×
Ad

ಸಿರಿಯಾ: ಭದ್ರತಾ ಪಡೆ ಜತೆ ಅಸ್ಸಾದ್ ನಿಷ್ಟರ ಸಂಘರ್ಷ; 70ಕ್ಕೂ ಹೆಚ್ಚು ಮಂದಿ ಸಾವು, ಹಲವರಿಗೆ ಗಾಯ

Update: 2025-03-07 22:48 IST

Photo Credit | AP

ದಮಾಸ್ಕಸ್: ಸಿರಿಯಾದಲ್ಲಿ ಪದಚ್ಯುತ ಅಧ್ಯಕ್ಷ ಬಷರ್ ಅಲ್-ಅಸ್ಸಾದ್‍ಗೆ ನಿಷ್ಟರಾಗಿರುವ ಪಡೆಗಳು ಹಾಗೂ ಸರ್ಕಾರಿ ಪಡೆಗಳ ನಡುವೆ ಭುಗಿಲೆದ್ದ ಸಂಘರ್ಷದಲ್ಲಿ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಕನಿಷ್ಟ 20 ಮಂದಿ ಗಾಯಗೊಂಡಿರುವುದಾಗಿ ಮಾನವ ಹಕ್ಕುಗಳ ಸಿರಿಯಾ ವೀಕ್ಷಣಾಲಯದ ಮೂಲಗಳು ಶುಕ್ರವಾರ ವರದಿ ಮಾಡಿವೆ.

ಸಿರಿಯಾ ಕರಾವಳಿಯಲ್ಲಿ ರಕ್ಷಣಾ ಸಚಿವಾಲಯದ ಪಡೆಗಳು ಮತ್ತು ಪದಚ್ಯುತ ಆಡಳಿತದ ಸೇನೆಗೆ ನಿಷ್ಟರಾಗಿರುವ ಸಶಸ್ತ್ರ ಹೋರಾಟಗಾರರ ನಡುವೆ ನಡೆದ ಘರ್ಷಣೆ ಮತ್ತು ಹೊಂಚುದಾಳಿಯಲ್ಲಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಕರಾವಳಿಯ ಜಬ್ಲೇಹ್ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರದಿಂದ ಮುಂದುವರಿದಿರುವ ಘರ್ಷಣೆ ಡಿಸೆಂಬರ್‍ನಲ್ಲಿ ಅಸ್ಸಾದ್ ಪದಚ್ಯುತಗೊಂಡ ಬಳಿಕ ಸಿರಿಯಾದಲ್ಲಿ ವರದಿಯಾದ ಅತ್ಯಂತ ಹಿಂಸಾತ್ಮಕ ಘರ್ಷಣೆಯಾಗಿದೆ ಎಂದು ವರದಿ ಹೇಳಿದೆ.

