲವಾರು ಮನೆಗಳು, ಗೋದಾಮುಗಳು ಮತ್ತು ಸರ್ಕಾರಿ ಸೌಲಭ್ಯಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಮತ್ತೊಂದು ಭೂಕಂಪ
ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ ಶನಿವಾರ ಸಂಜೆ 4:24ಕ್ಕೆ (ಭಾರತೀಯ ಕಾಲಮಾನ) 6.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಈ ಭೂಕಂಪವು ಭೂಮಿಯ ಮೇಲ್ಮೈಗಿಂತ 165 ಕಿ.ಮೀ ಆಳದಲ್ಲಿ ಸಂಭವಿಸಿದ್ದು ತಕ್ಷಣಕ್ಕೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ. ಶನಿವಾರ ವರದಿಯಾದ ಎರಡು ಭೂಕಂಪಗಳು ಒಂದೇ ಘಟನೆಯಲ್ಲ. ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ಬಳಿ 7.7 ತೀವ್ರತೆಯ ಪ್ರಾಣಾಂತಿಕ ಭೂಕಂಪ ಸಂಭವಿಸಿದ್ದರೆ, 6.5 ತೀವ್ರತೆಯ ಭೂಕಂಪವು ಹೆಚ್ಚು ಆಳದಲ್ಲಿ ಮತ್ತು ಬೇರೆ ಸ್ಥಳದಲ್ಲಿ ದಾಖಲಾಗಿದೆ.