ಅಸ್ಸಾದ್‍ಗೆ ನಿಷ್ಟವಾಗಿರುವ ಸಶಸ್ತ್ರ ಹೋರಾಟಗಾರರ ಗುಂಪಿನ ದಾಳಿಯಲ್ಲಿ 16 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರೆ, ಅಸ್ಸಾದ್ ಪರ ಗುಂಪಿನ 28 ಹೋರಾಟಗಾರರು ಮತ್ತು ನಾಲ್ವರು ನಾಗರಿಕರೂ ಮೃತಪಟ್ಟಿದ್ದಾರೆ. ಅಸ್ಸಾದ್ ಅವರ ಕಟ್ಟಾಬೆಂಬಲಿಗರಾದ ಅಲವೈಟ್ ಅಲ್ಪಸಂಖ್ಯಾತರ ಭದ್ರಕೋಟೆ ಎನಿಸಿರುವ ಕರಾವಳಿ ನಗರ ಲಟಾಕಿಯಾ ಪ್ರಾಂತದಲ್ಲಿ ಹೆಚ್ಚಿನ ಸಾವುನೋವು ಸಂಭವಿಸಿದೆ. ಜಬ್ಲೆಹ್ ಪ್ರದೇಶದಲ್ಲಿ ಯೋಜಿತ ಮತ್ತು ಪೂರ್ವ ನಿಯೋಜಿತ ದಾಳಿಯಲ್ಲಿ ಅಸ್ಸಾದ್ ಪರ ಸಶಸ್ತ್ರ ಹೋರಾಟಗಾರರು ನಮ್ಮ ಚೆಕ್‍ಪಾಯಿಂಟ್ ಹಾಗೂ ನೆಲೆಗಳ ಮೇಲೆ ಆಕ್ರಮಣ ನಡೆಸಿದ್ದಾರೆ. ಸರ್ಕಾರದ ಭದ್ರತಾ ಪಡೆಯಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಈ ಹಿಂದೆ ಬಂಡುಕೋರರ ಭದ್ರಕೋಟೆ ಎನಿಸಿದ್ದ ವಾಯವ್ಯ ಸಿರಿಯಾದ ಇಡ್ಲಿಬ್‍ನಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮರುಸ್ಥಾಪನೆಗೆ ಮತ್ತು ಸ್ಥಳೀಯ ಜನರ ರಕ್ಷಣೆಗೆ ಆದ್ಯತೆ ನೀಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಕಾರ್ಯಾಚರಣೆ ಸಂದರ್ಭ ಅಸ್ಸಾದ್ ಅವರ ಕುಟುಂಬದ ಅತ್ಯಂತ ವಿಶ್ವಾಸಾರ್ಹ ಭದ್ರತಾ ಏಜೆನ್ಸಿ `ವಾಯುಪಡೆ ಗುಪ್ತಚರ ಇಲಾಖೆ'ಯ ಮಾಜಿ ಮುಖ್ಯಸ್ಥ ಇಬ್ರಾಹಿಂ ಹುವೈಜಾರನ್ನು ಭದ್ರತಾ ಪಡೆ ಬಂಧಿಸಿರುವುದಾಗಿ ಸರ್ಕಾರಿ ಸ್ವಾಮ್ಯದ `ಸನಾ' ಸುದ್ದಿಸಂಸ್ಥೆ ವರದಿ ಮಾಡಿದೆ. `ಜಬ್ಲೆಹ್ ನಗರದಲ್ಲಿ ನಮ್ಮ ಪಡೆಗಳು `ಕ್ರಿಮಿನಲ್ ಜನರಲ್' ಇಬ್ರಾಹಿಂ ಹುವೈಜಾರನ್ನು ಬಂಧಿಸಲು ಯಶಸ್ವಿಯಾಗಿದೆ. 1987ರಿಂದ 2002ರವರೆಗೆ ವಾಯುಪಡೆ ಗುಪ್ತಚರ ದಳದ ಮುಖ್ಯಸ್ಥರಾಗಿದ್ದ ಹುವೈಜಾ ಈ ಹಿಂದಿನ ಆಡಳಿತದ ಅವಧಿಯಲ್ಲಿ ನೂರಾರು ಹತ್ಯೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ ' ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಲಟಾಕಿಯಾ, ಟಾರ್ಟೌಸ್‍ನಲ್ಲಿ ಕಫ್ರ್ಯೂ ಜಾರಿ:

ಅಸ್ಸಾದ್ ನಿಷ್ಟ ಪಡೆ ಹಾಗೂ ಸರ್ಕಾರಿ ಪಡೆಗಳ ನಡುವೆ ಘರ್ಷಣೆ ತೀವ್ರಗೊಂಡಿರುವ ವಾಯವ್ಯ ಬಂದರು ಪಟ್ಟಣ ಲಟಾಕಿಯಾ ಹಾಗೂ ಸಮೀಪದ ಟಾರ್ಟೌಸ್‍ನಲ್ಲಿ ಕಫ್ರ್ಯೂ ಜಾರಿಗೊಳಿಸಿರುವುದಾಗಿ ವರದಿಯಾಗಿದೆ.

ಅಲವೈಟ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಲಟಾಕಿಯಾ, ಟಾರ್ಟೌಸ್ ಮತ್ತು ಹೋಮ್ಸ್ ನಗರಗಳಲ್ಲಿ ಗುರುವಾರ ರಾತ್ರಿಯಿಂದ ಕಫ್ರ್ಯೂ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಟಾಕಿಯಾ, ಬಿಯೆತ್ ಅನಾ ನಗರ ಹಾಗೂ ಸುತ್ತಮುತ್ತಲಿನ ದಟ್ಟಾರಣ್ಯಗಳಲ್ಲಿ ಅಡಗಿ ಕುಳಿತು ಹೊಂಚು ದಾಳಿ ನಡೆಸುತ್ತಿರುವ ಅಸ್ಸಾದ್ ನಿಷ್ಟ ಸಶಸ್ತ್ರ ಹೋರಾಟಗಾರರ ವಿರುದ್ಧ ವಾಯುಪಡೆಯ ಹೆಲಿಕಾಪ್ಟರ್‍ಗಳು ದಾಳಿ ನಡೆಸಿವೆ. ಜತೆಗೆ ನೆರೆಯ ಗ್ರಾಮದಲ್ಲಿ ಫಿರಂಗಿ ಪಡೆಯ ದಾಳಿಯೂ ಮುಂದುವರಿದಿದೆ. ಜಬ್ಲೇಹ್ ಪ್ರದೇಶದಲ್ಲಿ ಹೆಚ್ಚುವರಿ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News